ಪೊನ್ನಂಪೇಟೆ: ದಕ್ಷಿಣ ಕೊಡಗಿನಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಪೊನ್ನಂಪೇಟೆ ತಾಲೂಕು ಹಾತೂರು ಗ್ರಾ.ಪಂ. ವ್ಯಾಪ್ತಿಯ ಕುಂದ ಗ್ರಾಮದ ಬಸವೇಶ್ವರ ಬಡಾವಣೆಗೆ ಸಂಪರ್ಕ ಕಲ್ಪಿಸುವ ಸೇತುವೆ ನೀರಿನಿಂದ ಮುಳುಗಡೆಗೊಂಡು, ಸಂಪರ್ಕ ಕಡಿತಗೊಂಡಿದೆ.
ಸ್ಥಳಕ್ಕೆ ಗೋಣಿಕೊಪ್ಪಲು ಪೊಲೀಸ್ ಠಾಣಾಧಿಕಾರಿ ದೀಕ್ಷಿತ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಎರಡು ಕಡೆ ಬ್ಯಾರಿಕೇಡ್ ಅಳವಡಿಸಿ ಬಡಾವಣೆಯ ನಿವಾಸಿಗಳಿಗೆ ಧೈರ್ಯ ತುಂಬಿ ಅವರಿಗೆ ಬೇಕಾದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಭರವಸೆ ನೀಡಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ಹಾಗೂ ಕಂದಾಯ ಇಲಾಖೆ ಅಧಿಕಾರಿ ಭೇಟಿ ನೀಡಿ ಗ್ರಾಮಸ್ಥರಿಗೆ ಬೇಕಾದ ಸವಲತ್ತುಗಳನ್ನು ಒದಗಿಸುವ ಭರವಸೆಯನ್ನು ನೀಡಿದ್ದಾರೆ.
ನೆಲ ಮಟ್ಟದಲ್ಲೇ ಅವೈಜ್ಞಾನಿಕವಾಗಿ ಸೇತುವೆಯನ್ನು ನಿರ್ಮಿಸಿರುವುದರಿಂದಾಗಿ, ಪ್ರತಿ ವರ್ಷ ಮಳೆಗಾಲಕ್ಕೆ ಸೇತುವೆ ಮುಳುಗಡೆಯಾಗುತ್ತದೆ. ಇದರಿಂದಾಗಿ ಸೇತುವೆ ಇದ್ದರೂ ಬಸವೇಶ್ವರ ಬಡಾವಣೆಯ ಜನರಿಗೆ ಮಳೆಗಾಲದಲ್ಲಿ ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ೨೦೧೮ ರಲ್ಲಿ ಈ ಮುಳುಗು ಸೇತುವೆಯನ್ನು ಕಟ್ಟಲಾಗಿದ್ದರೂ ಒಂದೆರಡು ದಿನದ ಮಳೆಗೆ ಸೇತುವೆ ಮೇಲೆ ನೀರು ತುಂಬಿ ಹರಿಯುವುದರಿಂದ ಸೇತುವೆ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ಉಪಯೋಗವಾಗುತ್ತಿಲ್ಲ. ಆದ್ದರಿಂದ ಜಿಲ್ಲಾಡಳಿತ ಮುಂದಿನ ವರ್ಷದ ಮಳೆಗಾಲದ ಒಳಗೆ ಸೇತುವೆಯನ್ನು ಮೇಲ್ಮಟ್ಟಕ್ಕೆ ನಿರ್ಮಿಸಿಕೊಡುವಂತೆ ಅಲ್ಲಿನ ನಿವಾಸಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ತಹಶೀಲ್ದಾರ್ ಭೇಟಿ
ಬಡಾವಣೆಯ ಸೇತುವೆ ಮುಳುಗಡೆ ಆಗಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ. ಕಾಲ್ನಡಿಗೆಯ ಮೂಲಕ ಹಾಡಿಗೆ ಕಾಫಿ ತೋಟವನ್ನು ಬಳಸಿ ತೆರಳುತ್ತಿದ್ದಾರೆ. ಮಾಹಿತಿ ತಿಳಿದ ಪೊನ್ನಂಪೇಟೆ ತಾಲೂಕು ತಹಶಿಲ್ದಾರ್ ಪ್ರಶಾಂತ್, ಆರ್.ಐ.ಸುಧೀಂದ್ರ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಸೇತುವೆ ಮೇಲೆ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಪೋಲಿಸರ ಸಹಾಯದಿಂದ ಯಾರು ಕೂಡ ಪ್ರವೇಶ ಮಾಡದಂತೆ ಬ್ಯಾರಿಕೇಡ್ ಅವಳಡಿಸಿ ಎಚ್ಚರಿಕೆ ನೀಡಿದ್ದಾರೆ.