ಮಡಿಕೇರಿ, ಆ. ೧೩: ವಿಧಾನಸಭಾ ಚುನಾವಣೆಯ ನಂತರ ಕ್ಷೀಣಿಸಿದ್ದ ರಾಜಕೀಯ ಚಟುವಟಿಕೆ ಇದೀಗ ಮತ್ತೆ ಗರಿಗೆದರಿದೆ. ‘ಹಳ್ಳಿ ಸರಕಾರ’ ಎಂದು ಕರೆಸಿಕೊಳ್ಳುವ ಗ್ರಾಮ ಪಂಚಾಯಿತಿಯ ೨ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಶಾಂತಿಯುತವಾಗಿ ನಡೆದಿದೆ.
ಕಾನೂರು ಗ್ರಾ.ಪಂ.ಗೆ ಆಯ್ಕೆ
ಗೋಣಿಕೊಪ್ಪಲು: ೨ನೇ ಅವಧಿಗೆ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾನೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯರಾದ ಪಿ.ಟಿ. ದೇವಿ ಹಾಗೂ ಉಪಾಧ್ಯಕ್ಷರಾಗಿ ಬಿ.ಎಂ. ಭವ್ಯಶ್ರೀ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯನ್ನು ಪೊನ್ನಂಪೇಟೆ ತಾಲೂಕು ಪಂಚಾಯಿತಿಯ ಅಧಿಕಾರಿ ನಂದೀಶ್ ನಡೆಸಿದರು. ಕ್ರಮವಾಗಿ ೨ ನಾಮಪತ್ರಗಳು ಮಾತ್ರ ಸಲ್ಲಿಕೆಯಾದ ಹಿನ್ನಲೆಯಲ್ಲಿ ಪರಿಶಿಷ್ಟ ವರ್ಗದ ಮಹಿಳೆ ಪಿ.ಟಿ. ದೇವಿ, ಅಧ್ಯಕ್ಷರಾಗಿ ಹಾಗೂ ಬಿ.ಸಿ.ಎಂ.ಎ. ಮಹಿಳಾ ಮೀಸಲಾತಿಯಿಂದ ಬಿ.ಎಂ. ಭವ್ಯಶ್ರೀ ಇವರಿಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದಾಗಿ ಘೋಷಣೆ ಮಾಡಿದರು.
೧೨ ಸದಸ್ಯ ಬಲವುಳ್ಳ ಸದಸ್ಯರುಗಳಲ್ಲಿ ಪಿ.ಟಿ. ದೇವಿ, ಬಿ.ಎಂ. ಭವ್ಯಶ್ರೀ, ಎಂ.ಡಿ. ರಶ್ಮಿ, ಸುಳ್ಳಿಮಾಡ ದೀಪಕ್ ಮೊಣ್ಣಪ್ಪ, ಪಿ.ಸಿ. ಮಂಜು, ಕೆ.ಯು. ಸಚಿನ್ ಸೋಮಣ್ಣ, ಪಿ.ಎಂ. ಜಾಜಿ, ಹೆಚ್.ಜಿ. ಪಲ್ಲವಿ, ಕಾಡ್ಯಮಾಡ ಬೋಪಣ್ಣ, ಕುಂಞಮಾಡ ಮುತ್ತಪ್ಪ, ಹೆಚ್.ಎ. ಧರಣಿ ಹಾಗೂ ಪಿ.ಎನ್. ಅಣ್ಣಪ್ಪ, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಘೋಷಣೆ ಆಗುತ್ತಿದ್ದಂತೆಯೇ ಗ್ರಾಮ ಪಂಚಾಯಿತಿ ಹೊರ ಭಾಗದಲ್ಲಿ ನೆರೆದಿದ್ದ ಬಿಜೆಪಿ ಪಕ್ಷದ ಮುಖಂಡರುಗಳಾದ ಕಾಡ್ಯಮಾಡ ಭರತ್ ಸೇರಿದಂತೆ ಇನ್ನಿತರ ಪ್ರಮುಖರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಹಸ್ತಲಾಘವ ನೀಡಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಪುಟ್ಟರಾಜು ಹಾಗೂ ಸಿಬ್ಬಂದಿಗಳು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಕೊಡಗರಹಳ್ಳಿ ಗ್ರಾ.ಪಂ.ಗೆ ಆಯ್ಕೆ
ಸುಂಟಿಕೊಪ್ಪ: ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ ೨ನೇ ಅವಧಿಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ನಿರತ ಹಾಗೂ ಉಪಾಧ್ಯಕ್ಷರಾಗಿ ಅಬ್ಬಾಸ್ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಿರತರಿಗೆ ೬ ಮತ, ಕಲಾಮಣಿಗೆ ೧ ಮತ, ಕವಿತಗೆ ೩ ಮತ ಲಭಿಸಿತು. ಉಪಾಧ್ಯಕ್ಷ ಸ್ಥಾನಕ್ಕೆ ಅಬ್ಬಾಸ್ ೫, ನೀತ ೪ ಮತ ಪಡೆದರು. ೧ ಮತ ತಿರಸ್ಕೃತಗೊಂಡಿತು.
ಪಿಡಿಓ ರವೀಶ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಚುನಾವಣಾಧಿಕಾರಿಯಾಗಿ ಹಾರಂಗಿ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸ್ವಾತಿ ಕಾರ್ಯನಿರ್ವಹಿಸಿದರು.
ಐಗೂರು ಗ್ರಾ.ಪಂ.ಗೆ ಆಯ್ಕೆ
ಸುಂಟಿಕೊಪ್ಪ: ಐಗೂರು ಗ್ರಾಮ ಪಂಚಾಯಿತಿಯ ೨ನೇ ಅವಧಿಯ ಅಧ್ಯಕ್ಷರಾಗಿ ಜಿ.ಕೆ. ವಿನೋದ್ (ವಿನು) ಹಾಗೂ ಉಪಾಧ್ಯಕ್ಷರಾಗಿ ಯಡವನಾಡಿನ ಗೌರಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಬಿಸಿಎಂಎಗೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ತಲಾ ಒಂದೊAದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರಿಂದ ಚುನಾವಣಾಧಿಕಾರಿಯಾದ ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಾಲಕೃಷ್ಣ ರೈ ಅವರು, ಅಧ್ಯಕ್ಷರಾಗಿ ವಿನೋದ್ ಹಾಗೂ ಉಪಾಧ್ಯಕ್ಷರಾಗಿ ಗೌರಮ್ಮ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಐಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಎಸ್. ಬಾಲಕೃಷ್ಣ ರೈ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ವಿನೋದ್, ಗೌರಮ್ಮ, ಲಿಂಗೇರಿ ರಾಜೇಶ, ಬಾರನ ಪ್ರಮೋದ್, ಜಾನಕಿ ಮೇದಪ್ಪ, ಬೇಬಿ, ಜುನೈದ್, ಜೋಯಪ್ಪ, ಪೂರ್ಣಿಮ, ಪವಿತ್ರ ಹಾಗೂ ಪಾರ್ವತಿ ಹಾಗೂ ಗ್ರಾ.ಪಂ. ಸಿಬ್ಬಂದಿಗಳು, ಸೋಮವಾರಪೇಟೆ ತಾಲೂಕು ಬಿಜೆಪಿ ಉಪಾಧ್ಯಕ್ಷ ಎಂ.ಎ. ಪ್ರಭಾಕರ, ಟಿ.ಕೆ. ರಮೇಶ ಉಪಸ್ಥಿತರಿದ್ದರು.
ಚೆಟ್ಟಳ್ಳಿ ಗ್ರಾ.ಪಂ.ಗೆ ಆಯ್ಕೆ
ಚೆಟ್ಟಳ್ಳಿ: ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ೨ನೇ ಅವಧಿಗೆ ಅಧ್ಯಕ್ಷರಾಗಿ ಕೆ. ಸಿಂಧು, ಉಪಾಧ್ಯಕ್ಷರಾಗಿ ಪಿ.ಡಿ. ತಂಗಮ್ಮ ಆಯ್ಕೆಯಾದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಪಿ.ಯು. ನಂದಿನಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ. ಸಿಂಧು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ೧೫ ಬಲದ ಸದಸ್ಯರಲ್ಲಿ ೧೧ ಮತಗಳನ್ನು ಪಡೆಯುವುದರ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ. ಸಿಂಧು ಅಧ್ಯಕ್ಷ ಸ್ಥಾನ ಗಳಿಸಿದರೆ, ೪ ಮತಗಳನ್ನು ಪಡೆದು ನಂದಿನಿ ಪಿ.ಯು. ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಪಿ.ಡಿ. ತಂಗಮ್ಮ ಅವಿರೋಧವಾಗಿ ಆಯ್ಕೆಯಾದರು. ಜಿಲ್ಲಾ ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಕೆ. ನಾಗರಾಜ್ ಚುನವಣಾಧಿಕಾರಿಯಾಗಿ ಹಾಗೂ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಈ. ರಾಕೇಶ್ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿಜಯೋತ್ಸವವನ್ನು ಆಚರಿಸಿದರು. ಈ ಸಂದರ್ಭ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಹಾಲಿ ಅಧ್ಯಕ್ಷ ಪಿ.ಟಿ. ಮುತ್ತಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸುನಿತ ಮಂಜುನಾಥ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್, ಚೆಟ್ಟಳ್ಳಿ ವಲಯ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ರಫಿ, ಪ್ರಮುಖರಾದ ಪುತ್ತರಿರ ಪಪ್ಪು ತಿಮ್ಮಯ್ಯ, ಜೊಶಿ ವಿಕ್ಟರ್ ಸೋನ್ಸ್, ಸಿ.ಈ. ತೀರ್ಥಕುಮಾರ್, ಜುಬೇರ್, ಗಫೂರ್ ಪಿ.ಎಂ. ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.
ಸುಂಟಿಕೊಪ್ಪ ಪಂಚಾಯಿತಿಗೆ ಆಯ್ಕೆ
ಸುಂಟಿಕೊಪ್ಪ, ಆ. ೧೩: ಸುಂಟಿಕೊಪ್ಪ ಗ್ರೇಡ್ ೧ ಗ್ರಾಮ ಪಂಚಾಯಿತಿ ೨೦೨೩ನೇ ಸಾಲಿನ ೨ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ತೀವ್ರ ಕುತೂಹಲ ಮೂಡಿಸಿದ್ದು, ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪಿ.ಆರ್. ಸುನಿಲ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶಿವಮ್ಮ ಮಹೇಶ್ ಆಯ್ಕೆಯಾಗಿದ್ದಾರೆ.
ಚುನಾವಣೆ, ಮಡಿಕೇರಿ ಡಿಎಆರ್ ಪೊಲೀಸರ ಬಿಗಿ ಬಂದೋಬಸ್ತಿನಲ್ಲಿ ನಡೆಸಲಾಯಿತು. ತಾ. ೩ ರಂದು ನಡೆಸಬೇಕಾಗಿದ್ದ ಚುನಾವಣೆಯನ್ನು ಅಭ್ಯರ್ಥಿಗಳು ಸಲ್ಲಿಸಿದ ಮೀಸಲಾತಿ ದೃಢೀಕರಣ ಪತ್ರದ ತಾಂತ್ರಿಕ ದೋಷದಿಂದ ತಾ.೧೦ ಕ್ಕೆ ಮುಂದೂಡಲಾಗಿತ್ತು.
ಚುನಾವಣಾಧಿಕಾರಿ ಹಾರಂಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವರದರಾಜು ಅವರಿಗೆ ಅಧ್ಯಕ್ಷ ಸ್ಥಾನಕ್ಕೆ ಪಿ.ಆರ್. ಸುನಿಲ್‌ಕುಮಾರ್, ರಫೀಕ್‌ಖಾನ್, ಶಬೀರ್ ಎ. ಮಂಜುನಾಥ, ಬಿ.ಎಂ. ಸುರೇಶ, ಆಲಿಕುಟ್ಟಿ, ನಾಗರತ್ನ ಹಾಗೂ ಪ್ರಸಾದ್‌ಕುಟ್ಟಪ್ಪ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಹಿಂದಿನ ಸಾಲಿನ ಅಧ್ಯಕ್ಷರಾಗಿದ್ದ ಶಿವಮ್ಮ ಹಾಗೂ ಬಿಜೆಪಿ ಬೆಂಬಲಿತ ವಸಂತಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಪರಿಶೀಲನೆ ನಂತರ ನಾಮಪತ್ರ ವಾಪಾಸು ಪಡೆಯಲು ಚುನಾವಣಾಧಿಕಾರಿ ಸಮಯ ನಿಗದಿಪಡಿಸಿದಾಗ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಬಿ.ಎಂ. ಸುರೇಶ್, ಮಂಜುನಾಥ,ನಾಗರತ್ನ, ಆಲಿಕುಟ್ಟಿ, ಪ್ರಸಾದ್ ಕುಟ್ಟಪ್ಪ ನಾಮಪತ್ರವನ್ನು ಹಿಂಪಡೆದುಕೊAಡರು.
ಆನಂತರ ಅಧ್ಯಕ್ಷರ-ಉಪಾಧ್ಯಕ್ಷರ ಚುನಾವಣೆಗೆ ಅವಕಾಶ ಕಲ್ಪಿಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಪಿ.ಆರ್. ಸುನಿಲ್‌ಕುಮಾರ್‌ಗೆ ೧೦ ಮತ ಶಬೀರ್‌ಗೆ ೫ ಮತ ಹಾಗೂ ರಫೀಕ್‌ಖಾನ್‌ಗೆ ೪ ಮತ ಲಭಿಸಿತು. ೧ ಮತ ತಿರಸ್ಕೃತಗೊಂಡಿತು. ಉಪಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಿದ ಶಿವಮ್ಮಗೆ ೧೧ ಮತ ವಸಂತಿಗೆ ೯ ಮತ ಲಭಿಸಿತು.
ಗ್ರಾಮ ಪಂಚಾಯಿತಿ ಪಿಡಿಓ ವೇಣುಗೋಪಾಲ್ ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸಿದರು.