*ಸಿದ್ದಾಪುರ, ಜು. ೧೪: ಅಮ್ಮತ್ತಿಯ ಪುಲ್ಲೇರಿ ಗ್ರಾಮದ ಇಂಜಿಲಗೆರೆಯಲ್ಲಿ ಒಂಟಿ ಸಲಗ ದಾಂಧಲೆ ನಡೆಸಿದೆ. ಸ್ಥಳೀಯ ಬೆಳೆಗಾರ ಬಿ.ಎಸ್.ಮೋಹನ ಎಂಬವರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಹಲಸಿನ ಮರವೊಂದನ್ನು ಬೀಳಿಸಿದೆ.

ಮರ ಬಿದ್ದ ಪರಿಣಾಮ ಅನೇಕ ಕಾಫಿ ಗಿಡಗಳಿಗೆ ಹಾನಿಯಾಗಿದೆ. ಮರಕ್ಕೆ ಹಬ್ಬಿಸಲಾಗಿದ್ದ ಕಾಳುಮೆಣಸಿನ ಬಳ್ಳಿ ನಾಶವಾಗಿದೆ. ಸ್ಪಿಂಕ್ಲರ್ ಪೈಪ್‌ಗಳು ಮುರಿದು ಹೋಗಿವೆ, ಬಾಳೆ ಗಿಡಗಳನ್ನು ಆನೆ ತಿಂದು ತೇಗಿದೆ. ಒಂಟಿ ಸಲಗ ತೋಟದ ತುಂಬೆಲ್ಲ ಓಡಾಡಿದ ಪರಿಣಾಮ ಗಿಡಗಳೆಲ್ಲವೂ ಹಾನಿಗೊಳಗಾಗಿದ್ದು, ಅಪಾರ ನಷ್ಟ ಉಂಟಾಗಿದೆ.

ಇಂಜಿಲಗೆರೆಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

-ಅಂಚೆಮನೆ ಸುಧಿ