ಚೆಯ್ಯಂಡಾಣೆ, ಆ. ೪: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಚೇಲಾವರ, ನರಿಯಂದಡ, ಕೋಕೇರಿ, ಕರಡ, ಅರಪಟ್ಟುಗಳಲ್ಲಿ ಕಾರ್ಯಾಚರಿಸುತ್ತಿರುವ ಹೋಂಸ್ಟೇಗಳಿಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ತೆರಳಿ ಪರಿಶೀಲಿಸಿದರು. ಹೋಂಸ್ಟೇಗಳಲ್ಲಿ ಎಷ್ಟು ಕೊಠಡಿಗಳಿವೆ ಎಂಬ ಮಾಹಿತಿ ಕಲೆಹಾಕಿದರು. ನೋಂದಣಿ ನವೀಕರಿಸದ ಹೋಂಸ್ಟೇ ಮಾಲೀಕರಿಗೆ ಮಾಹಿತಿ ನೀಡಿ ಕೂಡಲೇ ನವೀಕರಿಸಲು ಸೂಚನೆ ನೀಡಿದರು.
ಪರವಾನಗಿ ನವೀಕರಿಸದಿದ್ದರೆ ಅಂತಹ ಹೋಂಸ್ಟೇಗಳ ವಿರುದ್ಧ ಮುಂದಿನ ದಿನಗಳಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಪಂಚಾಯಿತಿ ಅಧಿಕಾರಿಗಳು ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಅಳವಡಿಸಿದ್ದ ಅನುಮತಿ ಪಡೆಯದ ನಾಮಫಲಕಗಳನ್ನು ಇದೇ ಸಂದರ್ಭ ತೆರವುಗೊಳಿಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಬಿದ್ದಪ್ಪ, ಬಿಲ್‌ಕಲೆಕ್ಟರ್ ದಿನೇಶ್ ಹಾಗೂ ಗ್ರಾ.ಪಂ. ಸಿಬ್ಬಂದಿಗಳು ಹಾಜರಿದ್ದರು.
ತೆರಿಗೆ ಪಾವತಿಸಲು ಸೂಚನೆ
ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ನರಿಯಂದಡ, ಚೇಲಾವರ, ಕೋಕೇರಿ, ಕರಡ, ಪೊದವಾಡ ಹಾಗೂ ಅರಪಟ್ಟು ಗ್ರಾಮಗಳ ಗ್ರಾಮಸ್ಥರು ೨೦೨೨-೨೦೨೩ನೇ ಸಾಲಿನ ಮನೆ ಕಂದಾಯ, ನೀರಿನ ತೆರಿಗೆ, ಪರವಾನಗಿ ಶುಲ್ಕವನ್ನು ಪಾವತಿಸಲು ಬಾಕಿ ಉಳಿಸಿಕೊಂಡವರು ಕೂಡಲೇ ಪಂಚಾಯಿತಿಗೆ ತೆರಿಗೆಯನ್ನು ಪಾವತಿಸಿ ರಶೀದಿ ಪಡೆದುಕೊಳ್ಳಬೇಕೆಂದು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಅಂಗಡಿ ಹಾಗೂ ಹೋಂಸ್ಟೇ ಮಾಲೀಕರು ಪರವಾನಗಿ (ಲೈಸನ್ಸ್ )ಅವಧಿಯು ಮಾರ್ಚ್ ೩೧ಕ್ಕೆ ಮುಕ್ತಾಯಗೊಂಡಿರುವುದರಿAದ ತಾ. ೩೦ ರೊಳಗೆ ಪರವಾನಗಿ (ಲೈಸನ್ಸ್) ನವೀಕರಿಸಿಕೊಳ್ಳಬೇಕೆಂದು ನರಿಯಂದಡ ಗ್ರಾಮ ಪಂಚಾಯಿತಿ ಪತ್ರಿಕಾ ಪ್ರಕಟಣೆ ತಿಳಿಸಿದೆ.