(ಅಣ್ಣೀರ ಹರೀಶ್ ಮಾದಪ್ಪ)

ಶ್ರೀಮಂಗಲ, ಜೂ. ೨೬: ಹಲವು ವೈದ್ಯಕೀಯ ಆರೋಗ್ಯ ಸೇವೆ ನೀಡುವ ನಾಮಫಲಕ ಅಳವಡಿಸಿಕೊಂಡು, ನೈಜವಾಗಿ ಅಂತಹ ಯಾವುದೇ ಸೇವೆಯನ್ನು ನೀಡದೇ ಇರುವ ಖಾಸಗಿ ಆರೋಗ್ಯ ಕೇಂದ್ರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪೊನ್ನಪೇಟೆ ತಾಲೂಕು ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ (ಟಿ. ಶೆಟ್ಟಿಗೇರಿ ಬಿರುನಾಣಿ ಮುಖ್ಯರಸ್ತೆ ಬದಿಯಲ್ಲಿ) ಸಂಘ ಮಿತ್ರ ಸೇವಾ ಕೇಂದ್ರ ಎಂದು ಹೆಸರು ಹಾಕಿಕೊಂಡು ಕಳೆದ ಮೂರು ನಾಲ್ಕು ವರ್ಷಗಳಿಂದ ಕೇಂದ್ರದಲ್ಲಿ ಯಾವುದೇ ವೈದ್ಯರು ಇಲ್ಲದೇ ಟೆಲಿ ಮೆಡಿಸನ್, ಮಕ್ಕಳ ಆರೋಗ್ಯ ಸೇವೆ ತುರ್ತು ಚಿಕಿತ್ಸೆ ಇತ್ಯಾದಿ ಆರೋಗ್ಯ ಸೇವೆ ನೀಡುವ ನಾಮಫಲಕ ದೊಂದಿಗೆ ಕೇಂದ್ರದ ಎದುರು ೨ ಆಂಬ್ಯುಲೆನ್ಸ್ಗಳನ್ನು ನಿಲ್ಲಿಸಿರುವುದು ಕಂಡುಬAದಿದೆ. ಆದರೆ ಈ ಆರೋಗ್ಯ ಕೇಂದ್ರದಲ್ಲಿ ಯಾವುದೇ ವೈದ್ಯರು, ಆರೋಗ್ಯ ಸೇವೆ ಲಭ್ಯವಿರುವುದಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

(ಮೊದಲ ಪುಟದಿಂದ) ಕೇಂದ್ರದಲ್ಲಿ ಕೇವಲ ಒಬ್ಬ ಮಹಿಳಾ ಶುಶ್ರೂಷಕಿ ಹಗಲಿನಲ್ಲಿ ಮಾತ್ರ ಇರುತ್ತಾರೆ. ಕೇಂದ್ರದ ಕಟ್ಟಡದ ಶೇ. ೯೦ ಭಾಗ ಮತ್ತು ಒಳರೋಗಿಗಳ ಕೊಠಡಿ ಇತ್ಯಾದಿಗಳಿಗೆ ಬೀಗ ಜಡಿಯಲಾಗಿದೆ.

ಹೊರಗೆ ಒಂದು ಕೊಠಡಿಯನ್ನು ಮಾತ್ರ ತೆರೆದಿದ್ದು ಅದರಲ್ಲಿ ಎರಡು ಬೆಂಚು ಎರಡು ಮೇಜುಗಳನ್ನು ಇಡಲಾಗಿದ್ದು ಅಲ್ಲಿ ಯಾವುದೇ ಉಪಕರಣಗಳು, ಔಷಧಿ ಸೇರಿದಂತೆ ಇತರ ಯಾವುದೇ ವೈದ್ಯಕೀಯ ಸೌಲಭ್ಯ ಇಲ್ಲದಿರುವುದು ಕಂಡುಬAದಿದೆ.

ಖಾಸಗಿ ಆರೋಗ್ಯ ಕೇಂದ್ರದ ಹೊರಗೆ ಒಂದು ಟೆಂಪೋ ಟ್ರಾವೆಲರ್ ಆಂಬ್ಯುಲೆನ್ಸ್ ಮತ್ತು ಮಾರುತಿ ಓಮಿನಿ ಆಂಬ್ಯುಲೆನ್ಸ್ ಇದ್ದು ಕೇಂದ್ರದ ಎದುರು ಮಣ್ಣು ಹಿಡಿಯುತ್ತಾ ಕಳೆದ ಹಲವಾರು ವರ್ಷಗಳಿಂದ ನಿಂತಿವೆ. ಎರಡು ಆಂಬ್ಯುಲೆನ್ಸ್ಗಳಿಗೆ ಚಾಲಕರು ಇರುವುದಿಲ್ಲ ಹಾಗೂ ಈ ಎರಡು ಆಂಬ್ಯುಲೆನ್ಸ್ಗಳು ಚಾಲನ ಸ್ಥಿತಿಯಲ್ಲಿ ಇರುವುದಿಲ್ಲ. ಮೇಲ್ನೋಟಕ್ಕೆ ಕೇಂದ್ರದಲ್ಲಿ ತುರ್ತು ಚಿಕಿತ್ಸೆ, ಟೆಲಿಮಿಡಿಸನ್, ಮಕ್ಕಳ ಆರೋಗ್ಯ ಸೇವೆ ಸೇರಿದಂತೆ ಒಳರೋಗಿ ಹಾಗೂ ಹೊರರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಗಳು ಕಂಡುಬರುತ್ತದೆ. ಆದರೆ ತುರ್ತು ಸಂದರ್ಭ ಇಲ್ಲಿಗೆ ರೋಗಿಗಳು ಆಗಮಿಸಿದರೆ ಅಂತಹ ಯಾವುದೇ ಸೌಲಭ್ಯ ಇಲ್ಲ ಹಾಗೂ ತುರ್ತು ಆರೋಗ್ಯ ಚಿಕಿತ್ಸೆಗೆ ಇಲ್ಲಿಗೆ ಆಗಮಿಸಿದರೆ ಆಂಬ್ಯುಲೆನ್ಸ್ಗಳು ಇದ್ದರೂ ಅವು ಚಾಲನೆ ಇಲ್ಲದೆ ಇರುವುದು ಕಂಡು ಬರುತ್ತದೆ. ಈ ಬಗ್ಗೆ ಸ್ಥಳೀಯ ಗ್ರಾಮಸ್ಥರು ಖಾಸಗಿ ಆರೋಗ್ಯ ಕೇಂದ್ರದ ಬಗ್ಗೆ ಪರಿಶೀಲಿಸಿದ ಸಂದರ್ಭ ಆರೋಗ್ಯ ಕೇಂದ್ರದ ಒಂದು ಕೋಣೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಕೋಣೆಗಳನ್ನು ಬೀಗ ಜಡಿದು ಮುಚ್ಚಿರುವುದು ಗೋಚರಿಸಿದೆ. ಹಲವು ವರ್ಷಗಳ ಹಿಂದೆ ಶ್ರೀಮಂಗಲ ಕೊರೊನಾ ಟ್ರಸ್ಟ್ನ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ. ವೆಂಕಟೇಶ್ ಅವರು ಇಲ್ಲಿ ಈ ಕೇಂದ್ರವನ್ನು ತೆರೆದಿದ್ದು ಕೇಂದ್ರದ ನಾಮಫಲಕದಲ್ಲಿ ನಮೂದಿಸಿರುವಂತೆ ಯಾವುದೇ ಆರೋಗ್ಯ ಸೇವೆ ದೊರೆಯುತ್ತಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ಕೋಣೆಯೊಳಗೆ ಹಸು : ಕೇಂದ್ರದ ಹಿಂಬದಿಯಲ್ಲಿ ಹಸು ಒಂದನ್ನು ಕೋಣೆಯಲ್ಲಿ ಕಟ್ಟಿಹಾಕಲಾಗಿದ್ದು ಸುಮಾರು ಆರು ತಿಂಗಳಿನಿAದ ಹೊರಗೆ ಬಿಟ್ಟಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದರಿಂದ ಈ ಹಸು ದಿನ ನಿತ್ಯ ಕಿರುಚುತ್ತಿದ್ದು ಇದರಿಂದ ಕೇಂದ್ರದ ಆಸುಪಾಸಿನ ಜನರಿಗೆ ತೊಂದರೆಯಾಗುತ್ತಿದೆ ಹಾಗೂ ಇದು ಪ್ರಾಣಿ ಹಿಂಸೆ ಮಾಡಿದಂತೆ ಆಗಿದೆ ಎಂದು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಶ್ರೀಮಂಗಲ ಪಶು ವೈದ್ಯಾಧಿಕಾರಿ ಡಾ. ಗಿರೀಶ್ ಅವರಿಗೆ ಗ್ರಾಮಸ್ಥರು ದೂರು ನೀಡಿ ಅವರು ಕೇಂದ್ರಕ್ಕೆ ಆಗಮಿಸಿ ಹೊರಗೆ ನೆಲೆಸಿರುವ ಕೇಂದ್ರದ ಮುಖ್ಯಸ್ಥ ಡಾ. ವೆಂಕಟೇಶ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು. ಹಸುವನ್ನು ಒಳಗೆ ಕಟ್ಟಿದ್ದಲ್ಲಿಯೇ ಒಣ ಹುಲ್ಲುಗಳನ್ನು ಮತ್ತು ನೀರುಗಳನ್ನು ನೀಡಿ ಬಿಟ್ಟಿರುವುದು ಸರಿಯಲ್ಲ ಅದಕ್ಕೆ ಹೊರಗೆ ಹಸಿರು ಹುಲ್ಲು ಆಹಾರವನ್ನು ಒದಗಿಸಬೇಕು. ಕೋಣೆಯಿಂದ ಹೊರಗೆ ಬಿಡಬೇಕು ಅಥವಾ ಹಗ್ಗ ಸಹಿತ ಹೊರಗೆ ದಿನದ ಕೆಲವು ಗಂಟೆಗಳ ಕಾಲವಾದರೂ ಹಸುವಿನ ಆರೋಗ್ಯ ದೃಷ್ಟಿಯಿಂದ ಕಟ್ಟಬೇಕೆಂದು ಸೂಚಿಸಿದರು.