ಶನಿವಾರಸಂತೆ, ಮೇ ೩೧: ದುಂಡಳ್ಳಿ ಗ್ರಾಮ ಪಂಚಾಯಿತಿಯ ಮಾಸಿಕ ಸಾಮಾನ್ಯ ಸಭೆ ಅಧ್ಯಕ್ಷೆ ಪೂರ್ಣಿಮಾ ಕಿರಣ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ವಿಧಾನಸಭೆ ಚುನಾವಣೆ ಬಳಿಕ ನಡೆದ ಮೊದಲ ಸಾಮಾನ್ಯ ಮಾಸಿಕ ಸಭೆ ಆರಂಭವಾಗುತ್ತಿದ್ದAತೆ ಪಂಚಾಯಿತಿಯ ಜಮಾ-ಖರ್ಚಿನ ವಿವರ, ಬೀದಿದೀಪ ಅಳವಡಿಕೆ ಯಾಗದಿರುವ ಬಗ್ಗೆ, ತೆರೆದ ಬಾವಿಗೆ ಮೆಸ್ ಅಳವಡಿಸುವ ಬಗ್ಗೆ, ದೇವರ ಕಾಡು, ಊರುಡುವೆ ಜಾಗದ ಬಗ್ಗೆ, ಸ್ವಚ್ಛವಾಹಿನಿ ಬಿಲ್, ವಿದ್ಯುಚ್ಛಕ್ತಿ ಬಿಲ್, ನೀರಿನ ಸಮಸ್ಯೆ, ಕೊಳವೆ ಬಾವಿ ದುರಸ್ತಿ, ಹಳೆಯ ಮೋಟಾರ್ ಕಾಣೆಯಾಗಿರುವ ಬಗ್ಗೆ, ಅಭಿವೃದ್ಧಿ ಕೊರತೆ ಇತ್ಯಾದಿ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಸದಸ್ಯರಾದ ಡಿ.ಪಿ. ಬೋಜಪ್ಪ ಹಾಗೂ ಸಿ.ಜೆ. ಗಿರೀಶ್ ಮಾತನಾಡಿ, ಪಂಚಾಯಿತಿ ಜಮಾ-ಖರ್ಚಿನ ಬಗ್ಗೆ ಸರಿಯಾದ ಲೆಕ್ಕ ಕೊಡಬೇಕು. ಬಾಕಿ ತೋರಿಸಿದರೆ ಆಗದು. ತಿಂಗಳ ಜಮಾ ಖರ್ಚನ್ನು ದಾಖಲು ಮಾಡಬೇಕು. ಜಮಾ-ಖರ್ಚಿನ ತನಿಖೆ ನಡೆಸಬೇಕು. ಪಂಚಾಯಿತಿಯ ಕಾರ್ಯದರ್ಶಿ ಹುದ್ದೆಗೆ ಪ್ರಸ್ತಾವನೆ ಸಲ್ಲಿಸಲಿಲ್ಲವೆ ಎಂದು ಪ್ರಶ್ನಿಸಿ, ಪಿಡಿಓ ಅವರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅಧ್ಯಕ್ಷೆ ಪೂರ್ಣಿಮಾ ಕಿರಣ್ ಪ್ರತಿಕ್ರಿಯಿಸಿ, ಜಮಾ-ಖರ್ಚಿನ ತನಿಖೆ ನಡೆಯಲಿ. ಸತ್ಯಾಂಶ ಹೊರಬೀಳುತ್ತದೆ. ಕಾರ್ಯದರ್ಶಿ ಇಲ್ಲದ ಕಾರಣದಿಂದಲೇ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂದರು.
ಕಾಜೂರು ಗ್ರಾಮದ ಸರ್ವೆ ನಂ. ೨೩/೨ ರ ಜಾಗ ಊರುಡುವೆ ಜಾಗ ಸರ್ಕಾರಿ ರಕ್ಷಿತ ಅರಣ್ಯವಾಗಿದೆ. ಅರಣ್ಯ ಇಲಾಖೆ ಜಾಗ ತಮ್ಮದು ಎಂದು ತಕರಾರು ಮಾಡುತ್ತಿದ್ದಾರೆ. ಆದರೆ, ೨ ಎಕರೆ ಜಾಗ ೧೯೭೫ ರಿಂದಲೂ ದುಂಡಳ್ಳಿ ಪಂಚಾಯಿತಿಗೆ ಸೇರಿದ್ದಾಗಿದೆ. ಜಾಗದ ಪೂರ್ಣ ಅಧಿಕಾರ ದುಂಡಳ್ಳಿ ಪಂಚಾಯಿತಿಗಿರುವಾಗ ಅಲ್ಲಿ ಮನೆ ಕಟ್ಟಿಕೊಂಡಿರುವರನ್ನು ತೆರವುಗೊಳಿಸಲು ಸಾಧ್ಯವೇ ಎಂದು ಸದಸ್ಯರಾದ ಸಿ.ಜೆ. ಗಿರೀಶ್, ಡಿ.ಪಿ. ಬೋಜಪ್ಪ, ಎಂ.ಡಿ. ದೇವರಾಜ್, ಎಸ್.ಪಿ. ಭಾಗ್ಯ ಪ್ರಶ್ನಿಸಿದರು.
ಕಾಜೂರು ಗ್ರಾಮದ ೨ ಎಕರೆ ಊರುಡುವೆ ಜಾಗ ಪಂಚಾಯಿತಿ ಅಧೀನದಲ್ಲಿದ್ದು ಪೈಸಾರಿ ಮತ್ತು ಖಾಸಗಿ ಜಾಗ ಹಾಗೂ ದೇವರ ಕಾಡು ೯ನೇ ಕಾಲಂ ಅಡಿಯಲ್ಲಿ ಪಂಚಾಯಿತಿಗೆ ಒಳಪಡುವುದರಿಂದ ಪಂಚಾಯಿತಿಗೆ ಅಧಿಕಾರ ಇರುತ್ತದೆ ಎಂದು ಸಭೆಯಲ್ಲಿ ಸರ್ವಾನು ಮತದಿಂದ ತೀರ್ಮಾನಿಸಲಾಯಿತು.
ಪಂಚಾಯಿತಿಯಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊAಡಿದ್ದು ಆಗಬೇಕಾದ ಕೆಲಸಕಾರ್ಯಗಳ ಬಗ್ಗೆ ನೂತನ ಶಾಸಕರಿಗೆ ಪಟ್ಟಿ ನೀಡಬೇಕು. ಹಾಗಾಗಿ, ಅವರನ್ನು ಪಂಚಾಯಿತಿಗೆ ಆಹ್ವಾನಿಸಬೇಕು. ಅವರಿಂದ ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳಬೇಕು ಎಂದು ಸದಸ್ಯ ಡಿ.ಪಿ. ಬೋಜಪ್ಪ ಹೇಳಿದಾಗ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸದಸ್ಯರಾದ ಡಿ.ಪಿ. ಬೋಜಪ್ಪ, ಸಿ.ಜೆ. ಗಿರೀಶ್, ಎಂ.ಡಿ. ದೇವರಾಜ್, ಎಸ್.ಪಿ. ಭಾಗ್ಯಾ, ಸತ್ಯವತಿ, ಗೋಪಿಕಾ, ಕೆ.ಎಸ್. ಜಾನಕಿ, ನಂದಿನಿ ನಾಗರತ್ನಾ, ಪಿಡಿಓ ರಾಜೇಂದ್ರ, ಬಿಲ್ ಸಂಗ್ರಾಹಕ ರವಿ, ಸಿಬ್ಬಂದಿ ಸಂಜಯ್, ಪೂರ್ಣಿಮಾ, ಶ್ರೀದೇವಿ, ವೀಣಾ, ಭಾರತಿ ಇದ್ದರು.