ಸುAಟಿಕೊಪ್ಪ, ಜೂ. ೧೩: ಸುಂಟಿಕೊಪ್ಪ ವಿಭಾಗದಲ್ಲಿ ಡೆಂಗ್ಯೂ ಜ್ವರ ಜನರನ್ನು ತೀವ್ರವಾಗಿ ಕಾಡುತ್ತಿದ್ದು, ಹಲವಾರು ಮಂದಿ ಮಡಿಕೇರಿ ಜಿಲ್ಲಾಸ್ಪತ್ರೆ ಹಾಗೂ ಕುಶಾಲನಗರ ತಾಲೂಕು ಆರೋಗ್ಯ ಕೇಂದ್ರ ಸೇರಿದಂತೆ ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಕಳೆದ ೨ ತಿಂಗಳ ಹಿಂದೆ ಸುಂಟಿಕೊಪ್ಪ ಪಟ್ಟಣದಲ್ಲಿ ಡೆಂಗ್ಯೂ ಕಾಣಿಸಿಕೊಂಡಿತ್ತು. ನಂತರ ಒಬ್ಬರಿಂದ ಒಬ್ಬರಿಗೆ ಹರಡಲಾರಂಭಿಸಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ತಂಡ ಸುಂಟಿಕೊಪ್ಪ ಪಟ್ಟಣದಲ್ಲಿ ಮನೆಗಳಿಗೆ ಭೇಟಿ ನೀಡಿ ಡೆಂಗ್ಯೂ ಬಗ್ಗೆ ಅರಿವು ಮೂಡಿಸಿದ್ದು, ಜ್ವರ ನಿಯಂತ್ರಣಕ್ಕೆ ಬಾರದಿರುವುದನ್ನು ಮನಗಂಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಕುಮಾರ್ ಕೆಲವು ಬಡಾವಣೆಗಳಿಗೆ ಭೇಟಿ ನೀಡಿ ಅಗತ್ಯ ಸಲಹೆ ಸೂಚನೆ ನೀಡಿದ್ದರು. ಆದರೂ ಡೆಂಗ್ಯೂ ನಿಯಂತ್ರಣಕ್ಕೆ ಬಾರದೆ ಹಲವು ಮಂದಿ ಬಳಲಿ ಬೆಂಡಾಗುತ್ತಿರುವುದು ದಿನ ನಿತ್ಯ ಕಂಡು ಬರುತ್ತಿದೆ. ಶಾಲಾ ವಿದ್ಯಾರ್ಥಿಗಳಿಗೂ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಅಗತ್ಯ ಔಷಧಿ ಸಿಂಪಡಿಸಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಜ್ವರ ಒಬ್ಬರಿಂದ ಒಬ್ಬರಿಗೆ ಹರಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.