ಉಪ ಸಭಾಪತಿ ಮೇಲೆ ಕಾಗದ ಪತ್ರ ಎಸೆತ: ೧೦ ಮಂದಿ ಬಿಜೆಪಿ ಸದಸ್ಯರ ಅಮಾನತು
ಬೆಂಗಳೂರು, ಜು. ೧೯: ಕರ್ನಾಟಕ ವಿಧಾನಸಭೆಯಲ್ಲಿ ಹೈಡ್ರಾಮಾ ನಡೆದಿದ್ದು, ಉಪ ಸಭಾಪತಿ ಮೇಲೆ ಕಾಗದ ಪತ್ರ ಎಸೆದು ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ ಹಿನ್ನೆಲೆ ಬಿಜೆಪಿಯ ೧೦ ಸದಸ್ಯರನ್ನು ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ. ಸದನದಲ್ಲಿ ಅಗೌರವ ತೋರಿದ ೧೦ ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದೆ. ಬಿಜೆಪಿಯ ಡಾ. ಅಶ್ವತ್ಥ್ ನಾರಾಯಣ, ವೇದವ್ಯಾಸ ಕಾಮತ್, ಅರವಿಂದ ಬೆಲ್ಲದ್, ಧೀರಜ್ ಮುನಿರಾಜು, ಯಶಪಾಲ್ ಸುವರ್ಣ, ಸುನೀಲ್ ಕುಮಾರ್, ಆರ್. ಅಶೋಕ್, ಉಮಾನಾಥ್ ಕೋಟ್ಯಾನ್, ಆರಗ ಜ್ಞಾನೇಂದ್ರ, ಮತ್ತು ಭರತ್ ಶೆಟ್ಟಿ ಅವರನ್ನು ಸ್ಪೀಕರ್ ಯು.ಟಿ. ಖಾದರ್ ಅವರು ಅಮಾನತು ಮಾಡಿದ್ದಾರೆ. ಈ ೧೦ ಸದಸ್ಯರನ್ನು ಈ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ. ಕಲಾಪದ ವೇಳೆ ಬಿಜೆಪಿ ಸದಸ್ಯರಿಂದ ಡೆಪ್ಯುಟಿ ಸ್ಪೀಕರ್ ಮೇಲೆ ಕಾಗದ ಪತ್ರ ಎಸೆಯಲಾಗಿದ್ದು, ಈ ಸಂಬAಧ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್ ಸದಸ್ಯರು ದೂರು ನೀಡಿದ್ದಾರೆ. ಈ ದೂರಿನ ಅಧಾರದ ಮೇಲೆ ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿ, ಸದನದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕ್ರಮ ಕೈಗೊಂಡಿರುವ ಸ್ಪೀಕರ್ ಯು.ಟಿ. ಖಾದರ್ ಅವರು ಬಿಜೆಪಿಯ ೧೦ ಸದಸ್ಯರನ್ನು ಅಮಾನತು ಮಾಡಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ಪ್ರತಿಪಕ್ಷ ನಾಯಕರ ಸಭೆಗೆ ನಾಯಕರ ಆಹ್ವಾನಕ್ಕೆ ಐಎಎಸ್ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಉಪ ಸಭಾಪತಿಗಳು ಭೋಜನ ವಿರಾಮವನ್ನೂ ನೀಡದೇ ಕಲಾಪ ಮುಂದುವರೆಸಿದ್ದರಿAದ ಬಿಜೆಪಿ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಸ್ಪೀಕರ್ ನಿರ್ಧಾರದ ವಿರುದ್ಧ ಅಸಮಾಧಾನಗೊಂಡ ಬಿಜೆಪಿ ಸದಸ್ಯರು ಸಭಾಂಗಣದಲ್ಲಿ ಕಾಗದಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರು ಕಲಾಪ ನಡೆಸುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಆಕ್ರೋಶ ಹೊರ ಹಾಕಿದರು, ಸ್ಪೀಕರ್ ಯು.ಟಿ. ಖಾದರ್ ಅವರು ಸದನವನ್ನು ಊಟಕ್ಕೆ ಬಿಡುವುದಿಲ್ಲ ಮತ್ತು ಬಜೆಟ್ ಮತ್ತು ಬೇಡಿಕೆಗಳ ಮೇಲಿನ ಚರ್ಚೆ ಮುಂದುವರಿ ಯುತ್ತದೆ ಎಂದು ಹೇಳಿದರು. ಊಟಕ್ಕೆ ಹೋಗಲು ಬಯಸುವ ಸದಸ್ಯರು ಊಟ ಮಾಡಿ ಚರ್ಚೆಗೆ ಮರಳಬಹುದು ಎಂದು ಹೇಳಿದರು. ಆದರೆ ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು ಯಾವ ನಿಯಮದ ಅಡಿಯಲ್ಲಿ ಭೋಜನ ವಿರಾಮವನ್ನು ರದ್ದುಗೊಳಿಸಲಾಗಿದೆ ಎಂಬುದನ್ನು ತಿಳಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ ಸೋಮವಾರ ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಿಗೆ ಏರ್ಪಡಿಸಿದ್ದ ಔತಣಕೂಟಕ್ಕೆ ಸ್ಪೀಕರ್ ಖಾದರ್ ಆಗಮಿಸಿದ್ದನ್ನು ಬಿಜೆಪಿ ಸದಸ್ಯರು ಪದೇ ಪದೇ ಪ್ರಸ್ತಾಪಿಸಿದರು. ಸದನ ನಡೆಸುತ್ತಿರುವ ರೀತಿಯನ್ನು ಆಕ್ಷೇಪಿಸಿ ಹಲವು ಸದಸ್ಯರು ಉಪ ಸಭಾಪತಿಯವರತ್ತ ಪದೇ ಪದೇ ಪತ್ರ ಎಸೆದ ಕಾರಣ, ವಿಧಾನಸಭೆ ಮಾರ್ಷಲ್ ಗಳು ಸಭಾಪತಿಯನ್ನು ಸುತ್ತುವರಿದು ಉಪ ಸಬಾಪತಿ ಲಮಾಣಿ ರಕ್ಷಣೆಗೆ ಯತ್ನಿಸಿದರು. ನಂತರ ಉಪಸಭಾಪತಿಯವರು ಸದನವನ್ನು ಮುಂದೂಡಿದರು.
ಅಮಾನತು ಖಂಡಿಸಿ ಪ್ರತಿಭಟನೆ; ಬೊಮ್ಮಾಯಿ, ಹೆಚ್‌ಡಿಕೆ ಪೊಲೀಸ್ ವಶಕ್ಕೆ
ಬೆಂಗಳೂರು, ಜು. ೧೯: ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಸದಸ್ಯರ ಅಮಾನತು ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನಸೌಧ ಆವರಣದಲ್ಲೇ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಆರೋಗ್ಯ ಏರುಪೇರಿನಿಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುಸಿದು ಬಿದ್ದಿದ್ದಾರೆ. ಸ್ಪೀಕರ್ ನಿರ್ಣಯವನ್ನು ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಜಂಟಿ ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾನಿರತ ಮಾಜಿ ಸಿಎಂಗಳಾದ ಬೊಮ್ಮಾಯಿ, ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಿಎಂಟಿಸಿ ಬಸ್‌ನಲ್ಲಿ ತುಂಬಿಸಿ ಕರೆದೊಯ್ದರು. ಈ ವೇಳೆ ವಿಧಾನಸಭೆ ಪೂರ್ವಭಾಗದ ಪ್ರವೇಶ ದ್ವಾರದ ಬಳಿ ಶಾಸಕರ ನೂಕು ನುಗ್ಗಲು ಉಂಟಾದ ಕಾರಣ ಪ್ರವೇಶ ದ್ವಾರದ ಗಾಜು ಪುಡಿ ಆಗಿದೆ. ಮಾರ್ಷಲ್ಸ್ ಎಳೆದಾಟದಿಂದಾಗಿ ಶಾಸಕ ಯತ್ನಾಳ್ ತೀವ್ರ ಅನಾರೋಗ್ಯಕ್ಕೀಡಾಗಿದ್ದು, ಅವರ ಬಿಪಿ ಹೆಚ್ಚಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆ್ಯಂಬುಲೆನ್ಸ್ ಮೂಲಕ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಯಾಚಿನ್‌ನಲ್ಲಿ ಬೆಂಕಿ ಅವಘಡ: ಸೇನಾಧಿಕಾರಿ ಸಾವು
ಸಿಯಾಚಿನ್, ಜು. ೧೯: ಸಿಯಾಚಿನ್ ಗ್ಲೇಸಿಯರ್‌ನಲ್ಲಿ ನಡೆದ ಅಗ್ನಿ ಅವಗಢದಲ್ಲಿ ಸೇನಾಧಿಕಾರಿ ಸಾವನ್ನಪ್ಪಿದ್ದು, ಮೂವರು ಯೋಧರಿಗೆ ಗಾಯ ಗಳಾಗಿವೆ. ಮುಂಜಾನೆ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಸೇನಾ ಸಿಬ್ಬಂದಿಗಳಿಗೆ ಗಾಯಗಳಾಗಿವೆ. ತೀವ್ರವಾಗಿ ಗಾಯಗೊಂಡ ರೆಜಿಮೆಂಟಲ್ ವೈದ್ಯಕೀಯ ಅಧಿಕಾರಿ, ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರು ಗಂಭೀರ ಗಾಯಗಳಿಂದಾಗಿ ಮೃತಪಟ್ಟಿದ್ದಾರೆ. ಉಳಿದ ಮೂವರು ಸಿಬ್ಬಂದಿಗಳಿಗೆ ಹೊಗೆ ಉಸಿರಾಡುವಿಕೆ ಹಾಗೂ ಸೆಕೆಂಡ್ ಡಿಗ್ರಿ ಸುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆಯ್ತುತಿದ್ದಾರೆ. ಗಾಯಗೊಂಡ ಯೋಧರನ್ನು ಏರ್‌ಲಿಫ್ಟ್ ಮಾಡಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡು ೧೫ ಮಂದಿ ಸಾವು
ಡೆಹ್ರಾಡೂನ್, ಜು. ೧೯: ಅಲಕನಂದಾ ನದಿ ತೀರದಲ್ಲಿ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡ ಪರಿಣಾಮ ಉಂಟಾದ ಅವಘಡದಲ್ಲಿ ೧೫ ಮಂದಿ ಮೃತಪಟ್ಟು, ಅನೇಕರು ಗಾಯಗೊಂಡ ಭೀಕರ ಘಟನೆ ಉತ್ತರಾ ಖಂಡದ ಚಮೋಲಿ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದೆ. ಅನೇಕ ಗಾಯಾ ಳುಗಳ ಸ್ಥಿತಿ ಗಂಭೀರವಾಗಿರುವುದರಿAದ ಮರಣ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಮಾಮಿ ಗಂಗೆ ಯೋಜನೆಯಲ್ಲಿ ತೊಡಗಿದ್ದ ವೇಳೆ ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡಿದೆ. ಈ ವೇಳೆ ಮೂವರು ಪೊಲೀಸರು ಹಾಗೂ ಮೂವರು ಹೋಮ್ ಗಾರ್ಡ್ ಸೇರಿದಂತೆ ಒಟ್ಟು ೧೫ ಮಂದಿ ಸಾವನ್ನಪ್ಪಿದ್ದಾರೆ. ೭ ಮಂದಿ ಗಾಯಗೊಂಡಿದ್ದು ಅವರನ್ನು ಚಮೋಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲೂ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಕಳೆದ ಕೆಲವು ದಿನಗಳಿಂದ ಉತ್ತರಾಖಂಡದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಲಕಾನಂದದ ನೀರಿನ ಮಟ್ಟ ಏರಿಕೆಯಾಗಿದೆ. ಅಲಕಾನಂದದ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಪೌರಿ ಜಿಲ್ಲೆಯ ಶ್ರೀನಗರದಲ್ಲಿರುವ ಜಿವಿಕೆ ಜಲ ವಿದ್ಯುತ್ ಯೋಜನೆಯ ಅಣೆಕಟ್ಟಿನಿಂದ ಸುಮಾರು ೩,೦೦೦ ಕ್ಯೂಸೆಕ್ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಪರಿಹಾರ ಕಾರ್ಯಾಚರಣೆ ಆರಂಭಿಸಿದ್ದಾರೆ. ದುರ್ಘಟನೆಯಲ್ಲಿ ಪಿಪಲ್ಕೋಟ್ ಹೊರ ಠಾಣಾ ಇನ್‌ಚಾರ್ಜ್ ಕೂಡ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ನಿರ್ಮಾಣ ಹಂತದ ಸೇತುವೆ ಬಳಿ ಗೋಡೆ ಕುಸಿದು ೧೧ ಮಂದಿ ಕಾರ್ಮಿಕರು ಸಾವು
ಇಸ್ಲಾಮಾಬಾದ್, ಜು. ೧೯: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಹೊರವಲಯದಲ್ಲಿ ನಿರ್ಮಾಣ ಹಂತದ ಸೇತುವೆ ಬಳಿಯ ಗೋಡೆ ಕುಸಿದು ೧೧ ಕಾರ್ಮಿಕರು ಬುಧವಾರ ಮುಂಜಾನೆ ಸಾವಿಗೀಡಾಗಿದ್ದಾರೆ ಎಂದು ಪೊಲೀಸ್ ಮತ್ತು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಸೇತುವೆ ನಿರ್ಮಾಣದ ಸ್ಥಳದಲ್ಲಿನ ರಸ್ತೆಬದಿಯ ತಮ್ಮ ಟೆಂಟ್‌ಗಳಲ್ಲಿ ಕಾರ್ಮಿಕರು ಕುಳಿತಿದ್ದಾಗ ಗೋಡೆ ಬಿದ್ದಿದೆ. ಸ್ಥಳೀಯ ಪೊಲೀಸ್ ಅಧಿಕಾರಿ ಮತ್ತು ರಕ್ಷಣಾ ತುರ್ತು ಸೇವೆಯ ಮೊಹಮ್ಮದ್ ಅಕ್ರಂ ಮಾತನಾಡಿ, ನೆರೆಯ ಗೊಲ್ರಾ ಬಳಿಯಲ್ಲಿ ಮಳೆ ಸುರಿಯುತ್ತಿದ್ದು, ಈ ನಡುವೆಯೇ ಕುಸಿತ ಸಂಭವಿಸಿದೆ. ಮೃತ ದೇಹಗಳನ್ನು ಹೊರತೆಗೆಯಲಾಗಿದೆ ಎಂದು ಹೇಳಿದರು. ಜೂನ್ ೨೫ ರಿಂದ ಪಾಕಿಸ್ತಾನದಲ್ಲಿ ಮಳೆ ಸುರಿಯುತ್ತಿದೆ. ಮಳೆ ಸಂಬAಧಿತ ಘಟನೆಗಳಲ್ಲಿ ಕನಿಷ್ಟ ೧೧೨ ಜನರು ಸಾವಿಗೀಡಾಗಿದ್ದಾರೆ. ಮಳೆಯಿಂದಾಗಿ ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿ ಪಾಕಿಸ್ತಾನದ ನದಿಗಳು ತುಂಬಿ ಹರಿಯುತ್ತಿವೆ. ನೂರಾರು ಹಳ್ಳಿಗಳು ಮುಳುಗಿವೆ ಮತ್ತು ಕನಿಷ್ಟ ೧೫,೦೦೦ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಕಳೆದ ಬಾರಿ ಮಳೆಯಿಂದಾಗಿ ಮೂರನೇ ಒಂದು ಭಾಗದಷ್ಟು ಪ್ರದೇಶ ನೀರಿನಲ್ಲಿ ಮುಳುಗಿದ್ದು, ೧,೭೩೯ ಜನರು ಮೃತಪಟ್ಟಿದ್ದರು.