ಸಿದ್ದಾಪುರ, ಆ. ೧೫: ಅರೆಕಾಡು ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ ಸಲಗವೊಂದನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಅರೆಕಾಡು ಗ್ರಾಮದ ನೇತಾಜಿ ನಗರದ ಬಳಿ ದೇವಪ್ಪ ಎಂಬವರನ್ನು ಒಂಟಿ ಸಲಗವೊಂದು ದಾಳಿ ನಡೆಸಿ ದಂತದಿAದ ತಿವಿದು ಹತ್ಯೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆ ಹಿಡಿಯುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಬೋಸರಾಜುರವರ ಮೇಲೆ ಒತ್ತಡ ಹೇರಿದ್ದರು. ಉಸ್ತುವಾರಿ ಸಚಿವರು ಸ್ಥಳದಲ್ಲಿದ್ದ ಅರಣ್ಯ ಇಲಾಖಾಧಿಕಾರಿಗಳಿಗೆ ಸಲಗವನ್ನು ಸೆರೆಹಿಡಿಯಲು ನಿರ್ದೇಶನ ನೀಡಿದ್ದರು. ಇದರಿಂದಾಗಿ ಕಳೆದ ಎರಡು ದಿನಗಳಿಂದ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಅರೆಕಾಡು, ಅಭ್ಯತ್‌ಮಂಗಲ, ಅತ್ತಿಮಂಗಲ ಭಾಗದಲ್ಲಿ ಸಾಕಾನೆಗಳಾದ ಹರ್ಷ,

(ಮೊದಲ ಪುಟದಿಂದ) ಭೀಮಾ, ಅಭಿಮನ್ಯು, ಸುಗ್ರೀವಾ ಈ ನಾಲ್ಕು ಆನೆಗಳ ನೆರವಿನಿಂದ ಕಾಫಿ ತೋಟದೊಳಗೆ ಕಾರ್ಯಾಚರಣೆ ನಡೆಸಿದರು. ಆದರೆ ಅರಣ್ಯ ಇಲಾಖಾಧಿಕಾರಿಗಳು ಗುರುತಿಸಿದ ಸಲಗವು ತಪ್ಪಿಸಿಕೊಂಡು ಓಡಾಡುತ್ತಿತ್ತು. ಆದರೆ ಮಂಗಳವಾರದAದು ಬೆಳಗ್ಗಿನಿಂದಲೇ ಕಾರ್ಯಾಚರಣೆ ನಡೆಸಿದ ಕಾರ್ಯಾಚರಣೆ ತಂಡಕ್ಕೆ ಅರೆಕಾಡು ಗ್ರಾಮದ ಮದುರ ಕುಪ್ಪ ಕಾಫಿ ತೋಟದಲ್ಲಿ ಕಂಡುಬAದಿತ್ತು. ಕೂಡಲೇ ಸಾಕಾನೆಗಳು ಸುತ್ತುವರೆದವು. ತಕ್ಷಣವೇ ವನ್ಯಜೀವಿ ವೈದ್ಯಾಧಿಕಾರಿ ಡಾ. ರಮೇಶ್ ಹಾಗೂ ಶೂಟರ್ ರಂಜನ್ ಅರವಳಿಕೆ ಪ್ರಯೋಗಿಸಿದರು. ಚುಚ್ಚುಮದ್ದು ತಗಲಿದ ಕೂಡಲೇ ಸಲಗವು ಕಾಫಿ ತೋಟದೊಳಗೆ ಸುತ್ತಾಡಿ ನಂತರ ನೆಲಕ್ಕೆ ಉರುಳಿ ಬಿದ್ದಿತು. ಅಂದಾಜು ೧೮ ವರ್ಷ ಪ್ರಾಯದ ಸಲಗವನ್ನು ದೊಡ್ಡ ಹಗ್ಗದಿಂದ ಕಟ್ಟಿ ನೀರು ಸುರಿದು ನಂತರ ಸಾಕಾನೆಗಳ ನೆರವಿನಿಂದ ಸೆರೆಹಿಡಿದ ಸಲಗವನ್ನು ಮೇಲಕ್ಕೆ ಎತ್ತಿ ಎಳೆದು ತರಲಾಯಿತು.

ಸೆರೆಹಿಡಿದ ಸಲಗವು ಎಳೆದು ತರುವ ಸಂದರ್ಭದಲ್ಲಿ ತೋಟದೊಳಗಿನಿಂದ ಬರಲು ಹಿಂದೇಟು ಹಾಕುತ್ತಿತ್ತು. ಆದರೆ, ಕಾಡಾನೆಗಳನ್ನು ಸೆರೆಹಿಡಿದು ಅನುಭವವನ್ನು ಹೊಂದಿರುವ ಅಭಿಮನ್ಯು ಹಿಂಭಾಗದಿAದ ದೂಡುತ್ತಾ ಲಾರಿಯ ಬಳಿ ಕರೆ ತಂದಿತು. ನಂತರ ಕ್ರೇನ್ ಮೂಲಕ ಸಾಕಾನೆಗಳ ನೆರವಿನಿಂದ ಲಾರಿಗೆ ಹತ್ತಿಸಲಾಯಿತು.

ಲಾರಿಗೆ ಹತ್ತಿಸಿದ ಬಳಿಕ ದುಬಾರೆ ಸಾಕಾನೆ ಶಿಬಿರಕ್ಕೆ ರವಾನಿಸಲಾಯಿತು. ಲಾರಿಯ ಒಳಗೆ ಇದ್ದ ಸಲಗವು ಕೋಪದಿಂದ ಲಾರಿಯ ಕಬ್ಬಿಣದ ಸಲಕೆಗೆ ದಂತದಿAದ ಗುದ್ದುತ್ತ ತನ್ನ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದುದು ಕಂಡು ಬಂತು.

ಕಾರ್ಯಾಚರಣೆ ನಡೆಸಿ ಸೆರೆಹಿಡಿದ ಸಲಗವನ್ನು ವೀಕ್ಷಿಸಲು ಜನ ಜಂಗುಳಿ ಸೇರಿತ್ತು. ಕಾರ್ಯಾಚರಣೆ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಶ್ ಮಾಲ್ಕಡೆ, ಡಿ.ಸಿ.ಎಫ್. ಎ.ಪಿ. ಪೂವಯ್ಯ ಮಾರ್ಗದರ್ಶನದಲ್ಲಿ ಎಸಿಎಫ್ ಮೊಹಿಸ್ಸಿನ್, ಎ.ಎ. ಗೋಪಾಲ್, ಟಾಸ್ಕ್ಫೋರ್ಸ್ ವಿಭಾಗದ ಅಧಿಕಾರಿ ಚಂಗಪ್ಪ, ವಲಯ ಅರಣ್ಯಾಧಿಕಾರಿಗಳಾದ ಹನುಮಂತರಾಜು, ಅನನ್ಯಕುಮಾರ್, ಕೆ.ವಿ. ಶಿವರಾಂ, ಹಿರಿಯ ವನ್ಯಜೀವಿ ವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ, ಉಪವಲಯ ಅರಣ್ಯಾಧಿಕಾರಿ ಸುಬ್ರಾಯ, ರಂಜನ್, ಸಂಜು ಹಾಗೂ ಅರಣ್ಯ ಸಿಬ್ಬಂದಿಗಳು ಆರ್.ಆರ್.ಟಿ. ತಂಡ, ಕಾವಾಡಿಗಳು ಸೇರಿ ೧೦೦ಕ್ಕೂ ಅಧಿಕಾರಿ ಮಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. (ವಾಸು)ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ದೇವಪ್ಪ ಅವರ ಮನೆಗೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಅಲ್ಲದೇ ಮೃತ ಕುಟುಂಬದವರಿAದ ಮಾಹಿತಿ ಕಲೆ ಹಾಕಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎ.ಎಸ್. ಪೊನ್ನಣ್ಣ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ದೇವಪ್ಪನವರ ಕುಟುಂಬ ವರ್ಗ ನೋವಿನಲ್ಲಿದೆ. ಜಿಲ್ಲೆಯಲ್ಲಿ ಕಳೆದ ೨೦ ವರ್ಷಗಳಿಂದ ಆನೆ - ಮಾನವ ಸಂಘರ್ಷ ನಡೆಯುತ್ತಿದೆ. ಆದರೆ ಸರ್ಕಾರಗಳು ಶಾಶ್ವತ ಯೋಜನೆ ರೂಪಿಸಿಲ್ಲ. ಇದೀಗ ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಜಿಲ್ಲೆಯಲ್ಲಿ ವನ್ಯಜೀವಿಗಳ ಹಾವಳಿ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯುವುದಾಗಿ ತಿಳಿಸಿದರು.

ಉಪಟಳ ನೀಡುತ್ತಿರುವ ಕಾಡಾನೆಗಳ ಸೆರೆಗೆ ಮುಂದಾಗಿದೆ, ಈ ಹಿಂದಿನ ವರ್ಷಗಳಲ್ಲಿ ಕಾಡಾನೆಗಳ ಹಾವಳಿಗಳನ್ನು ತಡೆಗಟ್ಟಬೇಕಿತ್ತು. ಇದರ ನಿರ್ಲಕ್ಷö್ಯದ ಪರಿಣಾಮ ಜಿಲ್ಲೆಯ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡು ಬಿಟ್ಟಿವೆ. ಕಾಫಿ ತೋಟಗಳ ಒಳಗೆ ಅಂದಾಜು ೨೦೦ಕ್ಕೂ ಅಧಿಕ ಕಾಡಾನೆಗಳು ಬೀಡು ಬಿಟ್ಟಿವೆ ಎಂದರು. ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ತಡೆಗಟ್ಟಲು ಈಗಾಗಲೇ ಆನೆ ಕಾರ್ಯಪಡೆಯನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ ಮಿತಿಮೀರಿದ ಕಾಡಾನೆ ಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿಗಳ ಹಾಗೂ ಅರಣ್ಯ ಇಲಾಖಾಧಿಕಾರಿ, ಸಚಿವರ ಗಮನಕ್ಕೆ ತರಲಾಗಿದೆ ಹಾಗೂ ಶಾಸನ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ವೀರಾಜಪೇಟೆ ತಾಲೂಕಿನಲ್ಲಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ೫೦ ಕಾಡಾನೆಗಳನ್ನು ಸೆರೆ ಹಿಡಿಯಲು ಈಗಾಗಲೇ ಅರಣ್ಯ ಇಲಾಖಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದ್ದಾರೆ ಎಂದು ಪ್ರಸ್ತಾವನೆಯನ್ನು ಮಾಧ್ಯಮಗಳಿಗೆ ತೋರಿಸಿದರು. ಸರ್ಕಾರದಿಂದ ಅನುಮತಿ ಬಂದ ಬಳಿಕ ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಮುಂದಾಗುತ್ತದೆ ಎಂದು ತಿಳಿಸಿದರು. ಕಾಡಾನೆ ಕಾರ್ಯಪಡೆಗೆ ಸಂಪೂರ್ಣ ಜವಾಬ್ದಾರಿ ನೀಡಲಾಗುವುದೆಂದು ಪೊನ್ನಣ್ಣ ಹೇಳಿದರು.

ಕಾಡಾನೆಗಳನ್ನು ಕಾಫಿ ತೋಟಗಳಿಂದ ಏಕಾಏಕಿ ಓಡಿಸುವುದರಿಂದ ಅವುಗಳು ಕೋಪಗೊಂಡು ಮತ್ತಷ್ಟು ದಾಂಧಲೆ ನಡೆಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾಡಾನೆ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಯೋಜನೆ ರೂಪಿಸಲು ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು.

ಈ ಸಂದರ್ಭ ಕೆಪಿಸಿಸಿ ರಾಜ್ಯ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ, ಹೊಸ್ಕೇರಿ ಗ್ರಾ.ಪಂ. ಸದಸ್ಯ ಯೂಸುಫ್ ಆಲಿ ಇನ್ನಿತರರು ಹಾಜರಿದ್ದರು.ಮಂಗಳವಾರದAದು ಅರೆಕಾಡುವಿನ ಮದುರಕುಪ್ಪ ಕಾಫಿ ತೋಟದಲ್ಲಿ ಸೆರೆ ಹಿಡಿದ ಸಲಗವನ್ನು ಲಾರಿಯ ಮೂಲಕ ಅರೆಕಾಡಿನಮುಖ್ಯ ರಸ್ತೆಗೆ ತರಲಾಯಿತು. ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸೆರೆ ಹಿಡಿಯಲಾದ ಸಲಗವು ದೇವಪ್ಪನವರನ್ನು ಹತ್ಯೆ ಮಾಡಿದ ಸಲಗವಲ್ಲ ಇದು ಬೇರೆ ಸಲಗವೆಂದು ಆರೋಪಿಸಿದರು. ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ದೇವಪ್ಪನವರ ನಿವಾಸಕ್ಕೆ ಭೇಟಿನೀಡಿ ಪರಿಹಾರ ವಿತರಿಸಿ ಹಿಂತಿರುಗಿ ಬರುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಬೋಸರಾಜುರವರು ಸೆರೆ ಹಿಡಿದ ಕಾಡಾನೆಯನ್ನು ವೀಕ್ಷಿಸಿದರು. ಈ ಸಂದÀರ್ಭದಲ್ಲಿ ಗ್ರಾಮಸ್ಥರು ಉಸ್ತುವಾರಿ ಸಚಿವರ ಬಳಿ ಮಾತನಾಡಿ, ಅರಣ್ಯ ಇಲಾಖಾಧಿಕಾರಿಗಳು ದೇವಪ್ಪನವರನ್ನು ಹತ್ಯೆ ಮಾಡಿದ ಸಲಗವನ್ನು ಸೆರೆ ಹಿಡಿಯದೆ ಬೇರೊಂದು ಸಲಗವನ್ನು ಹಿಡಿದಿದ್ದಾರೆ ಎಂದು ಆರೋಪಿಸಿದರು. ದೇವಪ್ಪನವರನ್ನು ಹತ್ಯೆ ಮಾಡಿದ ಸಲಗವನ್ನು ಕಣ್ಣಾರೆ ಕಂಡಿದ್ದು, ಅದು ಜನ ವಸತಿ ಪ್ರದೇಶದಲ್ಲಿ ಸುತ್ತಾಡುತ್ತಿರುವುದು ಕಂಡುಬAದಿದ್ದು ಹತ್ಯೆ ಮಾಡಿದ ಸಲಗವನ್ನು ಸೆರೆ ಹಿಡಿಯಬೇಕೆಂದು ಒತ್ತಾಯಿಸಿದರು.

ಗ್ರಾಮಸ್ಥರ ಮಾತನ್ನು ಆಲಿಸಿದ ಸಚಿವರು ಅರಣ್ಯ ಇಲಾಖಾಧಿಕಾರಿಗಳ ಬಳಿ ಮಾತನಾಡಿ ಗ್ರಾಮಸ್ಥರು ಆರೋಪಿಸಿದ ಹಿನ್ನೆಲೆಯಲ್ಲಿ ಮತ್ತೆ ಕಾರ್ಯಾಚರಣೆ ಮುಂದುವರೆಸಿ, ಗ್ರಾಮಸ್ಥರ ಬಳಿ ಮಾಹಿತಿ ಪಡೆದು ಸಲಗವನ್ನು ಸೆರೆ ಹಿಡಿಯುವಂತೆ ನಿರ್ದೇಶನ ನೀಡಿದರು. ಅಲ್ಲದೆ ಕಾಡಾನೆಗಳನ್ನು ಕಾಫಿ ತೋಟಗಳಿಂದ ಕಾಡಿಗಟ್ಟುವ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಮುಂಚಿತವಾಗಿ ಮಾಹಿತಿ ನೀಡುವಂತೆಯೂ ಗ್ರಾಮದಲ್ಲಿ ಡಂಗುರ ಬಾರಿಸಿ ಎಚ್ಚರಿಕೆ ಇರಲು ಸೂಚಿಸುವಂತೆ ನಿರ್ದೇಶಿಸಿದರು.

ಈ ಸಂದರ್ಭದಲ್ಲಿ ಅರಣ್ಯ ಇಲಾಖಾಧಿಕಾರಿಗಳು ತಾವು ಇಂದು ಸೆರೆ ಹಿಡಿದ ಸಲಗದ ಬಗ್ಗೆ ಎಲ್ಲಾ ಮಾಹಿತಿ ಪಡೆದು, ಚಲನವಲನ ಕಂಡು ಹಿಡಿದು ಉಪಟಳ ನೀಡಿದ ಸಲಗವನ್ನೇ ಸೆರೆ ಹಿಡಿದಿರುವುದಾಗಿ ಸಚಿವರ ಬಳಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಅರಣ್ಯ ಇಲಾಖೆ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಆದರೆ ಸ್ಥಳೀಯರು ವ್ಯಕ್ತಿಯನ್ನು ಹತ್ಯೆ ಮಾಡಿದ ಆನೆ ಇದಲ್ಲ ಎಂದು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ಕರೆದು ಮತ್ತೊಮ್ಮೆ ಕಾರ್ಯಾಚರಣೆಗೆ ಆದೇಶ ನೀಡಲಾಗುವುದು. ಕಾಡಾನೆ ಹಾವಳಿ ನಿಯಂತ್ರಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದ್ದು ಹೆಚ್ಚುವರಿಯಾಗಿ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗುವುದು. ಅಲ್ಲದೆ ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಕ್ರಮಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಶಾಸಕ ಮಂಥರ್ ಗೌಡ ಹಾಜರಿದ್ದರು.