ಸುಂಟಿಕೊಪ್ಪ, ಜು. ೯: ಸುಂಟಿಕೊಪ್ಪ ಹೋಬಳಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಕೊಡಗರಹಳ್ಳಿ, ಕಂಬಿಬಾಣೆ, ೭ನೇ ಹೊಸಕೋಟೆ, ಮತ್ತಿಕಾಡು, ಭೂತನಕಾಡು, ಹೇರೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಕೃಷಿಕರು ಭಯದಿಂದ ದಿನದೂಡುವಂತಾಗಿದೆ. ಬೆಳೆಗಾರರು ಬೆಳೆದ ಫಸಲನ್ನು ತಿಂದು ತೇಗಿ ತೋಟಗಳಲ್ಲಿರುವ ತೆಂಗು, ಬಾಳೆ, ಅಡಿಕೆ ಗಿಡಗಳನ್ನು ಆನೆಗಳು ನಾಶಪಡಿಸುತ್ತಿವೆ. ಕಳೆದ ಹಲವು ದಿನಗಳಿಂದ ಕಾಡಾನೆಗಳು ತೋಟದಲ್ಲಿ ವಾಸ್ತವ್ಯ ಹೂಡಿದ್ದು, ಬೆಳ್ಳಂಬೆಳಗ್ಗೆ ವಾಯುವಿಹಾರಕ್ಕೆ ತೆರಳುವವರಿಗೆ ಗಜಪಡೆಯ ದರ್ಶನವಾಗುತ್ತಿದೆ. ವಾಹನ ಸವಾರರಿಗೂ ಗಜಪಡೆ ಭಯ ಹುಟ್ಟಿಸಿದೆ. ಸುಮಾರು ೧೨ ಅಡಿ ಎತ್ತರದ ಸಲಗದ ಜೊತೆಯಲ್ಲಿ ಇತರೆ ನಾಲ್ಕು ಕಾಡಾನೆಗಳು ಈ ವಿಭಾಗದಲ್ಲಿ ವಿಪರೀತ ಪುಂಡಾಟಿಕೆ ತೋರುತ್ತಿದೆ. ಕೆಲ ದಿನಗಳಿಂದ ಆಹಾರವನ್ನು ಅರಸಿ ಮನೆಯಂಗಳಕ್ಕೂ ಬರುತ್ತಿರುವ ಕಾಡಾನೆಗಳು ಸಿಕ್ಕಿದ ವಸ್ತುಗಳನ್ನು ತುಳಿದು ನಾಶಪಡಿಸುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈಗಾಗಲೇ ಅರಣ್ಯ ಇಲಾಖೆ ವತಿಯಿಂದ ಆನೆ ಹಾವಳಿ ತಡೆಗೆ ಕ್ಷಿಪ್ರ ಕಾರ್ಯಪಡೆ ರಚಿಸಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯ ಮುಂದುವರೆದಿದ್ದರೂ ಅಟ್ಟುವ ಸಮಯದಲ್ಲಿ ಮಾತ್ರ ತೋಟದಿಂದ ತೆರಳುವ ಕಾಡಾನೆಗಳು ಮತ್ತೆ ರಾತ್ರಿ ವೇಳೆ ಬಂದು ಬೆಳೆಗಾರರು ಬೆಳೆದ ಫಸಲನ್ನು ನಾಶಪಡಿಸುತ್ತಿದೆ. ಇದರಿಂದ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ, ಶಾಲಾ ವಿದ್ಯಾರ್ಥಿಗಳಿಗೆ, ವಾಹನ ಸವಾರರಿಗೆ ಜೀವವನ್ನು ಕೈಯಲ್ಲಿ ಹಿಡಿದು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳ ಉಪಟಳದಿಂದ ತೋಟದಲ್ಲಿ ಬೆಳೆದ ಫಸಲು ಕೈಗೆ ಸಿಕ್ಕದಂತಾಗಿದೆ. ತೀವ್ರ ಆತಂಕದಲ್ಲಿರುವ ಕೃಷಿಕರು ಕಾಡಾನೆ ಹಾವಳಿ ತಡೆಗೆ ಸರಕಾರ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

-ರಾಜುರೈ