ಮಡಿಕೇರಿ, ಜು. ೯: ಮಾನವೀಯ ಸ್ನೇಹಿತರ ಒಕ್ಕೂಟದ ವತಿಯಿಂದ ಇತ್ತೀಚೆಗೆ ಮಡಿಕೇರಿಯ ತಣಲ್ ಸಂಸ್ಥೆಯ ನಡೆಯಲಾಗದ ಹಿರಿಯ ಮಾತೆಯರಿಗೆ ಅನುಕೂಲವಾಗುವಂತೆ ಗಾಲಿ ಕುರ್ಚಿ ಒಂದನ್ನು ನೀಡಲಾಗಿದ್ದು, ಅದರ ಬೆನ್ನಲ್ಲೇ ಇಂದು ಒಕ್ಕೂಟದ ಆಶ್ರಯದಲ್ಲಿ ಅಲ್ಲಿನ ಹಿರಿಯ ಜೀವಿಗಳಿಗೆ ಚಳಿ ತಡೆಯುವ ಸ್ವೆಟರ್ ಹಾಗೂ ಸ್ಕಾರ್ಫ್ಗಳನ್ನು ವಿತರಿಸ ಲಾಯಿತು. ಹಾತಿ ಜಯಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಈ ಸರಳ ಕಾರ್ಯಕ್ರಮ ನಡೆಯಿತು. ವಿವಿಧ ಕಾರಣಗಳಿಂದ ನೊಂದು ಬಂದು ತಣಲ್‌ನಲ್ಲಿ ಆಶ್ರಯ ಪಡೆಯುತ್ತಿರುವ ಇಳಿವಯಸ್ಸಿನವರೂ ಸೇರಿದಂತೆ ೪೦ ಮಂದಿ ಮಹಿಳೆಯರು ಈ ಸೌಲಭ್ಯ ಪಡೆದುಕೊಂಡರು.
ಈ ಸಂದರ್ಭ ಮಾತನಾಡಿದ ತಣಲ್ ಸಂಸ್ಥೆಯ ವಕ್ತಾರ ಮಹಮ್ಮದ್ ಮುಸ್ತಫ ಅವರು, ಮಾನವೀಯ ಸ್ನೇಹಿತರ ಒಕ್ಕೂಟವು ಕಳೆದ ಕೆಲವು ವರ್ಷಗಳಿಂದ ಒಂದು ವಾಟ್ಸಾö್ಯಪ್ ಗ್ರೂಪನ್ನು ರಚಿಸಿಕೊಂಡು ನೊಂದವರ ಕಣ್ಣೀರು ಒರೆಸುವ ಉತ್ತಮ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಉತ್ತಮ ಕಾರ್ಯಕ್ರಮ ಗಳನ್ನು ನಡೆಸುವ ಮೂಲಕ ಈ ಒಕ್ಕೂಟವು ಇತರ ಸಂಘಟನೆಗಳಿಗೆ ಮಾದರಿ ಆಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಒಕ್ಕೂಟದ ಸದಸ್ಯರುಗಳಾದ ಎಂ.ಇ. ಮಹಮ್ಮದ್, ಪಿ.ಪಿ. ಸುಕುಮಾರ್, ಜಾನ್ ಬೆನೆಟ್, ಮನ್ಸೂರ್ ಫರ್ಝ್, ಗಾಯತ್ರಿ ನರಸಿಂಹ, ಹನೀಫ್ ಸೋನಾ, ಪ್ರತಿನಿಧಿಗಳಾದ ಮಾಜಿ ಯೋಧ ಡೇವಿಡ್ ವೇಗಸ್, ಅನಿಲ್ ಕುಮಾರ್, ಲೀಲಾವತಿ ಮುಂತಾದವರು ಉಪಸ್ಥಿತರಿದ್ದರು.