ಕಡಂಗ, ಆ. ೧೩: ಚೆಂಬು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರ ನೇತೃತ್ವದಲ್ಲಿ ಜನಸ್ಪಂದನಾ ಸಭೆ ಹಾಗೂ ಶಾಸಕರಿಗೆ ಸನ್ಮಾನ. ಚೆಂಬು ಗ್ರಾಮ ಪಂಚಾಯಿತಿಯಲ್ಲಿ ಜನಸ್ಪಂದನಾ ಸಭೆ ನಡೆಯಿತು. ಶಾಸಕರಾಗಿ ಚುನಾಯಿತರಾದ ಮೇಲೆ ಪ್ರಥಮ ಬಾರಿಗೆ ಗ್ರಾಮಕ್ಕೆ ಆಗಮಿಸಿದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಅವರು ಮಾರ್ಪಡ್ಕ ಸೇತುವೆಯನ್ನು ವೀಕ್ಷಿಸಿ ಊರುಬೈಲು ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆಯನ್ನು ನೆರವೇರಿಸಿದರು.

ಶಾಸಕರಿಗೆ ಆರತಿ ಬೆಳಗುವುದರ ಮೂಲಕ, ಗ್ರಾಮ ಪಂಚಾಯಿತಿ ಸಭಾಂಗಣಕ್ಕೆ ಗ್ರಾಮದ ಮಹಿಳೆಯರು ಸ್ವಾಗತಿಸಿದರು. ಈ ಸಂದರ್ಭ ನೂತನ ಶಾಸಕರನ್ನು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನ ಮಾಡಲಾಯಿತು. ಸಭೆಗೆ ಆಗಮಿಸಿದ ಸರ್ವರನ್ನು ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ಹೊಸೂರು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರ ಬೇಡಿಕೆಗಳನ್ನು ಶಾಸಕರ ಸಮ್ಮುಖದಲ್ಲಿ ಸೂರಜ್ ಹೊಸೂರು ವಿವರಿಸಿದರು.

ಮುಖ್ಯವಾಗಿ ಸರ್ವೆ ನಂ. ೮/೧ ಹಕ್ಕುಪತ್ರ ಸಮಸ್ಯೆ ಬಗ್ಗೆ ರಘುನಾಥ್ ಬಾಲೆಂಬಿಯವರು, ಅರಣ್ಯ ಇಲಾಖೆಯ ಹಕ್ಕುಪತ್ರ ಸಮಸ್ಯೆ, ಆನೆ ಹಾವಳಿ, ವಿದ್ಯುತ್ ಸಮಸ್ಯೆ, ಗ್ರಾಮಕ್ಕೆ ಸುಸಜ್ಜಿತ ಕ್ರೀಡಾಂಗಣ ಒದಗಿಸುವ ಬಗ್ಗೆ, ಗ್ರಾಮಸ್ಥರು ಎದುರಿಸುತ್ತಿರುವ ನೆಟ್ವರ್ಕ್ ಸಮಸ್ಯೆ ಬಗ್ಗೆ, ಜಲಜೀವನ್ ಸಮಸ್ಯೆ, ಅಡಿಕೆಯ ಹಳದಿ ರೋಗದ ಬಗ್ಗೆ, ವಿದ್ಯಾರ್ಥಿಗಳಿಗೆ ವಸತಿ ನಿಲಯ ಬೇಡಿಕೆ ಬಗ್ಗೆ ಗ್ರಾಮಸ್ಥರು ವಿವರಿಸಿದರು.

ಬಹುತೇಕ ಎಲ್ಲಾ ಬೇಡಿಕೆಗಳಿಗೆ ಸ್ಥಳದಲ್ಲಿಯೇ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಪಂದಿಸಿದ ಶಾಸಕರು, ಕ್ರೀಡಾಂಗಣದ ಬೇಡಿಕೆಗೆ ಕೂಡಲೇ ಸಂಬAಧಿಸಿದ ಅಧಿಕಾರಿಯೊಂದಿಗೆ ಚರ್ಚಿಸಿ ಕ್ರೀಡಾಂಗಣಕ್ಕೆ ಸ್ಥಳ ಇರುವುದನ್ನು ಖಾತರಿಪಡಿಸಿ ಕೂಡಲೇ ಈ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿದರು.

ಸರ್ವೇ ನಂ. ೮/೧ ರ ಸಮಸ್ಯೆಗೆ ಕೂಡಲೇ ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸರ್ವೆ ಮಾಡಿ ಪರಿಹಾರ ಒದಗಿಸುವಂತೆ ಸೂಚಿಸಿದರು.

ಆನೆ ಹಾವಳಿಯಿಂದ ತತ್ತರಿಸಿದ ಭಾಗಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸೋಲಾರ್ ಬೇಲಿ ಅಳವಡಿಸುವಂತೆ ಸೂಚಿಸಿದರು. ಕೂಡಲೇ ಇದಕ್ಕೆ ವಲಯ ಅರಣ್ಯ ಅಧಿಕಾರಿ ಮಧುಸೂದನ್ ಅವರು ಒಪ್ಪಿಗೆ ಸೂಚಿಸಿದರು. ಅರಣ್ಯ ಹಕ್ಕು ಪತ್ರದ ಬಗ್ಗೆ ಈಗಾಗಲೇ ಶಾಸಕರು ಅರಣ್ಯ ಸಚಿವರೊಂದಿಗೆ ಹಲವು ಜಿಲ್ಲೆಯ ಪ್ರತಿಧಿಗಳೊಂದಿಗೆ ಚರ್ಚಿಸಿದ್ದು ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಒತ್ತಡ ತರುವುದಾಗಿ ತಿಳಿಸಿದರು.

ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಗ್ರಾಮಸ್ಥರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಇಲಾಖೆಗೆ ಶಾಸಕರು ಸೂಚಿಸಿದರು. ಅಡಿಕೆ ಹಳದಿ ರೋಗದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರ್ಯಾಯ ಬೆಳೆಯ ಬಗ್ಗೆ ಕಾರ್ಯ ಯೋಜನೆ ರೂಪಿಸುವುದಾಗಿ ಭರವಸೆ ನೀಡಿದರು. ನೆಟ್ವರ್ಕ್ ಸಮಸ್ಯೆ ಬಗ್ಗೆ ಕೂಡಲೇ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಪಂದಿಸಿ ಬಗೆಹರಿಸಲು ಸೂಚಿಸಿದರು. ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಅಗತ್ಯವಿರುವ ಸ್ಥಳಗಳಲ್ಲಿ ತಡೆಗೋಡೆ ನಿರ್ಮಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ವಸತಿ ನಿಲಯದ ಬೇಡಿಕೆಗೆ ಹೋಬಳಿ ಮಟ್ಟದ ವಸತಿ ನಿಲಯವನ್ನು ಗ್ರಾಮದಲ್ಲಿ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಂಜೀವಿನಿ ಸಂಘದ ಕಟ್ಟಡಕ್ಕೆ ಜಾಗ ಗುರುತಿಸುವಂತೆ ಕಂದಾಯ ಇಲಾಖೆಗೆ ಸೂಚಿಸಿದರು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶೇಖರ್, ಪಂಚಾಯಿತಿ ಜನಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹದೇವ ಪ್ರಭು ಕಾರ್ಯಕ್ರಮ ನಡೆಸಿಕೊಟ್ಟರು.