ಚೆಟ್ಟಳ್ಳಿ, ಮೇ ೩೦ : ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಮಳೆ ಗಾಳಿಗೆ ಹಲವೆಡೆ ಮರಗಳು ಧರೆಗೆ ಉರುಳಿದರೆ, ಬೃಹತ್ ಗಾತ್ರದ ಮರದ ಕೊಂಬೆ ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಜಖಂಗೊAಡ ಘಟನೆ ನಡೆದಿದೆ.
ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡಕರೆ, ಪೊನ್ನತ್‌ಮೊಟ್ಟೆ, ಭೂತನಕಾಡು, ಚೆಟ್ಟಳ್ಳಿ ಫಾರಂ ಸುತ್ತಲಿನ ವ್ಯಾಪ್ತಿಯಲ್ಲಿ ಬೃಹತ್ ಮರಗಳು ರಸ್ತೆಗೆ ಉರಳಿದ್ದು ರಸ್ತೆ ಸಂಪರ್ಕಕ್ಕೆ ತೊಂದರೆ ಉಂಟಾಯಿತು. ಪೊನ್ನತ್‌ಮೊಟ್ಟೆಯ ರಸ್ತೆ ಬದಿಯಲ್ಲಿ ನಿಲ್ಲಿಸಿದ ಪವನ್ ಎಂಬವರಿಗೆ ಸೇರಿದ ಎಸ್ಟೀಮ್ ಕಾರಿನ ಮೇಲೆ ಚೆಟ್ಟಳ್ಳಿ ಫಾರಂನ ಬೃಹತ್ ಗಾತ್ರದ ಸಿಲ್ವರ್ ಮರದ ಕೊಂಬೆ ಬಿದ್ದ ಪರಿಣಾಮ ಕಾರು ಜಖಂಗೊAಡಿದೆ. ಪೊನ್ನತ್‌ಮೊಟ್ಟೆಯಲ್ಲಿ ಮನೆಯೊಂದರ ಹಿಂದಿನ ಬರೆ ಜರಿದಿದೆ. ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ಗುಡುಗು ಸಿಡಿಲಜೊತೆ ಆಲಿಕಲ್ಲು ಮಳೆ ಸುರಿದಿದೆ.
ರಾತ್ರಿ ಸುರಿದ ಮಳೆ ಹಾಗೂ ಗಾಳಿಯ ರಭಸಕ್ಕೆ ಹಲವೆಡೆ ವಿದ್ಯುತ್ ತಂತಿಯ ಮೇಲೆ ಮರಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಹಾನಿಗೊಳಗಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಸಂಪರ್ಕ ಸರಿಪಡಿಸಲು ವಿದ್ಯುತ್ ಇಲಾಖಾ ಸಿಬ್ಬಂದಿಗಳು ಹರಸಾಹಸ ಪಡುವಂತಾಗಿದೆ. - ಕರುಣ್ ಕಾಳಯ್ಯ