ವಿಶೇಷ ವರದಿ- ಎಂ.ಎನ್. ಚಂದ್ರಮೋಹನ್
ಕುಶಾಲನಗರ, ಆ. ೧೩: ವಾರದ ಎರಡು ದಿನಗಳ ಅವಧಿಯಲ್ಲಿ ಕೋಟಿಗಟ್ಟಲೆ ರೂ.ಗಳ ವ್ಯಾಪಾರ ವಹಿವಾಟು ನಡೆಯುವ ಕುಶಾಲನಗರ ವಾರದ ಸಂತೆಯನ್ನು ಮತ್ತೆ ಅಪಾಯದ ಅಂಚಿನಲ್ಲಿರುವ ಹಳೆಯ ಮಾರುಕಟ್ಟೆಗೆ ಸ್ಥಳಾಂತರಿಸುವ ಹುನ್ನಾರ ತೆರೆಮರೆಯಲ್ಲಿ ನಡೆಯುತ್ತಿರುವುದು ಕಂಡು ಬಂದಿದೆ.
ಕಳೆದ ಹಲವು ವರ್ಷಗಳಿಂದ ವಾರದ ಸಂತೆ ನಡೆಯುತ್ತಿದ್ದ ಕೆಇಬಿ ಕಚೇರಿ ಎದುರು ಭಾಗದ ಅಪಾಯಕಾರಿ ಮತ್ತು ಅಶುಚಿತ್ವದಿಂದ ಕೂಡಿದ ವಾರದ ಸಂತೆಯ ಮಾರುಕಟ್ಟೆಯನ್ನು ಕಳೆದ ಮೂರು ವರ್ಷಗಳ ಹಿಂದೆ ಕುಶಾಲನಗರ -ಮೈಸೂರು ಹೆದ್ದಾರಿ ರಸ್ತೆಯ ಒತ್ತಿನಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಲಾಗಿತ್ತು.
ಸ್ಥಳಾAತರ ವಿಷಯದಲ್ಲಿ ಪರ-ವಿರೋಧಗಳ ನಡುವೆ ಮಾರುಕಟ್ಟೆ ಆರ್‌ಎಂಸಿ ಆವರಣದಲ್ಲಿ ನಿರಂತರ ವಾಗಿ ನಡೆದುಕೊಂಡು ಬರುತ್ತಿದೆ.
ಸುಮಾರು ೧೦ ಎಕರೆಗಿಂತಲೂ ಅಧಿಕ ವಿಸ್ತೀರ್ಣವುಳ್ಳ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಬಹುತೇಕ ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆಗಳನ್ನು ಒಳಗೊಳ್ಳುವುದರೊಂದಿಗೆ ನಿತ್ಯ ಸಾವಿರಾರು ಗ್ರಾಹಕರು ಮಂಗಳವಾರದ ಸಂತೆಯಲ್ಲಿ ಬಂದು ತರಕಾರಿ ಮತ್ತಿತರ ವಸ್ತುಗಳನ್ನು ಖರೀದಿಸುತ್ತಿರುವುದು ನಿತ್ಯ ನಿರಂತರ ದೃಶ್ಯವಾಗಿದೆ. ಆವರಣದಲ್ಲಿ ಸ್ಥಳೀಯ ಕಾವೇರಿ ಪರಿಸರ ರಕ್ಷಣಾ ಬಳಗ ಕಳೆದ ಕೆಲವು ವರ್ಷಗಳ ಹಿಂದೆ ನೆಟ್ಟು ಬೆಳೆಸಿರುವ ಗಿಡಗಳು ಮರವಾಗಿ ಬೆಳೆದಿದ್ದು ಮಾರುಕಟ್ಟೆಯ ವ್ಯಾಪಾರಿ ಗಳಿಗೆ ಬೇಸಿಗೆಯ ಅವಧಿಯಲ್ಲಿ ನೆರಳು ನೀಡುವ ಮೂಲಕ ಬಹುತೇಕರಿಗೆ ಆಶ್ರಯವಾಗಿರುವುದನ್ನು ಕೂಡ ಇಲ್ಲಿ ಕಾಣಬಹುದು.
ಕೃಷಿ ಉತ್ಪನ್ನ ಮಾರುಕಟ್ಟೆ ವತಿಯಿಂದ ಅಗತ್ಯವಿರುವ ನಿಗದಿತ ನಿರ್ವಹಣೆ ಶುಲ್ಕವನ್ನು ಸಂತೆ ವ್ಯಾಪಾರಿಗಳಿಂದ ವಸೂಲಿ ಮಾಡಲಾಗುತ್ತಿದೆ. ಮಂಗಳವಾರ ಸಂತೆ ದಿನ ಸೇರಿದಂತೆ ಹಿಂದಿನ ದಿನ ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ರೈತರು ಮಾರುಕಟ್ಟೆಗೆ ತರುವ ಲೋಡ್ ಗಟ್ಟಲೆ ತರಕಾರಿ ಚೀಲಗಳಿಗೆ ಮಾತ್ರ ರಿಯಾಯಿತಿ ಕಲ್ಪಿಸಲಾಗಿದೆ. ಇದರಿಂದ ರೈತರು ಅನಾವಶ್ಯಕವಾಗಿ ಕಟ್ಟಬೇಕಾಗಿದ್ದ ಸುಂಕ ಕೂಡ ಮನ್ನಾ ಆಗಿರೋದು ಸದ್ಯದ ಬೆಳವಣಿಗೆ ಯಾಗಿದೆ.ತರಕಾರಿ ಬೆಳೆದ ರೈತರಿಂದ ಯಾವುದೇ ರೀತಿಯ ಶುಲ್ಕವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಮೂಲಕ ಸಂಗ್ರಹ ಮಾಡುತ್ತಿಲ್ಲ ಎಂದು ಅಧಿಕಾರಿಗಳು ‘ಶಕ್ತಿ’ಗೆ ತಿಳಿಸಿದ್ದಾರೆ. ಜೊತೆಗೆ ಈ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ ಕೂಡ ಸಂಪೂರ್ಣ ತಪ್ಪಿದಂತಾಗಿದೆ. ಬಹುತೇಕ ರೈತರು ತರಕಾರಿ ಮತ್ತು ಇತರ ವಸ್ತುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಅವಕಾಶ ಇಲ್ಲಿ ಲಭಿಸಿದೆ ಎಂದರೆ ತಪ್ಪಾಗಲಾರದು.
ಹಿಂದಿನ ಹಳೆಯ ಮಾರುಕಟ್ಟೆಯಲ್ಲಿ ರೈತರಿಂದ ಅವರು ಬೆಳೆದು ಮಾರುಕಟ್ಟೆಗೆ ತಂದ ತರಕಾರಿ ಚೀಲಗಳಿಗೆ ಸುಂಕ ಎತ್ತುವ ಮಂದಿ ಕನಿಷ್ಟ ನೂರರಂತೆ ವಾರ್ಷಿಕ ಲಕ್ಷಾಂತರ ರೂಗಳನ್ನು ವಸೂಲಿ ಮಾಡಲಾಗುತ್ತಿತ್ತು. ಕೆಲವೊಮ್ಮೆ ರೈತರ ಮೇಲೆ ದೌರ್ಜನ್ಯ ಕೂಡ ನಡೆದಿವೆ ಎನ್ನುತ್ತಾರೆ ಸಮೀಪದ ಕೊಪ್ಪ ಭಾಗದ ರೈತ ಕೃಷ್ಣಪ್ಪ.
ಇದೀಗ ರೈತಾಪಿ ವರ್ಗ ಆ ಸಂಕಷ್ಟದಿAದ ಪಾರಾಗುವಲ್ಲಿ ಆರ್‌ಎಂಸಿ ಮಾರುಕಟ್ಟೆ ಬಹುತೇಕ ಸಹಕಾರಿಯಾಗಿದೆ ಎನ್ನುತ್ತಾರೆ ಅವರು.
ಪ್ರಸಕ್ತ ಇರುವ ಮಾರುಕಟ್ಟೆಯಲ್ಲಿ ಕೆಲವೊಂದು ಸಮಸ್ಯೆಗಳು ಇದ್ದರೂ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತ ಮಂಡಳಿ ಒದಗಿಸಿಕೊಟ್ಟಿದೆ. ಶೌಚಾಲಯ ನೀರಿನ ವ್ಯವಸ್ಥೆ ಶೆಡ್‌ಗಳು ವಿದ್ಯುತ್ ವ್ಯವಸ್ಥೆ ಕಲ್ಪಿಸಿದ್ದು ಕೇವಲ ನಿರ್ವಹಣೆಯ ಹೆಸರಿನಲ್ಲಿ ಸಂತೆ ವ್ಯಾಪಾರಿಗಳಿಂದ ತಲಾ ೧೦೦ ರಿಂದ ೨೦೦ ರಂತೆ ಶುಲ್ಕ ಪಡೆಯುತ್ತಿದ್ದು ವಾರ್ಷಿಕ ಅಂದಾಜು ಹತ್ತು ಲಕ್ಷ ಆದಾಯ ಗಳಿಸುತ್ತಿದೆ.
ಒಂದು ಅಂದಾಜು ಪ್ರಕಾರ ಕುಶಾಲನಗರ ವಾರದ ಸಂತೆಯಿAದ ಕೊಡಗು ಜಿಲ್ಲೆ ಸೇರಿದಂತೆ ನೆರೆಯ ದಕ್ಷಿಣ ಕನ್ನಡ, ಕಾಸರಗೋಡು ವ್ಯಾಪ್ತಿಗೆ ಮೂರು ಕೋಟಿ ರೂಗಳ ಮೌಲ್ಯದ ವಹಿವಾಟಿನ ತರಕಾರಿ ಸರಬರಾಜಾಗುತ್ತಿದೆ.
ಹೆದ್ದಾರಿ ರಸ್ತೆಯ ಬದಿಯಲ್ಲಿ ವಾರದ ಸಂತೆ ನಡೆಯುತ್ತಿರುವ ಕಾರಣ ಮಂಗಳವಾರ ಸಂತೆ ನಡೆಯುವ ಸಂದರ್ಭ ಸಂಚಾರಿ ಪೊಲೀಸರಿಗೆ ಮಾತ್ರ ತಲೆನೋವಿನ ಕೆಲಸ ಉಂಟಾಗುತ್ತಿದೆ. ಹೆದ್ದಾರಿ ಎರಡು ಬದಿಯಲ್ಲಿ ಸಂತೆಗೆ ಬರುವ ಬಹುತೇಕ ಗ್ರಾಹಕರ ವಾಹನಗಳ ನಿಲುಗಡೆ ಮತ್ತು ಕೆಲವೊಂದು ಸಂತೆ ವ್ಯಾಪಾರಿಗಳು ಹೆದ್ದಾರಿ ಬದಿಯಲ್ಲಿ ವಾಹನ ನಿಲ್ಲಿಸಿ ವ್ಯಾಪಾರ ವಹಿವಾಟು ಮಾಡುತ್ತಿರುವುದು, ಹೆದ್ದಾರಿ ರಸ್ತೆಯ ಸಂಚಾರಕ್ಕೆ ಸಂಪೂರ್ಣ ತೊಡಕುಂಟುಮಾಡುತ್ತಿದೆ. ವಾಹನಗಳನ್ನು ಆರ್‌ಎಂಸಿ ಆವರಣದ ಒಳಗೆ ತೆಗೆದುಕೊಂಡು ಹೋದಲ್ಲಿ ಇದಕ್ಕೆ ಶಾಶ್ವತ ಪರಿಹಾರ ಒದಗಿಸಲು ಸಾಧ್ಯ. ಈ ನಿಟ್ಟಿನಲ್ಲಿ ಕುಶಾಲನಗರ ಪೊಲೀಸರು ಆರ್‌ಎಂಸಿ ಅಧಿಕಾರಿ ಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕಾಗಿದೆ.
ಕೃಷಿ ಮಾರುಕಟ್ಟೆ ಆವರಣದಲ್ಲಿ ಕೆಲವು ವ್ಯಾಪಾರಿಗಳು ಎಲ್ಲೆಂದರಲ್ಲಿ ರಸ್ತೆಯ ಮೇಲೆ ವ್ಯಾಪಾರ ಮಾಡುತ್ತಿರುವ ಕಾರಣ ವಾಹನಗಳು ಒಳ ಹೋಗಲು ಸಮಸ್ಯೆ ಉಂಟಾಗಿದೆ. ಆರ್‌ಎಂಸಿ ಒಳಭಾಗದಲ್ಲಿ ವಿಸ್ತಾರವಾಗಿ ಇರುವ ರಸ್ತೆಗಳಲ್ಲಿ ವಾಹನಗಳನ್ನು ನಿಲುಗಡೆಗೊಳಿಸಲು ಅವಕಾಶ ಮಾಡಿಕೊಡಬೇಕಾಗಿದೆ ಎಂದು ನಾಗರಿಕರಿಂದ ಅಭಿಪ್ರಾಯಗಳು ಕೇಳಿ ಬಂದಿವೆ.
ಹಲವು ಬಾರಿ ಸಂಚಾರಿ ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡರೂ ಕೆಲವು ಸಂತೆ ವ್ಯಾಪಾರಿಗಳು ಇದಕ್ಕೆ ಸ್ಪಂದನೆ ಕೊಡದ ಕಾರಣ ಈ ಸಮಸ್ಯೆ ಮುಂದುವರಿದಿದೆ.
ಉಳಿದAತೆ ಸ್ವಚ್ಛತೆ ಕಾರ್ಯವನ್ನು ಕುಶಾಲನಗರ ಪುರಸಭೆ ಮೂಲಕ ಪೌರಕಾರ್ಮಿಕರು ನಿರ್ವಹಿಸುತ್ತಿದ್ದು, ಈ ಬಗ್ಗೆ ಹೆಚ್ಚಿನ ಆದ್ಯತೆ ಕೊಟ್ಟಲ್ಲಿ ಸ್ವಚ್ಛ ಸಂತೆ ಮಾರುಕಟ್ಟೆ ನಿರ್ಮಾಣ ಸಾಧ್ಯ ಎಂದು ಸಂತೆ ವ್ಯಾಪಾರಿಗಳು ‘ಶಕ್ತಿ’ಯೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಈ ಹಿಂದೆ ಮಾರುಕಟ್ಟೆ ಸ್ಥಳಾಂತರ ಮಾಡಿದ ಸಂದರ್ಭ ಶೇಕಡ ಹತ್ತರಷ್ಟು ವ್ಯಾಪಾರಿಗಳು ಮತ್ತೆ ಹಳೆಯ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಬೇಕು ಎಂದು ಮತ್ತೆ ಒತ್ತಡ ಹಾಕುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ.
ಹಳೆಯ ಮಾರುಕಟ್ಟೆಯಲ್ಲಿ ಕೋಳಿ, ಮೀನು, ಆಡು, ಕುರಿ ಮಾಂಸ ಮಾರಾಟ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಆರ್‌ಎಂಸಿ ಮಾರುಕಟ್ಟೆ ಆವರಣದಲ್ಲಿ ನಿಯಮಗಳ ಪ್ರಕಾರ ಮಾಂಸ ಮಾರಾಟ ಮಳಿಗೆಗಳಿಗೆ ಅವಕಾಶ ಇಲ್ಲದಿರುವುದು. ಇದರಿಂದ ಹಳೆಯ ಮಾರುಕಟ್ಟೆಯಿಂದ ಮಾಂಸ ಮಳಿಗೆಗಳ ಸ್ಥಳಾಂತರಕ್ಕೆ ಅಡ್ಡಿಯಾಗಿದೆ. ಆದರೆ ಜೀವಂತ ಕೋಳಿ ಅಥವಾ ಪ್ರಾಣಿಗಳ ವ್ಯಾಪಾರ ವಹಿವಾಟು ಮಾಡಬಹುದು ಎನ್ನುತ್ತಾರೆ ಆರ್‌ಎಂಸಿ ಅಧಿಕಾರಿಗಳು.
ಯಾವುದೇ ಹಂತದಲ್ಲಿ ಪ್ರಸಕ್ತ ವಾರದ ಸಂತೆಯನ್ನು ಸ್ಥಳಾಂತರಿಸ ಬಾರದು ಎನ್ನುತ್ತಾರೆ ಕಳೆದ ೩೦ ವರ್ಷಗಳಿಂದ ಸಂತೆ ವ್ಯಾಪಾರ ಮಾಡುತ್ತಿರುವ ಮಹಿಳೆ ದಮಯಂತಿ.
ಕುಶಾಲನಗರ ವಾರದ ಸಂತೆಯಲ್ಲಿ ಕುಶಾಲನಗರ ತಾಲೂಕು ಸೇರಿದಂತೆ ನೆರೆಯ ಪಿರಿಯಾಪಟ್ಟಣ, ಅರಕಲಗೂಡು ತಾಲೂಕಿನಿಂದ ಕೂಡ ವ್ಯಾಪಾರಿಗಳು ಕುಶಾಲನಗರ ವಾರದ ಸಂತೆಯಲ್ಲಿ ವ್ಯಾಪಾರ ಮಾಡುತ್ತಿರುವುದು ಗಮನಾರ್ಹ ವಿಷಯವಾಗಿದೆ.
ಒಂದು ಅಂಕಿ ಅಂಶಗಳ ಪ್ರಕಾರ ಸುಮಾರು ೩೦೦ಕ್ಕೂ ಅಧಿಕ ವ್ಯಾಪಾರಿಗಳು ಪ್ರತಿ ವಾರದ ಸಂತೆಯಲ್ಲಿ ತಮ್ಮ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
ಇದೀಗ ಕೆಲವರು ಈ ಸಂತೆ ಮಾರುಕಟ್ಟೆಯನ್ನು ಮತ್ತೆ ಹಳೆಯ ಮಾರುಕಟ್ಟೆಗೆ ಸ್ಥಳಾಂತರಿಸಬೇಕು ಎನ್ನುವ ಚರ್ಚೆಯಲ್ಲಿ ತೊಡಗಿದ್ದು, ಈ ಬಗ್ಗೆ ಶೇಕಡ ೯೦ರಷ್ಟು ವ್ಯಾಪಾರಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕುಶಾಲನಗರ ಪುರಸಭೆಯ ಮೂಲಕ ಕೂಡ ಒತ್ತಡ ತರುತ್ತಿರುವುದು ಕೇಳಿ ಬಂದಿದೆ. ಪಟ್ಟಣ ಪಂಚಾಯಿತಿ ಆಡಳಿತ ಮೂಲಕ ಹಳೆಯ ಮಾರುಕಟ್ಟೆಗೆ ಲಕ್ಷಗಟ್ಟಲೆ ಹಣ ವೆಚ್ಚ ಮಾಡಿ ಅಭಿವೃದ್ಧಿ ಮಾಡಿದ್ದು, ಆದಕಾರಣ ಈ ಜಾಗದಲ್ಲಿ ವಾರದ ಸಂತೆ ನಡೆಯಲಿ ಎನ್ನುವುದು ಕೆಲವರ ಅಭಿಪ್ರಾಯ. ವಿದ್ಯುತ್ ಕಚೇರಿ ಎದುರುಗಡೆ ಹಳೆಯ ಮಾರುಕಟ್ಟೆ ಹಲವು ಬೃಹತ್ ವಿದ್ಯುತ್ ಗೋಪುರಗಳು ತಲೆಯೆತ್ತಿದ್ದು ೨೨೦ ಮೆಗಾ ವ್ಯಾಟ್ ತಂತಿಗಳು ಹಾದುಹೋಗಿವೆ. ಮಳೆಗಾಲದಲ್ಲಿ ಈ ಗೋಪುರಗಳಲ್ಲಿ ವಿದ್ಯುತ್ ಪ್ರವಹಿಸಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಕೂಡ ಅಧಿಕವಾಗಿದೆ ಎನ್ನುವುದು ಸಾರ್ವಜನಿಕರ ಮಾತಾಗಿದೆ.
ಹಳೆಯ ಮಾರುಕಟ್ಟೆಯಲ್ಲಿ ವಾರದ ಸಂತೆ ನಡೆದಲ್ಲಿ ಪುರಸಭೆ ಮೂಲಕ ಸುಂಕ ಎತ್ತುವಳಿ ಟೆಂಡರ್ ಪಡೆದು ತರಕಾರಿ ಬೆಳೆಯುವ ರೈತರಿಂದ ಮತ್ತು ಸಂತೆ ವ್ಯಾಪಾರಿಗಳಿಂದ ವಾರಕ್ಕೆ ಸಾವಿರಾರು ರೂಗಳ ಸುಂಕ ಎತ್ತಲು ಅವಕಾಶ ದೊರೆಯುವುದರಿಂದ ಸ್ಥಳಾಂತರದ ಹುನ್ನಾರ ನಡೆಯುತ್ತಿದೆ ಎನ್ನುವ ಆರೋಪಗಳು ಸಂತೆ ವ್ಯಾಪಾರಿಗಳಿಂದ ಕೇಳಿ ಬಂದಿವೆ. ಆರ್‌ಎಂಸಿ ಆವರಣದಿಂದ ಹಳೆಯ ಮಾರುಕಟ್ಟೆ ಆವರಣಕ್ಕೆ ಸಂತೆ ಸ್ಥಳಾಂತರಕ್ಕೆ ಕುಶಾಲನಗರ ಪುರಸಭೆಗೆ ಕೆಲವು ಮಂದಿ ಅರ್ಜಿ ಸಲ್ಲಿಸಿರುವುದಾಗಿ ಪುರಸಭೆ ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್ ‘ಶಕ್ತಿ’ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸದ್ಯದಲ್ಲೇ ನಡೆಯುವ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಆಗಲಿದೆ ಎಂದು ಅವರು ಹೇಳಿದ್ದಾರೆ.
ಅಲ್ಲದೆ ಹಳೆಯ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಶಕ್ತಿಯ ವಿದ್ಯುತ್ ತಂತಿಗಳು ಮೇಲ್ಗಡೆ ಹಾದುಹೋಗಿದ್ದು ಇದು ಭಾರಿ ಅಪಾಯದ ಪ್ರದೇಶವಾಗಿರುವುದರಿಂದ ಇಲ್ಲಿ ವ್ಯಾಪಾರ ಮಾಡಲು ಸಂಬAಧಿಸಿದ ಅಗ್ನಿಶಾಮಕ, ಸೆಸ್ಕ್ ಮತ್ತಿತರ ಇಲಾಖೆಗಳು ಕೂಡ ಅನುಮತಿ, ನಿರಪೇಕ್ಷಣಾ ಪತ್ರ ನೀಡಲು ಹಿಂಜರಿದಿವೆ. ವಾರದ ಸಂತೆಯ ಸಂದರ್ಭ ಸಾವಿರಾರು ಸಂಖ್ಯೆಯ ಜನರು ಸೇರುವ ಕಾರಣ ಸಾರ್ವಜನಿಕರ ರಕ್ಷಣೆ ಬಗ್ಗೆ ಕೂಡ ಇಲ್ಲಿ ಚಿಂತನೆ ಹರಿಸಲೇಬೇಕಾಗಿದೆ.
ಆರ್‌ಎಂಸಿ ಮಾರುಕಟ್ಟೆ ಆವರಣದಿಂದ ಮತ್ತೆ ಹಳೆಯ ಮಾರುಕಟ್ಟೆ ಪ್ರದೇಶಕ್ಕೆ ವಾರದ ಸಂತೆ ಸ್ಥಳಾಂತರವಾಗುವ ಸಂಬAಧ ಆರ್‌ಎಂಸಿ ವರ್ತಕರ ಸಂಘದ ಕೆಲವು ಪ್ರಮುಖರು ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂಥರ್ ಗೌಡ ಅವರ ಗಮನಕ್ಕೂ ತಂದಿದ್ದು ಮಾರುಕಟ್ಟೆಯನ್ನು ಆರ್‌ಎಂಸಿ ಆವರಣದಲ್ಲಿ ಉಳಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಪ್ರಸಕ್ತ ಕೆಇಬಿ ಕಚೇರಿ ಮುಂಭಾಗದ ಹಳೆ ಮಾರುಕಟ್ಟೆ ನೆಲದ ಅಡಿಯಲ್ಲಿ ಕೂಡ ವಿದ್ಯುತ್ ಕೇಬಲ್‌ಗಳನ್ನು ಅಳವಡಿಸಲಾಗಿದ್ದು ಈ ಪ್ರದೇಶ ಸಂಪೂರ್ಣ ಅಪಾಯಕಾರಿಯಾಗಿದ್ದು, ಸಾರ್ವಜನಿಕ ಉಪಯೋಗಕ್ಕೆ ಸಂಪೂರ್ಣ ಅಯೋಗ್ಯವಾಗಿದೆ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಸಕ್ತ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನಡೆಯುತ್ತಿರುವ ವಾರದ ಸಂತೆಯನ್ನು ಸ್ಥಳಾಂತರಗೊಳಿಸದೆ ಮುಂದುವರಿಸ ಬೇಕಾಗಿದೆ ಎನ್ನುವುದು ಬಹುತೇಕರ ಆಗ್ರಹವಾಗಿದೆ.