ಸೋಮವಾರಪೇಟೆ, ಜೂ. ೧೬: ಇಲ್ಲಿನ ಕೃಷಿ ಇಲಾಖೆ ಮೂಲಕ ಅರ್ಹ ರೈತರಿಗೆ ನೀಡಲಾಗುವ ಟಾರ್ಪಲ್‌ಗಳನ್ನು ಶಾಸಕ ಮಂಥರ್ ಗೌಡ ಅವರು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಿದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟಾರ್ಪಲ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಪ್ರಸ್ತುತ ವಿತರಣೆಯಾಗುತ್ತಿರುವ ಟಾರ್ಪಲ್‌ಗಳಲ್ಲಿ ಗುಣಮಟ್ಟದ ಕೊರತೆಯಿರುವ ಬಗ್ಗೆ ರೈತರು ಮಾಹಿತಿ ನೀಡಿದ್ದು, ಮುಂದಿನ ದಿನಗಳಲ್ಲಿ ಗುಣಮಟ್ಟದ ಟಾರ್ಪಲ್‌ಗಳನ್ನು ವಿತರಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಕೊಡಗಿನಲ್ಲಿ ನಾಲ್ಕು ತಿಂಗಳು ಮಳೆ, ನಂತರ ಬಿರು ಬಿಸಿಲಿನ ವಾತಾವರಣವಿದ್ದು, ಈಗ ವಿತರಿಸುತ್ತಿರುವ ಟಾರ್ಪಲ್‌ಗಳು ಹೆಚ್ಚು ಕಾಲ ಬಾಳಿಕೆ ಬರುತ್ತಿಲ್ಲ. ಟಾರ್ಪಲ್ ವಿತರಣೆಯ ಟೆಂಡರ್ ರಾಜ್ಯಮಟ್ಟದಲ್ಲಿ ನಡೆಯುತ್ತಿದೆ. ಈ ಹಿನ್ನೆಲೆ ಕೊಡಗಿಗೆ ವಿಶೇಷ ಆದ್ಯತೆ ನೀಡಿ ಹೆಚ್ಚು ಗುಣಮಟ್ಟದ ಟಾರ್ಪಲ್ ವಿತರಣೆಯೊಂದಿಗೆ ಹೆಚ್ಚುವರಿ ಟಾರ್ಪಲ್‌ಗಳನ್ನು ಒದಗಿಸಲು ಅಧಿವೇಶನದಲ್ಲಿ ಗಮನ ಸೆಳೆಯುವುದಾಗಿ ತಿಳಿಸಿದರು.

ಅಧಿಕಾರಿಗಳು ಯಾವುದೇ ಶಿಫಾರಸ್ಸಿಗೆ ಮಣೆಹಾಕದೇ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಬೇಕು ಎಂದ ಅವರು, ಟಾರ್ಪಲ್‌ಗಳನ್ನು ಪಡೆದವರು ಅದನ್ನು ಬೇರೆಯವರಿಗೆ ಮಾರಾಟ ಮಾಡಬಾರದು ಎಂದು ಕಿವಿಮಾತು ನುಡಿದರು.

ಕೃಷಿಕ ದಿನೇಶ್ ಮಾತನಾಡಿ, ಕೃಷಿ ಇಲಾಖೆಯಿಂದ ಭತ್ತದ ಬಿತ್ತನೆ ಬೀಜದ ತಳಿಗಳಾದ ಅತಿರಾ ಮತ್ತು ಇಂಟಾನ್ ನೀಡಲಾಗುತ್ತಿದೆ. ಆದರೆ ಬೆಳೆ ಕಟಾವು ಮಾಡಿ ಅತಿರಾ ಮತ್ತು ಇಂಟಾನ್ ಭತ್ತವನ್ನು ಎಂ.ಎಸ್.ಪಿ.ಗೆ ನೀಡಿದರೆ ಖರೀದಿಸುತ್ತಿಲ್ಲ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ ಎಂದು ಶಾಸಕ ಗಮನ ಸೆಳೆದರು.

ಮುಂದೆ ಇಂತಹ ಸನ್ನಿವೇಶ ಸೃಷ್ಟಿಯಾದರೆ ತನ್ನ ಗಮನಕ್ಕೆ ತನ್ನಿ. ಸಂಬAಧಿಸಿದ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಯಾದವ್ ಬಾಬು, ಆರ್‌ಎಂಸಿ ಮಾಜಿ ಅಧ್ಯಕ್ಷ ಬಿ.ಬಿ. ಸತೀಶ್, ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್ ಅವರುಗಳು ಉಪಸ್ಥಿತರಿದ್ದರು.