ಕೊಡ್ಲಿಪೇಟೆ, ಜು. ೧೯: ಕೊಡ್ಲಿಪೇಟೆ ಸಮೀಪದ ಬೆಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಮ್ಮನೆ ಕೊರಗಲ್ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಶ್ವಾನದ ಮೇಲೆ ಧಾಳಿ ನಡೆಸಿದೆ. ಈ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದ್ದು, ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೊನ್ನೆ ರಾತ್ರಿ ೮.೩೦ ರ ಸುಮಾರಿಗೆ ಕೊರಗಲ್ ಗ್ರಾಮದ ಕೆ.ಪಿ. ಗುರುರಾಜ್ ಅವರ ಮನೆಯ ಸುತ್ತಮುತ್ತ ಸುಳಿದಾಡಿರುವ ಚಿರತೆಯನ್ನು ಕಂಡು ಶ್ವಾನ ಬೊಗಳಿದ್ದು, ಈ ಸಂದರ್ಭ ಗುರುರಾಜ್ ಅವರು ಮನೆಯ ಬಾಗಿಲು ತೆರೆದು ಶಬ್ದ ಮಾಡಿದಾಗ ಚಿರತೆ ತೋಟದೊಳಗೆ ತೆರಳಿದೆ.ಇದಕ್ಕೂ ಮುನ್ನ ಚಿರತೆಯು ಸಾಕು ನಾಯಿಗೆ ಕಚ್ಚಿ ಗಾಯಗೊಳಿಸಿದೆ. ನಿನ್ನೆ ರಾತ್ರಿ ಸಹ ಗ್ರಾಮದಲ್ಲಿ ಚಿರತೆ ಸಂಚರಿಸಿದೆ. ರಾಮೇಗೌಡ ಎಂಬವರ ಗದ್ದೆಯಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದೆ ಎಂದು ಗುರುರಾಜ್, ಪ್ರಸನ್ನ ತಿಳಿಸಿದ್ದಾರೆ. ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.