ಸೋಮವಾರಪೇಟೆ, ಆ.೧೪ : ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಅವರು ದಿಢೀರ್ ಭೇಟಿ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಆಸ್ಪತ್ರೆಯಲ್ಲಿ ಬಹುಮುಖ್ಯವಾಗಿ ಖಾಲಿಯಿರುವ ವೈದ್ಯರ ಹುದ್ದೆಗಳ ಬಗ್ಗೆ ಆಡಳಿತಾಧಿಕಾರಿ ಡಾ. ಶಿವಪ್ರಸಾದ್ ಅವರು ಮಾಹಿತಿ ನೀಡಿದರು. ಇದರೊಂದಿಗೆ ಆಸ್ಪತ್ರೆಯ ಡಯಾಲಿಸಿಸ್ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು, ಆಸ್ಪತ್ರೆಯ ಸಮಸ್ಯೆಗಳಿದ್ದರೆ ತಕ್ಷಣ ಸರಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.
ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಭೇಟಿ ಮಾಡಿ, ಸೌಲಭ್ಯ ಹಾಗೂ ವೈದ್ಯರ ಕರ್ತವ್ಯಗಳ ಬಗ್ಗೆ ಮಾಹಿತಿ ಪಡೆದರು. ೩ ಆ್ಯಂಬುಲೆನ್ಸ್ಗಳಿದ್ದು, ಚಾಲಕರ ಕೊರತೆ ಇರುವ ಬಗ್ಗೆ ಡಾ. ಶಿವಪ್ರಸಾದ್ ಗಮನ ಸೆಳೆದರು.
ಇದರೊಂದಿಗೆ ಪ್ರಗತಿಯಲ್ಲಿರುವ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿ, ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ರೋಗಿಗಳು ಮತ್ತು ಚಿಕಿತ್ಸೆಗೆ ಉಪಯೋಗವಾಗುವಂತೆ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಸೂಚಿಸಿದರು.
ಈ ಸಂದರ್ಭ ಶಾಸಕ ಡಾ. ಮಂಥರ್ ಗೌಡ, ಶಸ್ತçಚಿಕಿತ್ಸಕ ಡಾ. ಸತೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಡಿಸಿಸಿ ಉಪಾಧ್ಯಕ್ಷ ಕೆ.ಎಂ. ಲೋಕೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಸೇರಿದಂತೆ ಇತರರು ಇದ್ದರು.