ಭಾಗಮಂಡಲ/ನಾಪೋಕ್ಲು, ಆ. ೧೮: ವಿವಿಧ ಉತ್ಪನ್ನಗಳಿಗೆ ಬೈನೆಮರದ ಕಾಯಿಯನ್ನು ಮಿಶ್ರಣ ಮಾಡುವ ಉದ್ದೇಶದಿಂದ ಕೇರಳದಿಂದ ಬಂದು ಇಲ್ಲಿ ಕಾಯಿ ಕೀಳುತ್ತಿದ್ದ ಅಪರಿಚಿತರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಶುಕ್ರವಾರ ಬೆಳಗಿನ ಜಾವ ಬೈನೆಮರದ ಕಾಯಿಗಳನ್ನು ಕೀಳಲು ದೊಡ್ಡಪುಲಿಕೋಟು ಗ್ರಾಮಕ್ಕೆ ಕೇರಳ ರಾಜ್ಯದ ಕೆಲವು ವ್ಯಕ್ತಿಗಳು ಬಂದ ಸಂದರ್ಭ ಗ್ರಾಮಸ್ಥರು ವಿಚಾರಣೆಗೆ ಒಳಪಡಿಸಿದ್ದಾರೆ.
ಕೆಎಲ್-೫೯-ಕ್ಯೂ-೧೧೦೦ ನೋಂದಾವಣಿ ವಾಹನದಲ್ಲಿ ಅಯ್ಯಂಗೇರಿ ಗ್ರಾಮದ ನಿವಾಸಿ ಕುಂಞ ಅಬ್ದುಲ್ಲ ಹಾಗೂ ಕೊಡ್ಲಿಪೇಟೆಯ ದಾವೂದ್ ಅವರ ಜೊತೆ ಕೇರಳದ ವಯನಾಡು ಮತ್ತು ಮಾನಂದವಾಡಿ ಕಾರ್ಮಿಕರು ಬಂದು ಸ್ಥಳೀಯ ರೈತರನ್ನು ಸಂಪರ್ಕಿಸಿದ ಸಂದರ್ಭ ಪುಲಿಕೋಟು ನಿವಾಸಿ ಕಾಫಿ ಬೆಳೆಗಾರ ಕರವಂಡ ಲವ ನಾಣಯ್ಯ ಮತ್ತು ಇತರರು ಈ ಬಗ್ಗೆ ಪ್ರಶ್ನಿಸಿದ್ದಾರೆ.
ಆ ಸಂದರ್ಭ ಕೇರಳದವರು ಇದನ್ನು ಕೊಡಗಿನ ವಿವಿಧ ಭಾಗಗಳಿಂದ ಬೈನೆಮರದ ಕಾಯಿಗಳನ್ನು ಸಂಗ್ರಹಿಸಿ ಕೇರಳಕ್ಕೆ ತೆಗೆದುಕೊಂಡು ಹೋಗಿ ಒಣಗಿಸಿ ಬಳಿಕ ವಿವಿಧ ಉತ್ಪನ್ನ ಗಳೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡಲಿರುವುದಾಗಿ ತಿಳಿಸಿದ್ದಾರೆ.
ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಕೇರಳದ ೮ ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೇರಳದ ವ್ಯಾಪಾರಿಗಳು ವಿವಿಧ ವಾಹನಗಳಲ್ಲಿ ಕೊಡಗಿಗೆ ಬಂದು ಅಲ್ಪ ಬೆಲೆ ನೀಡಿ ಬೈನೆಮರದ ಕಾಯಿ (ಪೊನೆಕಾಯಿ) ಖರೀದಿಸುವುದು ಅಲ್ಲಲ್ಲಿ ಕಂಡುಬರುತ್ತಿದೆ.
(ಮೊದಲ ಪುಟದಿಂದ) ಅದನ್ನು ಒಳ್ಳೆಯ ಅಡಿಕೆಗೆ ಮಿಶ್ರ ಮಾಡಿ ಮಾರಾಟ ಮಾಡಲಾಗುತ್ತಿದೆ. ಆದ್ದರಿಂದ ಅಂತವರನ್ನು ಕಂಡಾಗ ವಿಚಾರಣೆ ನಡೆಸಿ ಖರೀದಿಸಲು ಅವಕಾಶ ನೀಡಬಾರದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ನಿನ್ನೆ ದಿನ ಹುದಿಕೇರಿಯಲ್ಲೂ ವ್ಯಾಪಾರಿಗಳ ತಂಡ ಈ ಕೃತ್ಯದಲ್ಲಿ ತೊಡಗಿದ್ದರು. ಕಲಬೆರಕೆ ಮಾಡುವುದರ ಮೂಲಕ ಕೊಡಗಿನ ಅಡಿಕೆ, ಕಾಳುಮೆಣಸು ಇನ್ನಿತರ ಉತ್ಪನ್ನಗಳು ಗುಣಮಟ್ಟ ಕಳೆದುಕೊಳ್ಳುವಂತೆ ಆಗಲಿದೆ. ಈ ಬಗ್ಗೆ ರೈತರು ಎಚ್ಚರದಿಂದಿರಬೇಕು ಹಾಗೂ ಇಂತಹ ತಿರುಗಾಡಿ ವ್ಯಾಪಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಸಂದರ್ಭ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುಕ್ಕಾಟಿರ ಸುತನ್ ಸುಬ್ಬಯ್ಯ, ಚಂಗಪ್ಪ, ಕರವಂಡ ಅಪ್ಪಣ್ಣ, ಮಾಚಯ್ಯ, ಸುರೇಶ್, ಬೆಳ್ಳಿಯಪ್ಪ, ಪೆಬ್ಬೆಟ್ಟಿರ ಯತೀಶ್ ಇನ್ನಿತರರಿದ್ದರು.
-ಸುನಿಲ್ ಕುಯ್ಯಮುಡಿ/ದುಗ್ಗಳ ಸದಾನಂದ