ಪೊನ್ನAಪೇಟೆ, ಆ. ೧೪ : ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕಾನೂರು ಗ್ರಾಮದಲ್ಲಿ ಅಳಮೆಂಗಡ ತಮ್ಮಯ್ಯ ಎಂಬವರ ಮನೆಯ ಬಾಗಿಲು ಮುರಿದು ನಗದು ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ. ಕಾನೂರಿನಲ್ಲಿ ವಾಸವಾಗಿದ್ದ ಕೇರಳ ಮೂಲದ ಟಿ.ಪಿ.ವಿಪಿನ್ (೨೩) ಬಂಧಿತ ಆರೋಪಿ.

ಘಟನೆ ವಿವರ

ಕಾನೂರು ಗ್ರಾಮದ ಆರ್.ಆರ್. ಎಸ್ಟೇಟ್ ಮಾಲೀಕ ಅಳಮೆಂಗಡ ತಮ್ಮಯ್ಯ ಎಂಬವರು ತಮ್ಮ ಪತ್ನಿಯೊಂದಿಗೆ ವಾಸವಾಗಿದ್ದರು. ಇವರು ಜು.೨೭ ರಂದು ಅನಾರೋಗ್ಯ ನಿಮಿತ್ತ ಚಿಕಿತ್ಸೆಗಾಗಿ ಮೈಸೂರಿಗೆ ತೆರಳಿದ್ದರು. ಈ ಸಂದರ್ಭ ತೋಟದ ಲೈನ್ ಮನೆಯಲ್ಲಿ ವಾಸವಾಗಿದ್ದ ವಿಪಿನ್ ಎಂಬಾತ ಸಮಯ ಸಾಧಿಸಿ ಕಳ್ಳತನಕ್ಕೆ ಹೊಂಚು ಹಾಕಿ, ಮನೆಯ ಬಾಗಿಲಿನ ಬೀಗ ಮುರಿಯಲು ಪ್ರಯತ್ನಿಸಿದ್ದಾನೆ. ಬೀಗ ಮುರಿಯಲು ಸಾಧ್ಯವಾಗದ್ದರಿಂದ, ಮನೆಯ ಬಾಗಿಲನ್ನೇ ಕತ್ತಿ, ಮತ್ತು ರಾಡ್ ಬಳಸಿ ಮುರಿದು ಒಳಗೆ ನುಗ್ಗಿದ್ದಾನೆ. ಮನೆಗೆ ನುಗ್ಗಿದ ಆರೋಪಿ ಕಪಾಟಿನಲ್ಲಿದ್ದ ರೂ.೨೧೦೦ ನಗದು, ರೂ.೧೫೩೦ ಮುಖ ಬೆಲೆಯ ಮದ್ಯದ ಬಾಟಲಿ, ಅಂದಾಜು ರೂ.೧೦೦೦ ಬೆಲೆ ಬಾಳುವ ಪಂಚ ಲೋಹದ ಪೂಜಾ ಬುಟ್ಟಿಯನ್ನು ಕಳವು ಮಾಡಿದ್ದ. ಬೆಂಗಳೂರಿನಲ್ಲಿ ವಾಸವಾಗಿದ್ದ ತಮ್ಮಯ್ಯ ಅವರ ಪುತ್ರಿ ಎ.ಟಿ.ರಶ್ಮಿ ಎಂಬವರು ಮನೆಗೆ ನುಗ್ಗಿ ಕಳ್ಳತನವಾಗಿರುವ ಬಗ್ಗೆ ಮಾಹಿತಿ ತಿಳಿದು, ಕಾನೂರಿಗೆ ಆಗಮಿಸಿ ಪರಿಶೀಲಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೂರು ದಾಖಲಿಸಿಕೊಂಡ ೨೪ ಗಂಟೆ ಅವಧಿಯಲ್ಲಿ ಕಳವು ಮಾಡಲಾಗಿದ್ದ ಮಾಲು ಸಮೇತ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕೊಡಗು ಎಸ್.ಪಿ ರಾಮರಾಜನ್ ಮತ್ತು ಅಡಿಷನಲ್ ಎಸ್‌ಪಿ ಸುಂದರ್‌ರಾಜ್ ಅವರ ನಿರ್ದೇಶನದ ಮೇರೆಗೆ, ವೀರಾಜಪೇಟೆ ತಾಲೂಕು ಡಿವೈಎಸ್‌ಪಿ ಮೋಹನ್‌ಕುಮಾರ್, ಗೋಣಿಕೊಪ್ಪ ಸರ್ಕಲ್ ಇನ್ಸ್ಪೆಕ್ಟರ್ ಗೋವಿಂದರಾಜು ಮಾರ್ಗದರ್ಶನ ದಲ್ಲಿ, ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಗಳಾದ ಮಹದೇಶ್ವರ ಸ್ವಾಮಿ, ಮುತ್ತುರಾಜ, ದಯಾನಂದ ಕಂಬಳಿ, ವೇಣುಗೋಪಾಲ್, ಪ್ರವೀಣ್, ಪುರುಷೋತ್ತಮ ಭಾಗವಹಿಸಿದ್ದರು.

-ಚನ್ನನಾಯಕ