ಚೆಯ್ಯಂಡಾಣೆ, ಜೂ. ೨೬: ನಾಪೋಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ಚೆರಿಯಪರಂಬು ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಿ ಕೊಡುವಂತೆ ಒತ್ತಾಯಿಸಿ ನಾಪೋಕ್ಲು ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್. ಎಸ್.ಪಾರ್ವತಿ ಅವರಿಗೆ ಮನವಿ ಪತ್ರ ನೀಡಿದ ಗ್ರಾಮಸ್ಥರು ಚೆರಿಯಪರಂಬು ಗ್ರಾಮವು ಪ್ರವಾಹ ಪೀಡಿತ ಗ್ರಾಮವಾಗಿದೆ. ಗ್ರಾಮದ ರಸ್ತೆಗೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಗಾಲದಲ್ಲಿ ನೀರು ರಸ್ತೆಯಲ್ಲಿಯೇ ಶೇಖರಣೆಗೊಂಡು ಶಾಲಾ ಮಕ್ಕಳು, ಸಾರ್ವಜನಿಕರು ನಡೆದಾಡಲು ತೊಂದರೆ ಎದುರಿಸುತ್ತಿದ್ದಾರೆ. ಅದರಂತೆ ಗ್ರಾಮದಲ್ಲಿ ಬೀದಿ ದೀಪಗಳಿಲ್ಲದೆ ಕತ್ತಲಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಇದ್ದು, ಪಂಚಾಯಿತಿ ವತಿಯಿಂದ ಗ್ರಾಮಕ್ಕೆ ಆಗಬೇಕಾದ ಮೂಲಭೂತ ಸೌಕರ್ಯಗಳನ್ನು ತ್ವರಿತವಾಗಿ ಒದಗಿಸಿ ಕೊಡಬೇಕೆಂದು ಗ್ರಾಮಸ್ಥರು ಮನವಿ ಸಲ್ಲಿಸಿದರು. ಈ ಸಂದರ್ಭ ಪರವಂಡ ಸಿರಾಜ್, ಅಬ್ದುಲ್ ರಜಾಕ್, ಬಶೀರ್, ಅಫೀಲ್, ರಶೀದ್, ಅಬ್ದುಲ್ ಖಾದರ್ ಮತ್ತಿತರರು ಇದ್ದರು.