ಮಡಿಕೇರಿ, ಜು. ೨೭: ಕೊಡಗು ಜಿಲ್ಲೆಯಲ್ಲಿ ಜುಲೈ ೨೦ರ ಬಳಿಕ ಪುಷ್ಯ ಮಳೆ ಆರಂಭಗೊAಡಿದ್ದು, ಇದೀಗ ೮ ದಿವಸಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣದಲ್ಲಿ ಹೆಚ್ಚಳ ಕಂಡುಬAದಿದೆ. ಜುಲೈ ೨೦ರ ತನಕವೂ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.೫೦ರಷ್ಟು ಮಳೆ ಇಳಿಮುಖಗೊಂಡಿತ್ತು. ಇದೀಗ ಮೆಲ್ಲ ಮೆಲ್ಲನೆ ಜಿಲ್ಲೆಯ ಸರಾಸರಿ ಮಳೆ ಕಳೆದ ವರ್ಷದ ಅಂಕಿ - ಅಂಶದತ್ತ ಸಾಗುತ್ತಿದೆ. ಪ್ರಸ್ತುತ ಜಿಲ್ಲಾ ಸರಾಸರಿ ಅವಲೋಕಿಸಿದರೆ ಕಳೆದ ವರ್ಷಕ್ಕಿಂತ ಕೇವಲ ೧೫ ಇಂಚಿನಷ್ಟು ಮಾತ್ರ ಮಳೆ ಕಡಿಮೆಯಿದೆ. ಕಳೆದ ವರ್ಷ ಜನವರಿಯಿಂದ ಈ ಅವಧಿಯಲ್ಲಿ ಜಿಲ್ಲಾ ಸರಾಸರಿ ೭೫.೨೧ ಇಂಚುಗಳಷ್ಟಾಗಿತ್ತು. ಇದೀಗ ಈ ಪ್ರಮಾಣ ೬೦ ಇಂಚಿಗೆ ಏರಿಕೆಯಾಗಿದೆ.

ಮಡಿಕೇರಿ ತಾಲೂಕಿನಲ್ಲೂ ಮಳೆಯ ಪ್ರಮಾಣ ಹೆಚ್ಚಳವಾಗುತ್ತಿದೆ. ಕಳೆದ ವರ್ಷ ಈ ಅವಧಿಯಲ್ಲಿ ೧೦೫.೫೨ ಇಂಚು ಮಳೆಯಾಗಿತ್ತು. ಜುಲೈ ೨೦ರ ತನಕವೂ ಕಡಿಮೆ ಪ್ರಮಾಣದಲ್ಲಿದ್ದ ಮಳೆ ಇದೀಗ ೮೭.೬೪ ಇಂಚಿಗೆ ಹೆಚ್ಚಳವಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ಕಳೆದ ಬಾರಿ ೫೯.೪೩ ಇಂಚುಗಳಾಗಿತ್ತು. ಇದೀಗ ಈ ತಾಲೂಕಿನಲ್ಲೂ ಸರಾಸರಿ ಮಳೆ ೪೪.೫೫ ಇಂಚಿಗೆ ಏರಿಕೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಇದೀಗ ಸರಾಸರಿ ಮಳೆ ೪೭.೫೪ ಇಂಚಿಗೆ ಏರಿಕೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ೬೦.೬೧ ಇಂಚು ಸುರಿದಿತ್ತು. ಕಳೆದೆರಡು ದಿನಗಳ ಹಿಂದೆಗೆ ಹೋಲಿಸಿದರೆ ಮಳೆಯ ರಭಸ ಇದೀಗ ಕಡಿಮೆಯಾಗಿದೆಯಾದರೂ, ಮಳೆಗಾಲದ ಚಿತ್ರಣ ಜಿಲ್ಲೆಯಲ್ಲಿ ಮುಂದುವರಿಯುತ್ತಿದೆ. ಪ್ರಸ್ತುತ ಕಾವೇರಿ ಸೇರಿದಂತೆ ಇತರ ನದಿ-ತೋಡುಗಳಲ್ಲಿ ಏರಿಕೆಯಾಗಿದ್ದ ನೀರಿನ ಮಟ್ಟ ತುಸು ಇಳಿಮುಖವಾಗಿದೆ. ಪುಷ್ಯ ಮಳೆ ಆಗಸ್ಟ್ ೨ರ ತನಕ ಮುಂದುವರೆಯಲಿದ್ದು, ಆ.೩ರಿಂದ ಆಶ್ಲೇಷಾ ಮಳೆ ನಕ್ಷತ್ರ ಪ್ರಾರಂಭಗೊಳ್ಳಲಿದೆ.