ಮಡಿಕೇರಿ, ಜೂ. ೨೬: ಕುತೂಹಲ ಮೂಡಿಸಿದ್ದ ಮಡಿಕೇರಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎಸ್.ಸಿ. ಸತೀಶ್ ಆಯ್ಕೆಯಾಗಿದ್ದಾರೆ.

ಹದಿನಾರು ಮಂದಿ ಸದಸ್ಯರನ್ನೊಳಗೊಂಡ ಮಡಿಕೇರಿ ನಗರಸಭೆ ಬಿಜೆಪಿ ಆಡಳಿತದಲ್ಲಿದ್ದು ಇಂದು ಪಕ್ಷದ ಕಚೇರಿಯಲ್ಲಿ ನಗರ ಅಧ್ಯಕ್ಷ ಮನು ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸತೀಶ್ ಅವರನ್ನು ಆಯ್ಕೆ ಮಾಡಲಾಗಿದೆ. ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಸೇರಿದಂತೆ ಕೆಲವರ ಹೆಸರು ಕೇಳಿ ಬಂದಿತ್ತು. ಈ ನಡುವೆ ಸದಸ್ಯ ಅರುಣ್ ಶೆಟ್ಟಿ ಪ್ರಬಲ ಆಕಾಂಕ್ಷಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ಎಲ್ಲ ಸದಸ್ಯರುಗಳ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಕೆಲವರು ಸತೀಶ್ ಪರ ಬೆಂಬಲ ಸೂಚಿಸಿದ್ದಾರೆ. ಆದರೆ, ಅರುಣ್ ಶೆಟ್ಟಿ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮತಕ್ಕೆ ಹಾಕಲಾಯಿತು. ಇದರಲ್ಲಿ ಸತೀಶ್ ಪರ ಹನ್ನೊಂದು ಮತಗಳು ಲಭಿಸಿದರೆ ಅರುಣ್ ಶೆಟ್ಟಿಗೆ ನಾಲ್ಕು ಮತಗಳು ಲಭ್ಯವಾದವು. ಮೊದಲ ಅವಧಿಗೆ ಅಧ್ಯಕ್ಷರಾಗಿದ್ದ ಉಮೇಶ್ ಸುಬ್ರಮಣಿ ಊರಲ್ಲಿ ಇಲ್ಲದ್ದರಿಂದ ಗೈರಾಗಿದ್ದರು. ಅಂತಿಮವಾಗಿ ಸತೀಶ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.