ಮೈಸೂರು, ಜೂ. ೨೬: ಮೈಸೂರು ವಿಭಾಗದಲ್ಲಿ ಸರ್ಕಾರದ ಅನುದಾನ ಪಡೆದು ನಡೆಯುತ್ತಿರುವ ವಿಜ್ಞಾನ ಕೇಂದ್ರ, ಪ್ಲ್ಯಾನಿಟೋರಿಯಂ ಮತ್ತು ಧಾಮಗಳಿಗೆ ಖರ್ಚು ಮಾಡದ ಅನುದಾನ ಹಿಂಪಡೆಯಬೇಕು ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ, ತಂತ್ರ ಸಚಿವ ಎನ್.ಎಸ್. ಬೋಸರಾಜು ಸೂಚನೆ ನೀಡಿದರು.

ಮೈಸೂರಿನಲ್ಲಿ ಇಂದು ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಮೈಸೂರು, ಹಾಸನ, ಚಿಕ್ಕಮಗಳೂರು, ಉಡುಪಿ, ಮಡಿಕೇರಿ, ವಿಜ್ಞಾನ ಕೇಂದ್ರ ಹಾಗೂ ಪ್ಲ್ಯಾನಿಟೋರಿಯಮ್‌ಗಳ ನಿರ್ಮಾಣ ಮಾಡಲು ಅನುದಾನ ನೀಡಿದರೂ ಕೂಡ ಏಕೆ ಖರ್ಚು ಮಾಡಿಲ್ಲ ಎಂದು ಪ್ರಶ್ನಿಸಿದರು. ೧೦-೧೫ವರ್ಷ ಕಳೆದರೂ ಭೂಮಿ ಇಲ್ಲ ಎಂಬ ಕಾರಣದಿಂದ ಹಣ ಖರ್ಚು ಮಾಡದಿರುವ ಜಿಲ್ಲಾಧಿಕಾರಿಗಳ ಪಿಡಿ ಖಾತೆಗಳಿಂದ ಹಣ ವಾಪಸ್ಸು ಪಡೆಯಲು ವಿಜ್ಞಾನ, ತಂತ್ರಜ್ಞಾನ ಇಲಾಖೆ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದರು. ವಿವಿಧ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರಗಳಿಗೆ ನೀಡಿದ ಭೂಮಿಯನ್ನು ಇಲಾಖೆ ಹೆಸರಲ್ಲಿ ಪಡೆದು ದಾಖಲೆ ಇಡಬೇಕು ಹಾಗೂ ವಿಜ್ಞಾನ ಕೇಂದ್ರ ಮತ್ತು ಪ್ಲ್ಯಾನಿಟೋರಿಯಂ ವಿದ್ಯಾರ್ಥಿಗಳಿಗೆ ಉಪಯೋಗ ಆಗುವ ರೀತಿಯಲ್ಲಿ ನಡೆಸಿ ಎಂದು ಸೂಚಿಸಿದರು.