ಗೋಣಿಕೊಪ್ಪಲು, ಆ. ೧೦: ಶಾಲೆಯ ಪುಸ್ತಕದ ಚೀಲಗಳನ್ನು ಬದಿಗೇರಿಸಿದ ವಿದ್ಯಾರ್ಥಿಗಳು ಕೈಯಲ್ಲಿ ಪೊರಕೆ, ಗುದ್ದಲಿ, ಕುಕ್ಕೆ, ಬಣ್ಣದ ಡಬ್ಬಿ, ಬಕೆಟ್, ಹೂಕುಂಡಗಳು ಹಾಗೂ ಇತ್ಯಾದಿ ಪರಿಕರಗಳೊಂದಿಗೆ ಪೊನ್ನಂಪೇಟೆ ತಾಲೂಕು ಕಚೇರಿಗೆ ಬಂದ ನೂರಾರು ವಿದ್ಯಾರ್ಥಿಗಳು ಕಚೇರಿ ಆವರಣದಲ್ಲಿದ್ದ ಗಿಡ ಗಂಟಿಗಳನ್ನು ಕಡಿದು ಗೋಡೆಗಳನ್ನು ಕೆಲ ಗಂಟೆಗಳಲ್ಲಿಯೇ ಶುಚಿಗೊಳಿಸಿ ಗೋಡೆಗಳಿಗೆ ಸುಣ್ಣ ಬಣ್ಣ ಬಳಿದು ತಹಶೀಲ್ದಾರ್ ಕಚೇರಿಗೆ ಹೊಸ ರೂಪ ನೀಡುವಲ್ಲಿ ಪೊನ್ನಂಪೇಟೆಯ ಸಾಯಿಶಂಕರ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ.
ಸದಾ ಕಲಿಕೆಯಲ್ಲಿಯೇ ಸಮಯ ಕಳೆಯುವ ವಿದ್ಯಾರ್ಥಿಗಳು ಕೆಲ ಗಂಟೆಗಳನ್ನು ಸ್ವಚ್ಚತ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾದರಿಯಾದರು.
ಸದಾ ಜನರಿಂದ ಕೂಡಿರುತ್ತಿದ್ದ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕಚೇರಿಯು ಗುರುವಾರದಂದು ವಿದ್ಯಾರ್ಥಿಗಳು ಹಾಗೂ, ಶಿಕ್ಷಕರು ಹಾಗೂ ಸಿಬ್ಬಂದಿಗಳಿAದ ತುಂಬಿ ತುಳುಕುತ್ತಿದ್ದರು. ಕಚೇರಿಯಲ್ಲಿನ ಸಿಬ್ಬಂದಿಗಳು ತಮ್ಮ ಕೆಲಸಗಳನ್ನು ಬದಿಗೊತ್ತಿ ಆಗಮಿಸಿದ ಮಕ್ಕಳೊಂದಿಗೆ ಬೆರೆತು ತಾವೂ ಕೂಡ ಸ್ವಚ್ಚತ ಕಾರ್ಯದಲ್ಲಿ ಪಾಲ್ಗೊಂಡರು. ಗುಂಪು ಗುಂಪಾಗಿ ವಿದ್ಯಾರ್ಥಿಗಳು ತಮಗೆ ವಹಿಸಿದ ಕೆಲಸಗಳನ್ನು ಪೂರೈಸುವ ಮೂಲಕ ಶಿಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಸಾಯಿಶಂಕರ್ ಶಿಕ್ಷಣ ಮಹಾವಿದ್ಯಾಲಯ ಪ್ರಶಾಂತಿ ನಿಲಯ ಪೊನ್ನಂಪೇಟೆಯ ಮಹಾವಿದ್ಯಾಲಯದ ಶಾಲಾ ಮಕ್ಕಳು, ಪ್ರಶಿಕ್ಷಣಾರ್ಥಿಗಳು, ಮಹಾವಿದ್ಯಾಲಯದ ಅಧ್ಯಕ್ಷ ಕೋಳೆರ ಝರು ಗಣಪತಿ, ಶಿಕ್ಷಣ ಸಂಸ್ಥೆಯ ಟ್ರಸ್ಟಿ ಗೌರವ್, ಗಾನ ಗೌರವ್, ಸಂಸ್ಥೆಯ ಸಲಹೆಗಾರ ಅರಮಣಮಾಡ ಸತೀಶ್, ಆಡಳಿತ ಅಧಿಕಾರಿ ರಮ್ಯ, ಪ್ರಾಂಶುಪಾಲ ಪಿ.ಎ. ನಾರಾಯಣ್, ಮುಖ್ಯಶಿಕ್ಷಕರಾದ ರೀನಾ ಅವರೊಂದಿಗೆ ಮುಂಜಾನೆ ೧೦.೩೦ರ ಸುಮಾರಿಗೆ ಶಾಲೆಯ ವಾಹನದಲ್ಲಿ ವಿವಿಧ ಪರಿಕರಗಳೊಂದಿಗೆ ಆಗಮಿಸಿದರು.
೧೫೦ಕ್ಕೂ ಅಧಿಕ ವಿದ್ಯಾರ್ಥಿಗಳು ತಾಲೂಕು ಕಚೇರಿಯ ಆವರಣವನ್ನು ಸಂಪೂರ್ಣವಾಗಿ ಶುಚಿಗೊಳಿಸಿ ರಸ್ತೆ ಬದಿಯಲ್ಲಿದ್ದ ಗಿಡಗಂಟಿಗಳನ್ನು ಕಡಿದು ಕಚೇರಿಯ ಮುಂಭಾಗದಲ್ಲಿ ಹೂ ತೋಟವನ್ನು ನಿರ್ಮಿಸಿ ಹಲವು ಬಗೆಯ ಗಿಡಗಳನ್ನು ಆವರಣದ ಸುತ್ತಲು ನೆಡುವುದರ ಮೂಲಕ ಕಚೇರಿಯನ್ನು ವರ್ಣರಂಜಿತಗೊಳಿಸಿದರು.
ತಾಲೂಕು ಕಚೇರಿಯ ಸುತ್ತಲಿನ ಗೋಡೆಯನ್ನು ಕಿರಿಯ ವಿದ್ಯಾರ್ಥಿಗಳು ಶುಚಿಗೊಳಿಸಿದರೆ, ಹಿರಿಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಸುಣ್ಣ ಬಣ್ಣವನ್ನು ಬಳಿದು ಕಚೇರಿಯ ಗೋಡೆಗಳನ್ನು ಅಂದಗೊಳಿಸಿದರು. ಕೆಲವು ಗಂಟೆಗಳಲ್ಲಿಯೇ ವಿದ್ಯಾರ್ಥಿಗಳು ತಾಲೂಕು ಕಚೇರಿಯನ್ನು ಹೊಸ ಕಚೇರಿಯನ್ನಾಗಿ ರೂಪುಗೊಳಿಸಿದರು.
ತಹಶೀಲ್ದಾರ್ ಪ್ರಶಾಂತ್ ವಿದ್ಯಾರ್ಥಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-ಹೆಚ್.ಕೆ. ಜಗದೀಶ್