ಕುಶಾಲನಗರ, ಮೇ ೩೧ : ಕುಶಾಲನಗರ ತಾಲೂಕು ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಡೆದ ಕಾಮಗಾರಿ ಮತ್ತಿತರ ಅವ್ಯವಹಾರದ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು, ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಪಂಚಾಯಿತಿ ಮಾಜಿ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ.

ಕುಶಾಲನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಹೇಳಿಕೆ ನೀಡಿದ ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆಎಸ್ ಕಾಂತರಾಜು, ಕೂಡಿಗೆ ಗ್ರಾಮ ಪಂಚಾಯಿತಿಯಲ್ಲಿ ಕೆಲವು ಸದಸ್ಯರು ಪರೋಕ್ಷವಾಗಿ ಸರ್ಕಾರದ ಅನುದಾನವನ್ನು ಪೋಲು ಮಾಡುತ್ತಿದ್ದಾರೆ. ಬೇನಾಮಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸ್ವಾರ್ಥಕ್ಕೆ ಕೈಜೋಡಿಸದ ಅಧ್ಯಕ್ಷರ ಮೇಲೆ ವಿನಾಕಾರಣ ದ್ವೇಷ ಸಾಧಿಸಿ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಪಂಚಾಯಿತಿಯಲ್ಲಿ ನಡೆದ ಕಾಮಗಾರಿ ಅವ್ಯವಹಾರದ ಬಗ್ಗೆ ಈಗಾಗಲೇ ತನಿಖೆ ನಡೆದಿದ್ದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿಬ್ಬಂದಿಗಳಿAದ ಸರಕಾರಕ್ಕೆ ಹಣ ಕಟ್ಟುವಂತೆ ಆದೇಶ ಹೊರಬಿದ್ದಿದೆ. ಕೆಲವು ಸದಸ್ಯರು ಪ್ರತಿ ಸಭೆಯಲ್ಲಿ ಬಹಿಷ್ಕಾರ ಮಾಡುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ. ಕಾಮಗಾರಿಗಳ ಹೆಸರಿನಲ್ಲಿ ಅಧ್ಯಕ್ಷರನ್ನು ಕೈಗೊಂಬೆ ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಈ ಬಗ್ಗೆ ಈಗಾಗಲೇ ಸಂಬAಧಿಸಿದ ಅಧಿಕಾರಿಗಳಿಗೆ ಅಧ್ಯಕ್ಷರು ದೂರು ನೀಡಿದ್ದಾರೆ. ತನಿಖೆ ಹಂತದಲ್ಲಿರುವ ಸಂದರ್ಭ ಗುತ್ತಿಗೆದಾರರ ಬಿಲ್‌ಗೆ ಸಹಿ ಮಾಡುವಂತೆ ಅಧ್ಯಕ್ಷರಿಗೆ ಒತ್ತಡ ಹಾಕಲಾಗುತ್ತಿದೆ ಎಂದರು. ಸದಸ್ಯರಾದ ಹಮೀದ್ ಮತ್ತು ಅರುಣ್ ಎಂಬವರು ಪಂಚಾಯಿತಿ ಸಭೆಯಲ್ಲಿ ಗೊಂದಲ ಮೂಡಿಸುತ್ತಿದ್ದು, ಈ ಸದಸ್ಯರ ಬಗ್ಗೆ ಪ್ರಸ್ತುತ ಶಾಸಕರು ಗಮನಹರಿಸಬೇಕು ಎಂದು ಹೇಳಿದ ಕಾಂತರಾಜು ಕ್ಷೇತ್ರದ ಶಾಸಕರ ಮಧ್ಯಸ್ಥಿಕೆಯಲ್ಲಿ ಕೂಡಿಗೆಯಲ್ಲಿ ಗ್ರಾಮಸಭೆ ನಡೆಯಬೇಕು ಎಂದು ಮನವಿ ಮಾಡಿದರು.

ಪಂಚಾಯಿತಿಯ ಇಬ್ಬರು ಸದಸ್ಯರು ಸಭಾ ನಡಾವಳಿ ಪುಸ್ತಕವನ್ನು ತಲೆ ಮೇಲೆ ಹೊತ್ತುಕೊಂಡು ಸಭೆಯಲ್ಲಿ ಓಡಾಡುತ್ತಿದ್ದಾರೆ. ಸಭಾತ್ಯಾಗ ಮಾಡಿ ನಂತರ ಹಾಜರಿ ಪುಸ್ತಕದಲ್ಲಿ ಸಹಿ ಹಾಕುವ ಕಾಯಕ ಇವರದ್ದಾಗಿದೆ. ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಿ ಪಂಚಾಯಿತಿ ಆಡಳಿತ ಮಂಡಳಿಯನ್ನು ರದ್ದುಗೊಳಿಸುವ ಬಗ್ಗೆ ಸಂಬAಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕಾಂತರಾಜು ಒತ್ತಾಯಿಸಿದ್ದಾರೆ.

ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಟಿ.ಕೆ. ವಿಶ್ವನಾಥ್ ಬಹುತೇಕ ಪ್ರಕರಣಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರ ತಪ್ಪು ಎಂದು ಕಾಣುತ್ತಿದೆ. ಕೆಲಸ ಮಾಡದೆ ಬಿಲ್ ಮಾಡುವ ಜಾಯಮಾನ ಅಧಿಕವಾಗಿದೆ. ಹಿಂದಿನ ಅವಧಿಯಲ್ಲಿ ಕೂಡ ಇದೇ ರೀತಿ ಕೆಲವು ಸದಸ್ಯರು ಪಂಚಾಯಿತಿಯಲ್ಲಿ ಸ್ವಾರ್ಥ ಸಾಧನೆ ಮಾಡಿ ತಪ್ಪು ಮಾಹಿತಿಯನ್ನು ಜನರಿಗೆ ನೀಡುತ್ತಿದ್ದರು ಎಂದು ತಿಳಿಸಿದರು.

ಕೂಡಿಗೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಕಾಮಗಾರಿ ಅವ್ಯವಹಾರದ ಬಗ್ಗೆ ಜಿಲ್ಲಾ ಪಂಚಾಯಿತಿ ಮೂಲಕ ಉನ್ನತ ಮಟ್ಟದ ತನಿಖೆ ನಡೆಸಬೇಕಾಗಿದೆ ಎಂದು ವಿಶ್ವನಾಥ್ ಹೇಳಿದರು. ಈ ಸಂದರ್ಭ ರೈತ ಸಂಘದ ಪ್ರಮುಖರಾದ ಎ.ಡಿ. ದಾಮೋದರ್ ಇದ್ದರು.