ವೀರಾಜಪೇಟೆ, ಜೂ. ೨೧: ಅರಣ್ಯ ಇಲಾಖೆ ಮಾಕುಟ್ಟ ಚೆಕ್‌ಪೋಸ್ಟ್ ಮೂಲಕ ಕರ್ನಾಟಕ ರಾಜ್ಯವನ್ನು ಪ್ರವೇಶಿಸುವ ಎಲ್ಲಾ ವಾಹನಗಳಿಂದ ಅಧಿಕೃತವಾಗಿ ಹಗಲು ದರೋಡೆ ನಡೆಸುತ್ತಿದ್ದು ಪ್ರತಿದಿನ ತೆರಿಗೆ ರೂಪದಲ್ಲಿ ಸಾವಿರಾರು ರೂಪಾಯಿ ಸಂಗ್ರಹ ಮಾಡುತ್ತಿದೆ. ಇಂತಹ ಸಂಗ್ರಹಕ್ಕೆÀ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ಹಾಗೂ ವಿರೋಧ ವ್ಯಕ್ತವಾಗಿದೆ.

ಪ್ರಧಾನ ಮುಖ್ಯ ಸಂರಕ್ಷಾಣಾಧಿ ಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರು ಬೆಂಗಳೂರು ಇವರ ನಿರ್ದೆಶನದಂತೆ ಅರಣ್ಯ ಸಂರಕ್ಷಣಾಧಿಕಾರಿಗಳು ಕೊಡಗು ವೃತ್ತ ಮಡಿಕೇರಿ ಇವರ ಅಧಿಕೃತ ಜ್ಞಾಪನ ಪತ್ರ (೨೭.೦೩.೨೩)ದಲ್ಲಿ ವೀರಾಜಪೇಟೆ ಮಾಕುಟ್ಟ ಅರಣ್ಯ ತನಿಖಾ ಠಾಣೆ ಮತ್ತು ಮಡಿಕೇರಿ ವನ್ಯಜೀವಿ ವಿಭಾಗದ ತಲಕಾವೇರಿ ವನ್ಯಧಾಮದ ಮಾರ್ಗದಲ್ಲಿ ಹಾದುಹೋಗುವ ಅಂತರರಾಜ್ಯ ವಾಹನಗಳಿಗೆ ಪ್ರವೇಶ ಶುಲ್ಕ ವಿಧಿಸಲಾಗುತ್ತಿದೆ. ವೀರಾಜಪೇಟೆ ಪ್ರಾದೇಶಿಕ ವಿಭಾಗದ ಮಾಕುಟ್ಟ ಅರಣ್ಯ ತನಿಖಾ ಠಾಣೆ ಮತ್ತು ಮಡಿಕೇರಿ ವನ್ಯಜೀವಿ ವಿಭಾಗದ ತಲಕಾವೇರಿ ವನ್ಯಧಾಮದ ಮಾರ್ಗದಲ್ಲಿ ಹಾದುಹೋಗುವ ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಂತರರಾಜ್ಯಗಳಿAದ ಯಥೇಚ್ಚವಾಗಿ ವಾಹನಗಳ ಸಂಚರಿಸುತ್ತಿದ್ದು ರಸ್ತೆ ಬದಿಗಳ ಅಭಿವೃದ್ಧಿ ೧೦೧ ಹಾಗೂ ರಸ್ತೆ ಬದಿಗಳಲ್ಲಿ ತ್ಯಾಜ್ಯ ವಸ್ತುಗಳ ವಿಲೇವಾರಿ ಮತ್ತು ಸ್ವಚ್ಛತೆ ಕಾಪಾಡುವ ಸಲುವಾಗಿ ಅಂತರ ರಾಜ್ಯಗಳಿಂದ ಆಗಮಿಸುವ ವಾಹನಗಳಿಂದ ಪ್ರವೇಶ ಶುಲ್ಕವನ್ನು ವೀರಾಜಪೇಟೆ ವಿಭಾಗದ ಮಾಕುಟ್ಟ ತನಿಖಾ ಠಾಣೆ ಮತ್ತು ಮಡಿಕೇರಿ

(ಮೊದಲ ಪುಟದಿಂದ) ವನ್ಯಜೀವಿ ವಿಭಾಗದ ತಲಕಾವೇರಿ ವನ್ಯಧಾಮದ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ೦೧.೦೪.೨೩ ರಿಂದ ಜಾರಿಗೆ ಬರುವಂತೆ ಆದೇಶಿಸಿದ್ದಾರೆ. ಪ್ರತಿ ಲಘು ವಾಹನಗಳಿಂದ ೨೦ ರೂಪಾಯಿಗಳು, ಬಾರಿ ಮೋಟಾರು ವಾಹನಗಳಿಂದ ೫೦ ರೂಗಳನ್ನು ಸಂಗ್ರಹಿಸುವAತೆ ನಮೂದಿಸಲಾಗಿದೆ.

ಪ್ರತಿದಿನ ೫೦೦ ರಿಂದ ೬೦೦ ವಾಹನಗಳು ಕೇರಳ, ಪಾಂಡಿಚೇರಿ, ತಮಿಳುನಾಡು ಹಾಗೂ ಮಂಗಳೂರು ಭಾಗಗಳಿಂದ ಕರ್ನಾಟಕ ರಾಜ್ಯವನ್ನು ಪ್ರವೇಶಿಸುತ್ತಿವೆ. ಕೇರಳದ ಮಟ್ಟನೂರಿನಲ್ಲಿರುವ ಅಂತರರಾಜ್ಯ ವಿಮಾನ ನಿಲ್ದಾಣದಿಂದ ಆಗಮಿಸುವವರ ಸಂಖ್ಯೆಯು ಹೆಚ್ಚಿದೆ. ಕೊಡಗು ಜಿಲ್ಲೆ ಪ್ರವಾಸೋದ್ಯಮದಲ್ಲಿ ಭಾರತದ ಭೂಪಟದಲ್ಲಿ ಗುರುತಿಸಿಕೊಂಡಿರುವುದಿAದ ಪ್ರವಾಸಿಗರು ಹೆಚ್ಚಾಗಿ ಆಗಮಿಸು ತ್ತಿದ್ದಾರೆ. ಅದರಲ್ಲೂ ಶನಿವಾರ ಮತ್ತು ಭಾನುವಾರ ಒಂದು ಸಾವಿರಕ್ಕು ಅಧಿಕ ವಾಹನಗಳು ಸಂಚರಿಸುತ್ತವೆ. ಪ್ರತಿ ವಾಹನಗಳಿಂದ ಶುಲ್ಕ ಸಂಗ್ರಹಿಸಲಾಗುತ್ತಿದೆ. ಪ್ರತಿದಿನ ೧೦ ಸಾವಿರಕ್ಕು ಅಧಿಕ ಶುಲ್ಕ ಸಂಗ್ರಹಿಸಲಾಗುತ್ತಿದೆ.

ಪ್ರಧಾನ ಮುಖ್ಯ ಸಂರಕ್ಷಾಣಾಧಿ ಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರು ಬೆಂಗಳೂರು ಇವರ ನಿರ್ದೆಶನದಂತೆ ಅರಣ್ಯ ಸಂರಕ್ಷಣಾಧಿಕಾರಿಗಳು ಕೊಡಗು ವೃತ್ತ ಮಡಿಕೇರಿ ಇವರ ಅಧಿಕೃತ ಜ್ಞಾಪನ ಪತ್ರ (೨೭.೦೩.೨೩)ದಲ್ಲಿ ಅಂತರ ರಾಜ್ಯಗಳಿಂದ ಬರುವ ವಾಹನಗಳು ಎಂದು ಸ್ಪಷ್ಟವಾಗಿ ನಮೂದಿಸಿದ್ದರೂ ನಮ್ಮ ರಾಜ್ಯದ ವಾಹನಗಳಿಂದಲೂ ತೆರಿಗೆ ಸಂಗ್ರಹಿಸಲಾಗುತ್ತಿದೆ. ಕೊಡಗು ಜಿಲ್ಲೆಯಿಂದ ಕೇರಳಕ್ಕೆ ತೆರಳಿದ ವಾಹನಗಳಿಂದ ಶುಲ್ಕ ಸಂಗ್ರಹಿಸುವುದು ಬೇಡ ಎಂದು ಅಧಿಕಾರಿಗಳು ಮೌಖಿಕ ಆದೇಶ ನೀಡಿದ್ದಾರೆ.

ಜಿಲ್ಲೆಯ ವಾಹನಗಳಿಂದ ಹಣ ಸಂಗ್ರಹಿಸುತ್ತಿಲ್ಲ ಎಂದು ತನಿಖಾ ಠಾಣಾ ಅಧಿಕಾರಿಗಳು ಹೇಳಿದರು ಸಂಗ್ರಹಗಾರ ಎಲ್ಲಾ ವಾಹನಗಳಿಂದ ಹಣ ಸಂಗ್ರಹಿಸುತ್ತಿರುವುದು ಸ್ಥಳಕ್ಕೆ ತೆರಳಿದಾಗ ಕಂಡು ಬಂದಿದೆ.

ಅರಣ್ಯ ಇಲಾಖೆ ರಸ್ತೆ ಬದಿ ಅಭಿವೃದ್ಧಿ ಹಾಗೂ ಪ್ರವಾಸಿಗರು ರಸ್ತೆ ಬದಿಯಲ್ಲಿ ಹಾಕುವ ತ್ಯಾಜ್ಯ ವಸ್ತುಗಳು ವಿಲೆವಾರಿ ನಡೆಸಲು ಹಣ ಸಂಗ್ರಹಿಸುತ್ತಿದ್ದಾರೆ. ವಾಸ್ತವವಾಗಿ ರಸ್ತೆ ಬದಿಗಳಲ್ಲಿ ತ್ಯಾಜ್ಯಗಳು ಮನಬಂದAತೆ ರಾರಾಜಿಸುತ್ತಿವೆ. ಭಾರಿ ವಾಹನಗಳು ಸಂಚರಿಸುವ ಈ ಮಾರ್ಗದ ಕೆಲವು ಕಡೆಗಳಲ್ಲಿ ರಸ್ತೆ ಬದಿಗಳಲ್ಲಿ ಕಾಡು ಬೆಳೆದುಕೊಂಡಿದೆ. ಕಾಂಕ್ರೀಟ್ ರಸ್ತೆಗಳ ಬದಿ ನಿರ್ವಹಣೆ ಇಲ್ಲದೆ ಬಾರಿ ವಾಹನಗಳು ಮತ್ತೊಂದು ವಾಹನಕ್ಕೆ ಬದಿ ಕೊಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ.

ಎಲ್ಲೆಂದರಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳು, ಪ್ಲಾಸ್ಟಿಕ್ ಚೀಲಗಳು, ಮದ್ಯದ ಬಾಟಲಿಗಳು ಕಂಡು ಬರುತ್ತಿವೆ. ರಸ್ತೆ ಅಭಿವೃದ್ಧಿ ಹಾಗೂ ರಸ್ತೆ ಬದಿ ಕಸ ವಿಲೇವಾರಿಗೆ ಹಣ ತೆರಿಗೆ ರೂಪದಲ್ಲಿ ಹಣ ಸಂಗ್ರಹಣೆ ಮಾಡಿದ ಮೇಲೆ ಆ ಹಣ ಯಾವುದಕ್ಕೆ ಉಪಯೋಗವಾಗುತ್ತಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈ ಹಿಂದೆ ಕೇರಳ ರಾಜ್ಯದಿಂದ ಮಾಕುಟ್ಟ ಚೆಕ್‌ಪೋಸ್ಟ್ ಮೂಲಕ ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಕೇರಳ ರಾಜ್ಯದಿಂದ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿತ್ತು. ಅರಣ್ಯ ಇಲಾಖೆಯ ಗಮನಕ್ಕೆ ಬಂದರೂ ಕೂಡ ಇಲಾಖಾಧಿಕಾರಿಗಳು ಮೂಕಪ್ರೇಕ್ಷಕರಾಗಿದ್ದರು. ಅರಣ್ಯ ಪ್ರದೇಶದಲ್ಲಿ ತ್ಯಾಜ್ಯ ಸುರಿಯುತ್ತಿರುದನ್ನು ‘ಶಕ್ತಿ’ ಪತ್ರಿಕೆ ವಿಸ್ತೃತ ವರದಿ ಮಾಡಿದ ಹಿನ್ನಲೆಯಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಂತರ ರಾಜ್ಯದಿಂದ ಬರುವ ವಾಹನಗಳಿಂದ ತೆರಿಗೆ ಸಂಗ್ರಹಿಸಿ ಅದರಲ್ಲಿ ಬರುವ ಹಣವನ್ನು ರಸ್ತೆ ಬದಿ ಅಭಿವೃದ್ಧಿ ಹಾಗೂ ತ್ಯಾಜ್ಯ ವಿಲೇವಾರಿಗೆ ವಿನಿಯೋಗಿಸುವ ನಿಟ್ಟಿನಲ್ಲಿ ಜ್ಞಾಪನ ಪತ್ರವನ್ನು ಹೊರಡಿಸಿದೆ ಎಂದು ಹೆಸರು ಹೇಳಲು ಇಚ್ಚಿಸದ ಅರಣ್ಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಆದರೆ ಸಂಗ್ರಹವಾಗುವ ಹಣವನ್ನು ಅದೇ ಯೋಜನೆಗೆ ಉಪಯೋಗಿಸುತ್ತಾರೊ ಇಲ್ಲವೊ ಎಂಬುದು ಯಕ್ಷ ಪ್ರಶ್ನೆಯಾಗಿದೆ.

- ಪಾರ್ಥ ಚಿಣ್ಣಪ್ಪ