ನಾಪೋಕ್ಲು, ಜು. ೧೮: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲಜಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ದಾಂಧಲೆ ನಡೆಸಿದ್ದು, ಅಪಾರ ಪ್ರಮಾಣದ ಕೃಷಿ ಫಸಲಿಗೆ ಧಕ್ಕೆ ಉಂಟಾಗಿದೆ.

ನೆಲಜಿ ಗ್ರಾಮದ ನಿವಾಸಿ ಎಂ.ಎA.ಶಾರದಾ ಅವರ ತೋಟಗಳಿಗೆ ನುಗ್ಗಿರುವ ಕಾಡಾನೆಗಳ ಹಿಂಡು ಕಾಫಿ, ತೆಂಗು, ಬಾಳೆ ಸೇರಿದಂತೆ ವಿವಿಧ ಫಸಲುಗಳನ್ನು ತುಳಿದು ನಷ್ಟ ಉಂಟು ಮಾಡಿದೆ. ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ, ಮರಂದೋಡ, ಚೇಲಾವರ ಭಾಗಗಳಲ್ಲಿ ಕಾಡಾನೆಗಳ ಹಿಂಡು ತೋಟಗಳಿಗೆ ನುಗ್ಗಿ ದಾಂಧಲೆ ಮಾಡಿದ್ದು, ಈ ಬಗ್ಗೆ ಗ್ರಾಮಸ್ಥರು ಚೆಯ್ಯಂಡಾಣೆಯಲ್ಲಿ ಪ್ರತಿಭಟನೆಯನ್ನು ನಡೆಸಿ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕಕ್ಕಬ್ಬೆ, ಕುಂಜಿಲ, ನೆಲಜಿ ಗ್ರಾಮ ವ್ಯಾಪ್ತಿಗಳಲ್ಲಿ ಕಾಡಾನೆಗಳ ಹಿಂಡು ಅಡ್ಡಾಡುತ್ತಿದ್ದು, ಕೃಷಿ ಫಸಲನ್ನು ಧ್ವಂಸಗೊಳಿಸುತ್ತಿವೆ. ಗ್ರಾಮಸ್ಥರು ರಸ್ತೆಗಳಲ್ಲಿ ನಡೆದಾಡಲು ಭಯ ಪಡುವಂತಾಗಿದೆ. ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗೆ ಅಟ್ಟಲು ಕ್ರಮ ಕೈಗೊಳ್ಳಬೇಕು. ನಷ್ಟಕ್ಕೊಳಗಾದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. -ದುಗ್ಗಳ