ಸೋಮವಾರಪೇಟೆ, ಜು. ೧೯: ತಾಲೂಕಿನ ಸೂರ್ಲಬ್ಬಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಇವುಗಳ ಉಪಟಳಕ್ಕೆ ಕೃಷಿ ಫಸಲು ನಷ್ಟಗೊಳ್ಳುತ್ತಿವೆ.
ಅರಣ್ಯ ಇಲಾಖಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಕಾಡಿಗೆ ಅಟ್ಟಿದರೂ ಮತ್ತೆ ತೋಟಗಳಿಗೆ ಲಗ್ಗೆಯಿಡುತ್ತಿದ್ದು, ಕಾಫಿ, ಬಾಳೆ, ಅಡಿಕೆ, ಕರಿಮೆಣಸು ಫಸಲನ್ನು ನಾಶ ಮಾಡುತ್ತಿವೆ. ಗ್ರಾಮದ ಒ.ಎಸ್. ಧರ್ಮರಾಯ ಅವರ ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ನೂರಾರು ಕಾಫಿ, ಕರಿಮೆಣಸು, ಬಾಳೆ, ಅಡಿಕೆ ಗಿಡಗಳನ್ನು ನಷ್ಟಗೊಳಿಸಿವೆ.
ಕೃಷಿ ಹಾಗೂ ಜನವಸತಿ ಪ್ರದೇಶದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬೇಕು. ತಪ್ಪಿದಲ್ಲಿ ಇಲ್ಲಿಂದ ಸೆರೆ ಹಿಡಿದು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳ ಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.