ಕುಶಾಲನಗರ, ಜು. ೩: ಕಾಫಿ ತೋಟ ಒಂದರ ಬೇಲಿಗೆ ಅಕ್ರಮವಾಗಿ ಅಳವಡಿಸಿದ್ದ ಉರುಳಿಗೆ ಸಿಲುಕಿ ಚಿರತೆ ಒಂದು ಸ್ಥಳದಲ್ಲೇ ಬಲಿಯಾಗಿರುವ ಘಟನೆ ಕುಶಾಲನಗರದ ಸಮೀಪ ಗುಡ್ಡೆಹೊಸೂರು ಪಂಚಾಯಿತಿ ವ್ಯಾಪ್ತಿಯ ಅತ್ತೂರು ಮೀಸಲು ಅರಣ್ಯ ವಲಯದ ಬೊಳ್ಳೂರು ಗ್ರಾಮದಲ್ಲಿ ನಡೆದಿದೆ.
ಗುಡ್ಡೆಹೊಸೂರು ಹಾರಂಗಿ ರಸ್ತೆಯ ಅಂಚಿನಲ್ಲಿರುವ ನಿಜಾಮುದ್ದೀನ್ ಎಂಬವರ ತೋಟದಲ್ಲಿ ಈ ಘಟನೆ ಸೋಮವಾರ ಮುಂಜಾನೆ ನಡೆದಿದ್ದು ಅಂದಾಜು ನಾಲ್ಕು ವರ್ಷ ಪ್ರಾಯದ ಗಂಡು ಚಿರತೆ ಉರುಳಿಗೆ ಬಲಿಯಾಗಿದೆ ಎಂದು ಕುಶಾಲನಗರ ಅರಣ್ಯ ವಲಯ ಅಧಿಕಾರಿ ಕೆ.ವಿ. ಶಿವರಾಮ್ ತಿಳಿಸಿದ್ದಾರೆ.
ಸ್ಥಳೀಯರ ಮಾಹಿತಿ ಮೇರೆಗೆ ಕುಶಾಲನಗರ ಉಪವಲಯ ಅರಣ್ಯ ಅಧಿಕಾರಿ ಡಿಸೋಜ, ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಮ್, ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ಮಡಿಕೇರಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ ಅವರುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಫಿ ತೋಟದ ಮಾಲೀಕರು ಕುಶಾಲನಗರ ಬಳಿ ವಾಸವಿದ್ದು ಇಲಾಖೆ ಅಧಿಕಾರಿಗಳು ಅವರ ವಿಚಾರಣೆ ನಡೆಸುತ್ತಿದ್ದಾರೆ.
ವನ್ಯಜೀವಿ ವಿಭಾಗದ ವೈದ್ಯರಾದ ಡಾ. ಚಟ್ಟಿಯಪ್ಪ, ಡಾ. ರಮೇಶ್ ಅವರುಗಳು ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಆನೆಕಾಡು ಬಳಿ ಚಿರತೆಯ ಅಂತ್ಯ ಸಂಸ್ಕಾರ ನಡೆಸಲಾಯಿತು.