ಗೋಣಿಕೊಪ್ಪ, ಜೂ. ೧೬: ಪ್ರತಿಯೊಬ್ಬನ ಜೀವನದಲ್ಲಿ ಉತ್ತಮ ಅವಕಾಶಗಳು ಬಂದೇ ಬರುತ್ತದೆ. ಪ್ರತಿಭೆ ಮತ್ತು ಸಾಮರ್ಥ್ಯವನ್ನು ಉಪಯೋಗಿಸಿ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ಇಲ್ಲವೇ ಸಂಕಷ್ಟದ ದಿನಗಳನ್ನು ಅನುಭವಿಸಬೇಕಾಗಬಹುದು ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ನೂತನ ಶಾಸಕ ಎ.ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.

ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟುವಿನ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ‘ಎನ್‌ಕ್ಲೇವ್-೨೦೨೩’ ೨೪ನೇ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕೊಡಗಿನ ಗಡಿಭಾಗದ ಉತ್ತಮ ಪರಿಸರದಲ್ಲಿ ಕೊಡವ ಎಜುಕೇಷನ್ ಸೊಸೈಟಿ ಮೂಲಕ ಉತ್ತಮ ಇಂಜಿನಿಯರ್ ಕಾಲೇಜು ಸ್ಥಾಪನೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಹಲವು ಸಾರ್ವಜನಿಕ ಸೇವಾ ಸಂಸ್ಥೆಗಳಿಗೆ ದಾನಿಗಳು ಉಚಿತವಾಗಿ ಜಾಗವನ್ನು ನೀಡಿರುವುದರಿಂದ ಗ್ರಾಮೀಣ ಭಾಗದ ಜನತೆಗೆ ಹೆಚ್ಚು ಪ್ರಯೋಜನವಾಗಿದೆ.

ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಬಂದ ನಂತರ ನಿಜವಾದ ಸವಾಲುಗಳು ಎದುರಾಗುತ್ತವೆ. ಉತ್ತಮ ಅವಕಾಶ ಸದ್ಬಳಕೆ ಮೂಲಕ ಸಾಧನೆ ಮಾಡುವಂತಾಗಬೇಕು ಎಂದು ಕರೆ ನೀಡಿದರು.

ಕೊಡವ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಮೇಜರ್ ಟಿ.ಎಂ. ರೋಹನ್ ಕುಟ್ಟಪ್ಪ, ಕೆ. ಸುಧಾಕರ್ ಶೆಟ್ಟಿ, ಸೊಸೈಟಿ ಉಪಾಧ್ಯಕ್ಷ ಕೆ.ಎ. ಚಿಣ್ಣಪ್ಪ, ಕಾರ್ಯದರ್ಶಿ ರಾಜೇಶ್ ಪೂವಯ್ಯ, ಸಹ ಕಾರ್ಯದರ್ಶಿ ಸಿ.ಎನ್. ರಾಜಾನಂಜಪ್ಪ, ಖಜಾಂಚಿ ಕೆ.ಎನ್. ಉತ್ತಪ್ಪ, ಡಾ. ದಿವಾಕರ್, ಪ್ರಾಂಶುಪಾಲ ಡಾ. ಎಂ. ಬಸವರಾಜು ಉಪಸ್ಥಿತರಿದ್ದರು.

ಡಯಾನ ಸ್ವಾಗತ, ರಿಷಿತ್, ಜ್ಞಾನವಿ ಪ್ರಾರ್ಥನೆ, ನೇಹಾ ಕಾವೇರಮ್ಮ ನಿರೂಪಣೆ, ವಾರ್ಷಿಕ ವರದಿಯನ್ನು ಪ್ರಾಂಶುಪಾಲ ಡಾ. ಬಸವರಾಜು ಓದಿದರು.