ನಾಪೋಕ್ಲು, ಜು. ೩: ಮಕ್ಕಳ ಬಿಸಿ ಊಟದ ಸಾಂಬಾರಿನ ಬಣ್ಣ ಬದಲಾಗಿ ಆತಂಕ ಸೃಷ್ಟಿಯಾದ ಘಟನೆ ಸಮೀಪದ ಪೇರೂರು ಶಾಲೆಯಲ್ಲಿ ನಡೆದಿದೆ.

ಶಾಲೆಯಲ್ಲಿ ಸೋಮವಾರ ಎಸ್‌ಡಿಎಂಸಿ ಸಭೆಯನ್ನು ಏರ್ಪಡಿಸಲಾಗಿತ್ತು. ಎಂದಿನAತೆ ಮುಖ್ಯ ಅಡುಗೆಯವರಾದ ಕಟ್ಟಿ ಎಂಬವರು ಶಾಲಾ ವಿದ್ಯಾರ್ಥಿಗಳಿಗೆ ಬಿಸಿ ಊಟವನ್ನು ಸಿದ್ಧಪಡಿಸಿದ್ದರು. ಮಧ್ಯಾಹ್ನ ವಿದ್ಯಾರ್ಥಿಗಳಿಗೆ ಬಿಸಿ ಊಟವನ್ನು ನೀಡಿದ ಬಳಿಕ ಶಿಕ್ಷಕರು ಬಿಸಿ ಊಟ ಮಾಡಲು ಅಣಿಯಾದ ಸಂದರ್ಭ ಸಾಂಬಾರಿನ ಬಣ್ಣ ಹಸಿರಾಗಿ ಬದಲಾವಣೆಗೊಂಡು ನೊರೆ ಬರುತ್ತಿದ್ದುದರಿಂದ ಶಿಕ್ಷಕರಿಗೆ ಅನುಮಾನ ಉಂಟಾಗಿದೆ. ಶಾಲಾ ಮುಖ್ಯ ಶಿಕ್ಷಕಿ ಶೋಭಾ ಕೂಡಲೇ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಶಾಲೆಗೆ ಹಾಜರಾಗಿದ್ದ ೨೨ ವಿದ್ಯಾರ್ಥಿಗಳನ್ನು ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಪರೀಕ್ಷೆಗೊಳಪಡಿಸಿದ್ದು, ಸೂಕ್ತ ಆರೋಗ್ಯ ಸಲಹೆ ನೀಡಿ ಕಳುಹಿಸಲಾಗಿದೆ.

ಸಮುದಾಯ ಆರೋಗ್ಯ ಕೇಂದ್ರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಭೇಟಿ ನೀಡಿ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದರು. ಪತ್ರಿಕೆಯೊಂದಿಗೆ ಮಾತನಾಡಿದ ಅವರು ಸೋಮವಾರ ಶಾಲೆಯಲ್ಲಿ ಶಿಕ್ಷಕರು ಬಿಸಿ ಊಟ ಮಾಡುವ ಸಂದರ್ಭ ಸಾಂಬಾರಿನ ಬಣ್ಣ ಬದಲಾವಣೆಯಾಗಿದ್ದು, ಈ ಬಗ್ಗೆ ಇಲಾಖೆ ಗಮನಕ್ಕೆ ತಂದಿದ್ದಾರೆ. ಮಕ್ಕಳು ಬಿಸಿಯೂಟವನ್ನು ಸೇವಿಸಿದ್ದು, ಅನುಮಾನಗೊಂಡ ಶಿಕ್ಷಕರು ಮಕ್ಕಳ ಆಹಾರದಲ್ಲಿ ಏನಾದರೂ ವ್ಯತ್ಯಾಸವಾಗಿರಬಹುದೇ ಎಂಬುದನ್ನು ಪರೀಕ್ಷಿಸಲು ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಮಕ್ಕಳ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಉಂಟಾಗಿಲ್ಲ ಎಂದು ವೈದ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

ಮುಖ್ಯ ಶಿಕ್ಷಕಿ ಶೋಭಾ ಮಾತನಾಡಿ, ಮಕ್ಕಳಿಗೆ ನೀಡಿದ ಊಟದಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. ಸಾಂಬಾರಿನಲ್ಲಿ ವ್ಯತ್ಯಾಸ ಕಂಡುಬAದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದರು. ಈ ಘಟನೆ ಸಂಬAಧ ಶಾಲೆ ವತಿಯಿಂದ ನಾಪೋಕ್ಲು ಠಾಣೆಗೆ ದೂರು ನೀಡಲಾಗಿದೆ.

-ದುಗ್ಗಳ.