ಮಡಿಕೇರಿ, ಮೇ ೩೦ : ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಮತ್ತು ಪೊನ್ನಂಪೇಟೆಯಲ್ಲಿನ ಅರಣ್ಯ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಕೊಡಗು ಜಿಲ್ಲೆಯ ಕೃಷಿ ಮತ್ತು ಕಾಫಿ ಆಧಾರಿತ ವ್ಯವಸ್ಥೆಯಲ್ಲಿ ಕಾರ್ಬನ್ ಕ್ರೆಡಿಟ್‌ಗೆ ಭವಿಷ್ಯ ಮತ್ತು ಅದರಿಂದ ಆರ್ಥಿಕ ಲಾಭ ಗಳಿಸಲು ಇರುವ ಅವಕಾಶಗಳ ಕುರಿತು ರೈತರು ಮತ್ತು ಕಾಫಿ ಬೆಳೆಗಾರರಲ್ಲಿ ಅರಿವು ಮೂಡಿಸುವ ಕಾರ್ಯಾಗಾರ ನಡೆಯಿತು.
ಪೊನ್ನಂಪೇಟೆಯ ಅರಣ್ಯ ಕಾಲೇಜಿನ ಆವರಣದಲ್ಲಿ ಜರುಗಿದ ಕಾರ್ಯಾಗಾರದಲ್ಲಿ ಡಾ. ಎಮ್. ಬಾಲಸುಬ್ರಮಣಿಯನ್, ಡಾ. ಜೇಮ್ಸ್ ಜೇಕಬ್ ಮತ್ತು ಡಾ. ಅಜ್ಜಿಕುಟ್ಟೀರ ಅದೀತ್ ಕಾರ್ಯಪ್ಪ ಪಾಲ್ಗೊಂಡು ತಾಂತ್ರಿಕ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಪಿ.ಜಿ.ಚಂಗಪ್ಪ ವಹಿಸಿದ್ದರು. ಅರಣ್ಯ ಕಾಲೇಜಿನ ಮುಖ್ಯಸ್ಥ ಡಾ. ಸಿ.ಜಿ. ಕುಶಾಲಪ್ಪ ಕಾರ್ಯಾಗಾರದ ಉದ್ದೇಶವನ್ನು ವಿವರಿಸಿದರು. ಅರಣ್ಯ ಕಾಲೇಜಿನ ಉಪನ್ಯಾಸಕ ಮತ್ತು ವಿಭಾಗದ ಮುಖ್ಯಸ್ಥರೂ ಆದ ಡಾ: ಜಿ.ಎಮ್. ದೇವಗಿರಿ ಕಾರ್ಬನ್ ಕ್ರೆಡಿಟ್ ಇದರಿಂದ ಜಿಲ್ಲೆಯ ರೈತರು ಮತ್ತು ಕಾಫಿ ಬೆಳೆಗಾರರು ಆರ್ಥಿಕ ಲಾಭ ಗಳಿಸಲು ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ.ಯು.ಅಶೋಕ್ ಸ್ವಾಗತಿಸಿ, ಉಪಾಧ್ಯಕ್ಷ ಎ. ನಂದಾ ಬೆಳ್ಳಿಯಪ್ಪ ವಂದಿಸಿದರು.