ವೀರಾಜಪೇಟೆ, ಮೇ ೩೦ : ಮಂಗಳವಾರ ಸುರಿದ ಧಾರಾಕಾರ ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿ ಪಟ್ಟಣದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.

ಗಾಳಿ ಮಳೆಗೆ ಪಟ್ಟಣದ ಸುಂಕದಕಟ್ಟೆಯ ಬಳಿಯಿರುವ ಹೆಮ್ಮರವೊಂದರ ಕೊಂಬೆಯೊAದು ಬಿದ್ದು ಹೈಟೆನ್ಷನ್ ವಿದ್ಯುತ್ ಕಂಬವೊAದು ಧರೆಗುರುಳಿತು. ಇದಾದ ಕೆಲವೇ ನಿಮಿಷಗಳಲ್ಲಿ ಅನತಿ ದೂರದಲ್ಲಿದ್ದ ಮೂರ್ನಾಲ್ಕು ವಿದ್ಯುತ್ ಕಂಬಗಳು ರಸ್ತೆಗುರುಳಿದವು. ಇದರಿಂದ ವೀರಾಜಪೇಟೆ-ಸಿದ್ದಾಪುರ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಬಂದ್ ಆಯಿತು.

ವಿದ್ಯುತ್ ಕಂಬವೊAದು ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಟೋ ರಿಕ್ಷಾವೊಂದರ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಆಟೋದಲ್ಲಿದ್ದವರು ಸೇರಿದಂತೆ ಸಾರ್ವಜನಿಕರು ಅಪಾಯದಿಂದ ಪಾರಾಗಿದ್ದಾರೆ. ಆಟೋಗೆ ಹಾನಿಯಾಗಿದೆ. ಮೂರ್ನಾಲ್ಕು ಕಂಬಗಳು ಧರೆಗುರುಳಿರುವುದಲ್ಲದೆ ಸಮೀಪದಲ್ಲಿರುವ ಕೆಲ ಕಂಬಗಳು ಸಂಪೂರ್ಣ ಹಾನಿಗೊಳಗಾಗಿದ್ದು ಬೀಳುವ ಸ್ಥಿತಿಯಲ್ಲಿವೆ.

ಸ್ಥಳದಲ್ಲಿ ಸೇರಿದ ಆಟೋ ಚಾಲಕರು ಹಾಗೂ ಸಾರ್ವಜನಿಕರು ಸೆಸ್ಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಾನಿಗೊಳಗಾದ ರಿಕ್ಷಾಕ್ಕೆ ಕೂಡಲೇ ಪರಿಹಾರ ಒದಗಿಸಲು ಪಟ್ಟು ಹಿಡಿದರು. ಇದರಿಂದ ಕಂಬಗಳ ತೆರವು ಕಾರ್ಯಾಚರಣೆ ಆರಂಭವಾಗಲು ಕೊಂಚ ತಡವಾಯಿತು.

ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದ್ದರಿಂದ ಕೆಲಕಾಲ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ತೆರವು ಕಾರ್ಯಾಚರಣೆ ತಡವಾದ ಹಿನ್ನೆಲೆಯಲ್ಲಿ ವಾಹನಗಳು ಹಿಂದಕ್ಕೆ ತೆರಳಿದವು. ಸಮೀಪದಲ್ಲೆ ಪಟ್ಟಣಕ್ಕೆ ವಿದ್ಯುತ್ ಸರಬರಾಜು ಮಾಡುವ ಮಗ್ಗುಲದ ಉಪಕೇಂದ್ರವಿರುವುದರಿAದ ಈ ಮಾರ್ಗದಲ್ಲೇ ಬಹುತೇಕ ಪಟ್ಟಣಕ್ಕೆ ವಿದ್ಯುತ್ ಸರಬರಾಜಾಗುತ್ತಿತ್ತು. ಸಂಜೆಯಷ್ಟೆ ವಿದ್ಯುತ್ ಕಂಬಗಳ ತೆರವು ಕಾರ್ಯಾಚರಣೆ ಆರಂಭಗೊAಡಿತ್ತು.

ಸ್ಥಳದಲ್ಲಿದ್ದ ಸೆಸ್ಕ್ ಸಹಾಯಕ ಇಂಜಿನಿಯರ್ ಸುರೇಶ್ ಅವರು ಮಾತನಾಡಿ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಹಾಗೂ ಹಾನಿಗೊಳಗಾದ ಕಂಬಗಳನ್ನು ಮೊದಲು ತೆರವುಗೊಳಿಸಬೇಕಿದೆ. ಬಳಿಕ ಹೊಸ ಕಂಬಗಳನ್ನು ಹಾಕಿ ತಂತಿಗಳನ್ನು ಅಳವಡಿಸಿದ ಬಳಿಕ ವಿದ್ಯುತ್ ಸರಬರಾಜಿಗೆ ಅವಕಾಶ ನೀಡಲಾಗುವುದು. ಸಾಧ್ಯವಾದಷ್ಟು ಶೀಘ್ರದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ಭರವಸೆ ನೀಡಿದರು. ಸಿ.ಪಿ.ಐ ಶಿವರುದ್ರ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸೆಸ್ಕ್ ಕಿರಿಯ ಇಂಜಿನಿಯರ್ ಹಾಗೂ ಸಿಬ್ಬಂದಿ ಇದ್ದರು. ಕೆಲವೆಡೆ ಗಾಳಿ ಮಳೆಗೆ ಮನೆಯ ಹೆಂಚುಗಳು ಹಾನಿಗೊಳಗಾದ ಘಟನೆಗಳು ವರದಿಯಾಗಿವೆ. ಘಟನಾ ಸ್ಥಳಕ್ಕೆ ಶಾಸಕ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ಪರಿಶೀಲಿಸಿದರು.