ಸೋಮವಾರಪೇಟೆ, ಜು. ೧೪: ಪಟ್ಟಣದ ಸಾಕಮ್ಮನ ಬಂಗಲೆ ಮುಂಭಾಗ ಇರುವ ಮೈದಾನದಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿರುವ, ಸುಮಾರು ಐದಾರು ವರ್ಷ ಪ್ರಾಯದ ಹಸುವೊಂದು ಕಳೆದ ಒಂದೂವರೆ ದಿನದಿಂದ ಗಾಳಿ-ಮಳೆಯಲ್ಲಿ ಕುಳಿತುಕೊಂಡಿದ್ದು, ವಾರಸುದಾರರು ಇಲ್ಲದ್ದರಿಂದ ಮೂಕ ರೋಧನೆ ಅನುಭವಿಸುತ್ತಿದೆ.

ಕಾಲಿನ ಭಾಗಕ್ಕೆ ಗಾಯವಾಗಿರುವ ಹಿನ್ನೆಲೆ ಮೇಲೇಳಲಾಗದೆ ಮಳೆಯಲ್ಲಿಯೇ ನೆನೆಯುತ್ತಿದೆ. ಆಹಾರ ನೀರು ಇಲ್ಲದೆ ನಿತ್ರಾಣಗೊಳ್ಳುತ್ತಿರುವ ಹಸುವಿನ ವಾರಸುದಾರರು ಯಾರೆಂಬುದೂ ತಿಳಿದುಬಂದಿಲ್ಲ. ಹಸುವಿನ ದಯನೀಯ ಸ್ಥಿತಿಯ ಬಗ್ಗೆ ಪ. ಪಂ. ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ೪ ಬನ್ನು ತಿನ್ನಿಸಿ ವಾಪಸ್ ತೆರಳಿದ್ದಾರೆ.

ಕುಳಿತಲ್ಲಿಯೇ ನೋವು ಅನುಭವಿಸುತ್ತಿರುವ ಹಸುವನ್ನು ಕನಿಷ್ಟ ಪಕ್ಷ ಚಿಕಿತ್ಸೆಗೆ ಒಳಪಡಿಸಿ ಉಪಚರಿಸುವ ಕೆಲಸವನ್ನೂ ಮಾಡಿಲ್ಲ. ಪಟ್ಟಣ ಪಂಚಾಯಿತಿ ಇತ್ತ ಗಮನ ಹರಿಸಿ ಮೂಕ ರೋಧನೆ ಅನುಭವಿಸುತ್ತಿರುವ ಹಸುವಿಗೆ ಚಿಕಿತ್ಸೆ ಕೊಡಿಸಬೇಕು. ಅಂತೆಯೇ ಜಾನುವಾರುಗಳನ್ನು ಬೀದಿಗೆ ಬಿಟ್ಟು ನಿರ್ಲಕ್ಷö್ಯ ತೋರುವ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.