ಮಡಿಕೇರಿ, ಜು. ೩: ರಾಜ್ಯದ ಈ ಹಿಂದಿನ ಸರ್ಕಾರ ಕೊಡಗು ಜಿಲ್ಲೆಯ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾಯಿತ ಕ್ಷೇತ್ರಗಳ ಸೀಮಾ ಗಡಿ ನಿರ್ಣಯ ಕುರಿತು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ನಡಾವಳಿಯ ಶಿಫಾರಸ್ಸಿನ ಮೇರೆಗೆ ತಾ. ೨-೧-೨೦೨೩ ರಂದು ಅಧಿಸೂಚನೆ ಹೊರಡಿಸಿತ್ತು. ಈ ಅದಿಸೂಚನೆ ನಿಯಮ ಬಾಹಿರವಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರ ನಿರ್ದೇಶನದ ಮೇರೆಗೆ ಕೊಡಗು ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ಅವರು ಕರ್ನಾಟಕ ಹೈ ಕೋರ್ಟ್ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಸಂಬAಧ ರಾಜ್ಯ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟೀಸ್ ಜಾರಿ ಮಾಡಿದೆ.

ರಾಜ್ಯ ಹೈಕೋರ್ಟ್ ವಕೀಲರಾದ ಶ್ರೀಮತಿ ಲೀಲಾ ದೇವಾಡಿಗರವರ ಮೂಲಕ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ತೆನ್ನಿರ ಮೈನಾರವರು ಕರ್ನಾಟಕ ರಾಜ್ಯ ಸರ್ಕಾರದ ಅಧಿಸೂಚನೆಯಲ್ಲಿ ಕರ್ನಾಟಕ ಪಂಚಾಯತ್ ರಾಜ್ ಸೀಮಾ ಆಯೋಗದ ಮಾರ್ಗ ಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು ಇವುಗಳನ್ನು ಸರಿಪಡಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ ಪ್ರಕರಣ ೧೬೦, ೧೬೧, ಮತ್ತು ೧೬೩ ಅನ್ವಯ ಹಾಗೂ ೩೦೮(ಇ) (ಎಫ್) ಪ್ರಕರಣ ದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ನಿಗದಿ ಪಡಿಸಲಾದ ಕ್ಷೇತ್ರಗಳು ದೋಷದಿಂದ ಕೂಡಿರುವುದನ್ನು ರಿಟ್ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

೧) ಕೊಡಗು ಜಿಲ್ಲೆಯಲ್ಲಿ ಹಿಂದೆ ೨೯ ಏಕ ಸದಸ್ಯ ಕ್ಷೇತ್ರಗಳಿದ್ದು ಪ್ರಸ್ತುತ ಅಧಿಸೂಚನೆಯಲ್ಲಿ ೨೫ ಕ್ಷೇತ್ರಗಳಿಗೆ ಇಳಿಸಲಾಗಿದೆ.ಈ ಪ್ರಕ್ರಿಯೆ ಯಲ್ಲಿ ೨೦೧೧ರ ಜನಗಣತಿಯನ್ನು ಪರಿಗಣಿಸಿರುವುದು ಸರಿಯಲ್ಲ.

(ಮೊದಲ ಪುಟದಿಂದ) ೨) ಕೊಡಗು ಜಿಲ್ಲಾ ಪಂಚಾಯತ್ ಗೆ ಸಂಬAದಿಸಿದAತೆ ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಅಧಿನಿಯಮ ಸೆಕ್ಷನ್ ೧೬೦ ಅನ್ವಯ ಪ್ರತಿ ಕ್ಷೇತ್ರಕ್ಕೆ ೧೮ ಸಾವಿರ ಜನ ಸಂಖ್ಯೆ ಮಾನದಂಡವಾಗಿದ್ದರೂ ಕೆಲವು ಕ್ಷೇತ್ರಗಳಲ್ಲಿ ೧೫ ಸಾವಿರವಿದ್ದು, ಮತ್ತೆ ಕೆಲವು ಕ್ಷೇತ್ರಗಳಲ್ಲಿ ೨೩ ಸಾವಿರದಷ್ಟು ಇವೆ. ಇದಕ್ಕೆ ನಿದರ್ಶನವೆಂಬAತೆ ಚೆನ್ನಯ್ಯನ ಕೋಟೆ, ಶನಿವಾರಸಂತೆ ಕ್ಷೇತ್ರಗಳಲ್ಲಿ ೨೩ ಸಾವಿರಕ್ಕೂ ಅಧಿಕ ಮತದಾರರು ಇದ್ದರೆ, ವಾಲ್ನೂರು ತ್ಯಾಗತ್ತೂರು, ಹೆಬ್ಬಾಲೆ ಕ್ಷೇತ್ರಗಳಲ್ಲಿ ೧೫ ಸಾವಿರ ಜನ ಸಂಖ್ಯೆವಿದೆ.

೩) ಮಕ್ಕಂದೂರು ಕ್ಷೇತ್ರದ ಗಾಳಿಬೀಡು, ಹಮ್ಮಿಯಾಲ, ಕಾಲೂರು, ಮೊಣ್ಣಂಗೇರಿ, ಮಕ್ಕಂದೂರು, ಮುಕ್ಕೋಡ್ಲು, ಕಳಕೇರಿ ನಿಡುಗಣೆ, ಕರ್ಣಂಗೇರಿ, ಹೆಬ್ಬಟ್ಟಗೇರಿ, ಕಡಗದಾಳು, ಇಬ್ನಿವಳವಾಡಿ ಗ್ರಾಮಗಳು ೨೦೮ ಮಡಿಕೇರಿ ಕ್ಷೇತ್ರ ವ್ಯಾಪ್ತಿಯಲ್ಲಿದ್ದರೆ ಮೇಕೇರಿ, ಬಿಳಿಗೇರಿ ಕ್ಷೇತ್ರಗಳು ೨೦೯ ವೀರಾಜಪೇಟೆ ಕ್ಷೇತ್ರದಲ್ಲಿವೆ, ಕಾಂತೂರು ಮೂರ್ನಾಡು ಕ್ಷೇತ್ರದ ಮರಗೋಡು, ಸೊಡ್ಲೂರು, ಕಟ್ಟೆಮಾಡು, ಅರೆಕಾಡು, ಹೊಸ್ಕೇರಿ, ಕಾಂತೂರು, ಕಿಗ್ಗಾಲು, ಎಂ.ಬಾಡಗ, ಮುತ್ತಾರ್ಮುಡಿ ಗ್ರಾಮಗಳು ೨೦೮ ಮಡಿಕೇರಿ ಕ್ಷೇತ್ರದಲ್ಲಿದ್ದರೆ ಹಾಕತ್ತೂರು, ಕಗ್ಗೋಡ್ಲು ೨೦೯ ವೀರಾಜಪೇಟೆ ಕ್ಷೇತ್ರದಲ್ಲಿವೆ.

೪) ಕರ್ನಾಟಕ ಪಂಚಾಯತ್ ರಾಜ್ ಸೀಮಾ ಆಯೋಗದ ನಿಯಮಗಳಲ್ಲಿ ಕ್ಷೇತ್ರಕ್ಕೆ ಹೆಸರು ನೀಡುವಾಗ ಹೆಚ್ಚಿನ ಜನಸಂಖ್ಯೆ ಇರುವ ಪಂಚಾಯತ್ ಹೆಸರು ನಮೂದಿಸಿರಬೇಕು ಎಂಬ ಸ್ಪಷ್ಟ ಉಲ್ಲೇಖವಿದ್ದರೂ ಕಡಗದಾಳು ಹೆಸರಿನ ಬದಲಿಗೆ ಮಕ್ಕಂದೂರು ಕ್ಷೇತ್ರವೆಂದು, ಸಿದ್ದಾಪುರ ಹೆಸರಿನ ಬದಲಿಗೆ ಚೆನ್ನಯ್ಯನ ಕೋಟೆ ಹೆಸರು ನೀಡಲಾಗಿದೆ.

೫) ಸೀಮಾ ಗಡಿ ನಿರ್ಣಯ ಅಯೋಗದ ನಿಯಮಾನುಸಾರ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ಸಂಪರ್ಕ ಸರಾಗವಾಗಿ ಇರಬೇಕು. ಜಲಾಶಯಗಳು, ಅರಣ್ಯಗಳು ಮಧ್ಯ ಬರದ ಹಾಗೆ ಗುರುತಿಸಬೇಕು ಎಂದು ನಿಯಮ ಇದ್ದರೂ ಸಂಪಾಜೆ ಕ್ಷೇತ್ರದ ಕೆ. ಪೆರಾಜೆಯಿಂದ ಕಾರುಗುಂದ ಗ್ರಾಮಕ್ಕೆ ಮಧ್ಯೆ ಸಂಪಾಜೆ ಮೀಸಲು ಅರಣ್ಯವಿದ್ದು ಸುಮಾರು ೬೦ ಕಿ.ಮೀ ದೂರ ಕ್ರಮಿಸಬೇಕಿದೆ.

೬) ನಿಯಮದಲ್ಲಿ ಗ್ರಾಮ ಪಂಚಾಯಿತಿಯ ಗ್ರಾಮಗಳನ್ನು ವಿಭಜಿಸಬಾರದು ಎಂಬ ಉಲ್ಲೇಖವಿದ್ದರೂ ನಾಪೋಕ್ಲು ಪಂಚಾಯಿತಿ ವ್ಯಾಪ್ತಿಯ ಬೇತು ಗ್ರಾಮವನ್ನು ಹೊದ್ದೂರು ತಾಲೂಕು ಪಂಚಾಯಿತಿಗೆ ಸೇರಿಸಲಾಗಿದೆ.

ಈ ಕಾರಣಗಳಿಂದ ಸರ್ಕಾರ ೨-೧-೨೦೨೩ ರಂದು ಹೊರಡಿಸಿರುವ ಎರಡು ಅಧಿಸೂಚನೆಗಳನ್ನು (ಸಂಖ್ಯೆ: ಕಪಂರಾಸೀನಿಆ/೧೯/ ಸೀನಿಆ/ ೨೦೨೨) ರದ್ದುಪಡಿಸಿ ಹೊಸದಾಗಿ ನ್ಯೂನತೆ ರಹಿತವಾಗಿ ಕ್ಷೇತ್ರ ಸೀಮಾ ಗಡಿ ಮತ್ತು ಕ್ಷೇತ್ರಗಳನ್ನು ರಚಿಸಬೇಕು ಎಂದು ರಿಟ್ ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಕರ್ನಾಟಕ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ, ರಾಜ್ಯ ಚುನಾವಣಾ ಆಯೋಗಕ್ಕೆ ಮತ್ತು ಕೊಡಗು ಜಿಲ್ಲಾಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿದೆ.