ಸುಂಟಿಕೊಪ್ಪ, ಜು. ೧೬: ನಿವೇಶನ, ರಸ್ತೆ, ತಡೆಗೋಡೆ ಸೌಲಭ್ಯ ದೊರಕಿಸಿ ಕೊಡುವಂತೆ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಒತ್ತಾಯಿಸಿದರು.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ೨೦೨೨-೨೦೨೩ರ ಸಾಲಿನ ಗ್ರಾಮ ಸಭೆಯು ಕಾನ್‌ಬೈಲ್ ಹಿರಿಯ ಪ್ರಾಥಮಿಕ ಶಾÀಲೆಯ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಸಿ.ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆಯಿತು. ನಾಕೂರು ಶಿರಂಗಾಲ ಪರ್ಯಾಯ ರಸ್ತೆ ಹಾಗೂ ಕುಮುದ ಅವರ ಮನೆಯ ಸಮೀಪದ ಬೈಪಾಸ್ ರಸ್ತೆ ಹದಗಟ್ಟಿದೆ ಸರಿಪಡಿಸಿ ಎಂದು ಗ್ರಾಮದ ಪಿ.ಜಿ.ಹೆಗ್ಗಡೆ ಹೇಳಿದರು. ಕಳೆದ ೬ ವರ್ಷದಿಂದ ಗದ್ದೆ ಸಮೀಪ ಕಾಂಕ್ರೀಟ್ ರಸ್ತೆ ನಿರ್ಮಿಸಲು ಹೇಳಿದರೂ ಕಾರ್ಯಗತವಾಗಿಲ್ಲ. ೧೧ ಕೆವಿ ವಿದ್ಯುತ್ ತಂತಿ ಅಡಿಕೆ ತೋಟ ದಲ್ಲಿ ಹಾದುಹೋಗಿದ್ದು ಕಂಬವನ್ನು ಬೇರೆಡೆಗೆ ಸ್ಥಳಾಂತರಿಸಿ ಎಂದು ಗ್ರಾಮಸ್ಥರಾದ ರಾಮಯ್ಯ ಹೇಳಿದರು. ಎಸ್.ಸಿ ಕಾಲೋನಿಯಲ್ಲಿ ನಿರ್ಮಿಸಿದ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಇದನ್ನು ಸರಿಪಡಿಸಿ ಎಂದು ಗ್ರಾಮಸ್ಥರಾದ ವಸಂತ ಕುಮಾರ್ ಹೇಳಿದರು. ಪೂವಯ್ಯ ಕಾಲೋನಿ ರಸ್ತೆಯನ್ನು ಸರಿಪಡಿಸುವಂತೆ ಅಂಬೆಕಲ್ ಚಂದ್ರ ಶೇಖರ್ ಕೋರಿದರು. ಮನೆ ಸಮೀಪ ನಿರ್ಮಿಸಿದ ಚರಂಡಿಗೆ ಸ್ಲಾö್ಯಬ್ ಅಳವಡಿಸಿ ಎಂದು ಮೀನಾ ಮನವಿ ಮಾಡಿದರು. ಕಳೆದ ೨೦ ವರ್ಷದಿಂದ ನಿವೇಶನಕ್ಕೆ ಅರ್ಜಿ ಸಲ್ಲಿಸಿ ಸಾಕಾಗಿದೆ. ನಿವೇಶನ ನೀಡುವಂತೆ ರುಕ್ಮಣಿ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ೮೫ ಜನರು ನಿವೇಶನ ರಹಿತರಿದ್ದಾರೆ. ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲದೆ ನಾಕೂರು ಶಿರಂಗಾಲದಲ್ಲಿ ಬಹುತೇಕ ರಸ್ತೆ ಕಾಮಗಾರಿ ನಡೆಸಲಾಗಿದೆ. ಮುಂದಿನ ಹಂತದಲ್ಲಿ ಉಳಿದ ಕಾಮಗಾರಿ ನಡೆಸಲಾಗುವುದು. ಹಾರಂಗಿ ಹಿನ್ನೀರು ವ್ಯಾಪ್ತಿ ಮತ್ತು ವಾರಾಂತ್ಯದಲ್ಲಿ ಕಾನ್‌ಬೈಲ್ ಹಿರಿಯ ಪ್ರಾಥಮಿಕ ಶಾಲೆಯ ಸಮೀಪ ಗಾಂಜಾ ಹಾಗೂ ಮದ್ಯ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಶಾಲಾ ಮಕ್ಕಳಿಗೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದು ವಸಂತ ಕುಮಾರ್ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಸುಂಟಿಕೊಪ್ಪ ಎಎಸ್‌ಐ ಶ್ರೀನಿವಾಸ್ ಈಗಾಗಲೇ ವಾರಕ್ಕೊಮ್ಮೆ ಭೇಟಿ ನೀಡಿ ಹಾರಂಗಿ ಹಿನ್ನೀರು ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಶಾಲೆಯ ಸಮೀಪ ಪುಂಡ ಪೋಕರಿಗಳ ಉಪಟಳಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಮನೆ ಕಂದಾಯ ಅಧಿಕವಾಗಿದ್ದು, ಇದನ್ನು ಕಡಿಮೆಗೊಳಿಸುವಂತೆ ಮತ್ತು ರೈತರ ಜಾಗವನ್ನು ಕಾವೇರಿ ನಿಗಮದ ಜಾಗವೆಂದು ನಮೂದಿಸಿರುವುದನ್ನು ಸರಿ ಪಡಿಸುವಂತೆ ಅರ್ಜಿಗಳನ್ನು ನೀಡಿದ್ದು ಇದುವರೆಗೆ ಸರಿಯಾಗದೆ ರೈತರು ತೊಂದರೆಗೊಳಗಾಗಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಪಂಚಾಯಿತಿ ಅಭಿವೃಧ್ದಿ ಅಧಿಕಾರಿ ಗೂಳಪ್ಪ ಕೂತಿನಾರ್ ರಾಜ್ಯದ ೬೦೨೪ ಪಂಚಾಯಿತಿಗಳಿಗೆ ಸರ್ಕಾರ ಕಂದಾಯ ನಿಗದಿ ಪಡಿಸಿರುವುದ ರಿಂದ ಇದನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಲ್ಲರ ಸಹಕಾರ ಅಗತ್ಯ ಎಂದರು. ಸಭೆಯಲ್ಲಿ ಹಾಜರಿದ್ದ ನೋಡೆಲ್ ಅಧಿಕಾರಿ ಎಂ.ವಿ. ಮಂಜೇಶ್ ಮಾತನಾಡಿ, ಗ್ರಾಮಸ್ಥರು ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವAತೆ ಸಲಹೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಸಿ.ಜಗನ್ನಾಥ್ ಮಾತನಾಡಿ, ಕುಡಿಯುವ ನೀರಿನ ಕೊಳವೆ ಬಾವಿ ಕೆಟ್ಟು ಹೋಗಿದ್ದು, ದಾನಿಗಳ ಸಹಕಾರದಿಂದ ಗ್ರಾಮದ ಜನತೆಗೆ ಟ್ಯಾಂಕರ್‌ನ ಮೂಲಕ ನೀರಿನ ವ್ಯವಸ್ಥೆ ಮಾಡಿದ್ದೇವೆ. ಗ್ರಾಮದಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಲಾಗುವುದು. ಪಂಚಾಯಿತಿ ವತಿಯಿಂದ ಗ್ರಾಮದ ಜನತೆಗೆ ಉತ್ತಮ ಸೇವೆ ನೀಡುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಶೇ ೧೦೦ರಷ್ಟು ಫಲಿತಾಂಶ ಪಡೆದ ಪ್ರೌಢ ಶಾಲಾ ಶಿಕ್ಷಕರನ್ನು ಸನ್ಮಾನಿಸಿ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೊಳಂಬೆ ಸುಭಾಶ್, ಸದಸ್ಯರಾದ ಬಿ.ಜಿ.ರಮೇಶ್, ಸತೀಶ್, ಅರುಣಾಕುಮಾರಿ, ರಾಧಾಮಣಿ, ಸೀತೆ, ಪ್ರೇಮ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥತರಿದ್ದರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೂಳಪ್ಪ ಕೂತಿನಾರ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.