*ತ್ವರಿತವಾಗಿ ಪೂರ್ಣಗೊಳಿಸುವ ವಿಶ್ವಾಸ *‘ಶಕ್ತಿ’ ವರದಿಗೆ ಸ್ಪಂದನ

ಗೋಣಿಕೊಪ್ಪಲು, ಜು. ೧೯: ವೀರಾಜಪೇಟೆಯ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಅನುದಾನದಲ್ಲಿ (ಎಸ್‌ಸಿಪಿ/ಟಿಎಸ್‌ಪಿ) ರೂ. ೨೦ ಲಕ್ಷ ಪಡೆಯಲು ಕ್ರಮವಹಿಸುವಂತೆ ತಾಲೂಕು ಸಮಾಜ ಕಲ್ಯಾಣಾಧಿಕಾರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ತಾ. ೧೩ ರಂದು ಶಕ್ತಿ ದಿನಪತ್ರಿಕೆಯಲ್ಲಿ ‘ದಶಕ ಕಳೆದರೂ ಅಪೂರ್ಣ ಕಾಮಗಾರಿ - ಆಮೆಗತಿಯ ಕೆಲಸಕ್ಕೆ ಸಾರ್ವಜನಿಕರ ಆಕ್ರೋಶ’ ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ವರದಿಗೆ ಸ್ಪಂದಿಸಿರುವ ಅಧಿಕಾರಿಗಳು ಈ ಕುರಿತು ಅಗತ್ಯ ಕ್ರಮವಹಿಸುವ ಭರವಸೆ ನೀಡಿ ಪ್ರಕ್ರಿಯೆ ಆರಂಭಿಸಿದ್ದಾರೆ.

ರೂ. ೧.೯೪ ಕೋಟಿ ವೆಚ್ಚದಲ್ಲಿ ರೂಪಿಸಿದ ಭವನ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ಆದರೆ, ಹೆಚ್ಚುವರಿಯಾಗಿ ನೇರವಾಗಿ ಸಭಾಭವನಕ್ಕೆ ತೆರಳಲು ‘ಸ್ಟೇರ್‌ಕೇಸ್’, ವಾಹನ ನಿಲುಗಡೆ ಸ್ಥಳಕ್ಕೆ ‘ಇಂಟರ್ ಲಾಕ್’ ಅಳವಡಿಕೆ ಸೇರಿದಂತೆ ಇನ್ನಿತರ ಕೆಲಸವಾಗಬೇಕಾಗಿದೆ. ಇದಕ್ಕೆ ರೂ. ೨೦ ಲಕ್ಷ ಅನುದಾನಕ್ಕೆ ಅಂಬೇಡ್ಕರ್ ಯೋಜನಾಭಿವೃದ್ಧಿ ಸಂಘವನ್ನು ಕೋರಲಾಗಿದೆ. ಸಂಘ ಸ್ಥಳೀಯ ಶಾಸಕರಿಗೆ ಪ್ರಸ್ತಾವನೆ ಕಳುಹಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಭವನದ ಸಮರ್ಪಕ ನಿರ್ವಹಣೆ ಸಲುವಾಗಿ ಇಲಾಖೆಯ ಮಾರ್ಗಸೂಚಿ ಅನ್ವಯ ವೀರಾಜಪೇಟೆ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಿರ್ವಹಣಾ ಸಮಿತಿ ರಚಿಸಿ ಸಮಿತಿ ಮೂಲಕ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅನುವು ಮಾಡಿಕೊಡಲು ಅಗತ್ಯ ಕ್ರಮವಹಿಸಲಾಗಿದೆ. ಭವನ ಕಾಮಗಾರಿಗೆ ಅವಶ್ಯ ಅನುದಾನವನ್ನು ವೀರಾಜಪೇಟೆ ತಾಲೂಕು ಪಂಚಾಯಿತಿ ಹಾಗೂ ವೀರಾಜಪೇಟೆ ಪುರಸಭೆಯಿಂದ ತಲಾ ರೂ. ೧೦ ಲಕ್ಷಗಳ ಅನುದಾನವನ್ನು ಕೋರಿ ಪತ್ರ ಬರೆಯಲಾಗಿದೆ. ಹಣ ಬಿಡುಗಡೆಯಾದ ಕೂಡಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

- ಹೆಚ್.ಕೆ. ಜಗದೀಶ್