ನಾಪೋಕ್ಲು, ಆ. ೧೭: ರಾಜ್ಯದ ಹಲವು ಭಾಗಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು ಮಹಿಳೆಯರ ಸಬಲೀಕರಣಕ್ಕೆ ಕಾರಣವಾಗಿದೆ ಎಂದು ನಾಪೋಕ್ಲು ಪೊಲೀಸ್ ಠಾಣೆಯ ಠಾಣಾಧಿಕಾರಿ ಮಂಜುನಾಥ್ ಹೇಳಿದರು. ಭಗವತಿ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ನಾಪೋಕ್ಲು ಸುಭಾಷ್ ನಗರ ಕಾರ್ಯಕ್ಷೇತ್ರದ ಒಕ್ಕೂಟ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಉತ್ತಮ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ. ಕಾರ್ಯಕರ್ತರು ಕೈಗೊಳ್ಳುತ್ತಿರುವ ಕಾರ್ಯ ಶ್ಲಾಘನೀಯ. ಹಲವು ಭಾಗಗಳಲ್ಲಿ ಸಂಘಗಳು ಕ್ರಿಯಾಶೀಲವಾಗಿವೆ. ಕೆಲವೆಡೆ ಅರಿವಿನ ಕೊರತೆಯಿಂದ ಹೆಚ್ಚಿನ ಪ್ರಗತಿ ಸಾಧಿಸಿಲ್ಲ. ಈ ಸಂಘವು ೩೦ ಲಕ್ಷ ಉಳಿತಾಯ ಮಾಡಿದ್ದು ಹೆಮ್ಮೆಯ ವಿಚಾರ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಇರುವ ಸಂಘಗಳು ಗ್ರಾಮೀಣ ಕುಟುಂಬಗಳನ್ನು ಒಗ್ಗೂಡಿಸಲು ನೆರವಾಗಿವೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಅರುಣ್ ಬೇಬ ಮಾತನಾಡಿ ಸಮಾಜದಲ್ಲಿ ಶೋಷಿತ ವ್ಯಕ್ತಿಗೂ ಪಕ್ಷಾತೀತವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೆರವು ನೀಡಲಾಗುತ್ತಿದೆ ಎಂದರು. ಮೇಲ್ವಿಚಾರಕ ಸುನಿಲ್ ಮಾತನಾಡಿ, ಬ್ಯಾಂಕಿನವರು ಸಂಘಕ್ಕೆ ಸಹಾಯಧನ ನೀಡುವ ಮೂಲಕ ಮಹಿಳೆಯರ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ಒಕ್ಕೂಟದ ಅಧ್ಯಕ್ಷೆ ಮುತ್ತುರಾಣಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಮಾಲಿನಿ, ಒಕ್ಕೂಟದ ಉಪಾಧ್ಯಕ್ಷ ಬೋಜಮ್ಮ, ಪೊಲೀಸ್ ಸಿಬ್ಬಂದಿ ಷರೀಫ್, ಸೇವಾ ಪ್ರತಿನಿಧಿ ಉಮಾಲಕ್ಷಿö್ಮ, ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.