.!

ದಿನದ ಮಹತ್ವ

ಅಪ್ಪನು ಮನೆಯ ಮುಂದಿನ ಚಾವಡಿಯಲ್ಲಿ ಕುಳಿತು ಸಿಗರೇಟನ್ನು ಸೇದಿ ಸುರುಳಿ ಸುರುಳಿಯಾಗಿ ಹೊಗೆ ಬಿಡುತ್ತ ಆನಂದಿಸುತ್ತಿದ್ದ ದೃಶ್ಯವನ್ನು ಅವರ ಹದಿನಾರರ ಹರೆಯದ ಮಗ ಪ್ರತಿದಿನವೂ ಬಹಳ ಕುತೂಹಲದಿಂದ ನೋಡುತ್ತಿದ್ದ. ಕೊನೆಗೊಂದು ದಿವಸ ಆ ಕುತೂಹಲವನ್ನು ತಾಳಲಾಗದೆ ಅಪ್ಪನ ಜೇಬಿನಿಂದ ಸಿಗರೇ ಟೊಂದನ್ನು ಕದ್ದು ಮನೆಯ ಸಮೀಪದ ಕಾಡಿನೊಳಗೆ ಹೋಗಿ, ಆ ಸಿಗರೇಟಿಗೆ ಬೆಂಕಿ ಹಚ್ಚಿ ತಾನೂ ತುಟಿಯಲ್ಲಿಟ್ಟು ಒಂದು ದಮ್ ಹೊಗೆಯನ್ನು ಒಳಗೆ ಎಳೆದುಕೊಂಡ.

ಹೊಗೆಯನ್ನು ಎಳೆದುಕೊಂಡ ಪರಿಣಾಮವಾಗಿ ಅವನಿಗೆ ತಡೆಯಲಾಗದ ಕೆಮ್ಮು ಬಂದಿತಲ್ಲದೆ ಕಣ್ಣುಗಳಿಂದ ನೀರು ಸಹ ಸುರಿಯತೊಡಗಿತು. ಆದರೂ ಆ ಸಿಗರೇಟಿನ ಪರಿಮಳ,ಅದರ ಹೊಗೆಯನ್ನು ಒಳಗೆ ಎಳದು ಕೊಂಡಾಗ ಸಿಗುವ ಅನಿರ್ವಚನೀಯ ಆನಂದವು ಅವನನ್ನು ನಾಳೆಯೂ ಮತ್ತೊಮ್ಮೆ ಕದ್ದು ಸಿಗರೇಟನ್ನು ತಂದು ಸೇದುವುದಕ್ಕೆ ಪ್ರೇರಿಸಿತು! ಕೊನೆಗೆ ಈ ವಿಷಯವು ಅವನ ಅಪ್ಪನಿಗೆ ತಿಳಿದು “ಸಿಗರೇಟು ಸೇದುತ್ತೀಯೇನೋ ಮಗನೇ?” ಎಂದು ಮಗನಿಗೆ ನಾಲ್ಕು ಬಾರಿಸಿದಾಗ, ತಾನು ಸೇದುವುದು ತಪ್ಪು ಆದರೆ ಅಪ್ಪ ಸೇದುವುದು ಸರಿ ಎನ್ನುವುದರಲ್ಲಿ ಇರುವ ತರ್ಕವು ಅವನಿಗೆ ಬಿಡಿಸಲಾಗದ ಒಗಟಾಗಿಯೇ ಉಳಿಯಿತು. ಇದರೊಂದಿಗೆ ಆಗಿಂದಾಗ್ಗೆ ಅಪ್ಪನ ಜೇಬಿನಿಂದ ಸಿಗರೇಟನ್ನು ಕದ್ದು ಸೇದುವುದು, ಅಲ್ಲಿ ಸಿಗದಿದ್ದಾಗ ಅಮ್ಮನ ಸಾಸಿವೆ ಡಬ್ಬಿಯಲ್ಲಿ ಬಚ್ಚಿಟ್ಟ ಹಣವನ್ನು ಕದ್ದು ಅಂಗಡಿಯಲ್ಲಿ ಕೊಂಡು ಸಿಗರೇಟು ಸೇದುವುದು ಅವನಿಗೆ ಚಟವಾಗಿ ಬೆಳೆದುಬಿಟ್ಟಿತು. ಈಗವನು ಎಳೆಯ ವಯಸ್ಸಿನಲ್ಲಿಯೇ ಸರಣಿ ಧೂಮಪಾನಿಯಾಗಿ ಬಿಟ್ಟಿದ್ದಾನೆ.

ಸಾವಿನ ಮನೆಯ ಸಮೀಪಕ್ಕೆ ಕರೆದೊಯ್ಯುವ ಈ ಹೊಗೆಸೊಪ್ಪಿನ ಧೂಮಪಾನವು ಬಹಳ ಆತಂಕ ಕಾರಿಯೂ ಅಪಾಯಕಾರಿಯೂ ಆದ ಚಟಗಳಲ್ಲಿ ಪ್ರಮುಖವಾದುದು ಎನ್ನಿಸಿದೆ. ಬೀಡಿ, ಸಿಗರೇಟು, ಚುಟ್ಟ ಮೊದಲಾದ ವಿವಿಧ ರೀತಿಗಳ ತಯಾರಿಕೆಗಳಲ್ಲಿ ಹೊಗೆಸೊಪ್ಪಿನ ತುಣುಕನ್ನು ತುಂಬಿಸಿ ಧೂಮಪಾನ ಮಾಡುವ ವರ್ಗವು ಒಂದಾದರೆ, ಮೂಗಿನ ಹೊಳ್ಳೆಗಳಿಗೆ ತಂಬಾಕಿನ ಪುಡಿಯನ್ನು ನಶ್ಯದ ರೂಪದಲ್ಲಿ ತುಂಬಿಸಿ ಅದರ ಸ್ವಾದವನ್ನು ಶ್ವಾಸಕೋಶಗಳೊಳಗೆ ಎಳೆದು ಕೊಂಡು ಆನಂದಿಸುವ ವರ್ಗವು ಇನ್ನೊಂದಾಗಿದೆ. ಹಾಗೆಯೇ ಅಡಕೆಪುಡಿಯ ಜೊತೆ ತಂಬಾಕಿನ ಪುಡಿಯನ್ನು ಬೆರೆಸಿ ತುಟಿಗಳ ಅಡಿಯಲ್ಲಿ ಇರಿಸಿಕೊಂಡು ಸಂತಸ ಪಡುವವರ ವರ್ಗವು ಮತ್ತೊಂದಾಗಿದೆ. ಹೀಗೆ ಹಲವು ರೂಪಗಳಲ್ಲಿ ಹೊಗೆಸೊಪ್ಪಿನ ವಿಷವನ್ನು ದೇಹದ ಒಳಗೆ ತುಂಬಿಸಿಕೊAಡು ಕ್ಷಣಿಕ ಆನಂದಕ್ಕಾಗಿ ಬದುಕನ್ನು ಕುಗ್ಗಿಸಿಕೊಳ್ಳುವವರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗೆ ಮಾರಕ ತಂಬಾಕಿನ ಅಪಾಯವನ್ನು ಜನರಿಗೆ ಮನಗಾಣಿಸಿ ಹೊಗೆಸೊಪ್ಪಿನ ವಿವಿಧ ರೂಪಗಳ ಬಳಕೆಯನ್ನು ತಡೆಗಟ್ಟುವ ದೃಷ್ಟಿಯಿಂದ ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಮೇ ತಿಂಗಳ ಮೂವತ್ತೊಂದನೆಯ ದಿವಸವನ್ನು ವಿಶ್ವ ತಂಬಾಕು ರಹಿತದಿನವಾಗುವಂತೆ ಘೋಷಿಸಿದೆ. ಹೊಗೆಸೊಪ್ಪಿನ ಬಳಕೆಯ ಅಪಾಯ ವನ್ನು ಜನರಿಗೆ ಮನಗಾಣಿಸಲು ಪ್ರತಿವರ್ಷವೂ ಹೊಸತೊಂದು ಉದ್ಘೋಷವನ್ನು ಹೊರಡಿಸುತ್ತಿದೆ. ಈ ವರ್ಷ ಈ ಸಂಸ್ಥೆಯು ‘ಆಹಾರವನ್ನು ಬೆಳೆಸಿರಿ-ಹೊಗೆಸೊಪ್ಪನ್ನಲ್ಲ’ ಎನ್ನುವ ಉದ್ಘೋಷವನ್ನು ಹಮ್ಮಿಕೊಂಡಿದೆ.

ಹೊಗೆಸೊಪ್ಪಿನಲ್ಲಿ ಸುಮಾರು ಎರಡು ಸಾವಿರಕ್ಕೂ ಮಿಗಿಲಾದ ರಾಸಾಯನಿಕ ಪದಾರ್ಥಗಳಿದ್ದು ಅದರಲ್ಲಿ ಮುಖ್ಯವಾಗಿ ನಿಕೋಟಿನ್ ಎನ್ನುವ ವಿಷವು ಅತ್ಯಂತ ಅಪಾಯಕಾರಿಯಾದುದಾಗಿದೆ. ಹೊಗೆಸೊಪ್ಪನ್ನು ಯಾವುದೇ ರೂಪದಲ್ಲಿ ಬಳಸಿದರೂ ಈ ವಿಷವು ನೇರವಾಗಿ ಮೆದುಳಿಗೆ ತಲುಪಿ ಅದನ್ನು ಚೋದಿಸುತ್ತದೆ. ಈ ಚೋದನೆಯ ತೀವ್ರತೆಯು ಅದೆಷ್ಟು ಭೀಕರವೆಂದರೆ ಆತಂಕಕ್ಕೆ ಒಳಗಾದ ವ್ಯಕ್ತಿಗೆ ತಾತ್ಕಾಲಿಕವಾಗಿ ಆತಂಕವು, ಖಿನ್ನತೆಯು ಮಾಯವಾದಂತೆ ಮೂಡಿಸುತ್ತದೆ. ಆದರೆ ಕೆಲವೇ ನಿಮಿಷಗಳಲ್ಲಿ ಪುನಃ ಆ ಆತಂಕವನ್ನು ಮರಳಿಸಿ ನಿಕೋಟಿನ್ ವಿಷವು ಪುನಃ ಬೇಕೆನ್ನಿಸುವಂತೆ ಮಾಡುತ್ತದೆ. ಹೀಗೆ ಧೂಮಪಾನ ಮಾಡುವವರನ್ನು ನಿಕೋಟಿನ್ ಎನ್ನುವ ವಿಷವು ಸರಣಿ ಧೂಮಪಾನಿಗಳನ್ನಾಗಿ ಮಾಡುತ್ತದೆ.

ಹೊಗೆಸೊಪ್ಪಿನ ಬಳಕೆಯು ಬಳಸಿದವನ ದೇಹದ ಎಲ್ಲ ಅಂಗಾAಗಗಳ ಮೇಲೆಯೂ ತನ್ನ ಪ್ರಭಾವವನ್ನು ಬೀರುತ್ತದೆ. ಧೂಪಮಾನದಿಂದ ಅರ್ಬುದ ರೋಗ, ಹೃದಯ ದೌರ್ಬಲ್ಯ, ಮಧುಮೇಹ, ಉಸಿರಾಟದ ಸಮಸ್ಯೆ, ಕಾಲಿನ ಹಿಂಭಾಗದಲ್ಲಿ ನೋವು (ಬರ್ಗರ್‌ಸ್ ಡಿಸೀಸ್), ಕೆಮ್ಮು ಮೊದಲಾದ ಆಂತರಿಕ ಬಾಧೆಗಳನ್ನು ನೀಡಿದರೆ ತುಟಿಗಳು ಕಪ್ಪಾಗುವುದು, ತಾರುಣ್ಯದಲ್ಲಿಯೇ ಮುಪ್ಪಿನಂತಾದ ಬಾಡಿದ ಮೊಗ, ಕೆಂಪು ಕಣ್ಣುಗಳು, ಬಾಯಿಯ ದುರ್ಗಂಧ, ಮದುವೆ-ಮುಂಜಿಗಳಲ್ಲಿ ಬಂಧುಗಳೊಡನೆ ಬೆರೆಯಲು ಹಿಂಜರಿಕೆ ಮೊದಲಾದ ಬಾಹ್ಯ ಸಮಸ್ಯೆಗಳನ್ನೂ ಇದು ನೀಡುವುದು. ಅಲ್ಲದೆ ಸಭೆಗಳಲ್ಲಿ ಭಾಗವಹಿಸುವಾಗ ಪದೇ ಪದೇ ಅಲ್ಲಿಂದೆದ್ದು ಶೌಚಾಲಯದೆಡೆಗೆ ಹೋಗಿ ಅಲ್ಲಿ ಗುಟ್ಟಾಗಿ ಒಂದೆರಡು “ದಮ್”ಎಳೆದು ತೆವಲು ತೀರಿಸಿಕೊಳ್ಳುವಿಕೆ, ಸಿಗರೇಟಿನ ಕಿಡಿಯ ಆಕಸ್ಮಿಕಗಳಿಂದ ಧರಿಸಿದ ಅಂಗಿಯಲ್ಲಿ ಅಲ್ಲಲ್ಲಿ ಸುಟ್ಟ ಗುರುತು ಹೀಗೆ ಸಮಸ್ಯೆಗಳನ್ನು ಈ ಧೂಮಪಾನದ ಚಟವು ಹೆಚ್ಚಿಸುತ್ತದೆ.

ಸ್ವಾಭಾವಿಕ ಮರಣವನ್ನು ಹೊರತುಪಡಿಸಿದರೆ ವಿಶ್ವದಲ್ಲಿ ಆಗುವ ಹೆಚ್ಚಿನ ಮರಣಕ್ಕೆ ಕಾರಣವು ಈ ಹೊಗೆಸೊಪ್ಪಿನಿಂದ ಆಗಿರುತ್ತದೆ ಎಂದು ಅಧ್ಯಯನವೊಂದು ತಿಳಿಸುತ್ತದೆ.

ರಸ್ತೆ ಅಪಘಾತದಿಂದಾಗುವ ಮರಣ, ಯುದ್ಧ, ಬಿರುಗಾಳಿ, ಅಗ್ನಿ ಆಕಸ್ಮಿಕ, ಭೂಕಂಪ, ನೆರೆಹಾವಳಿ ಹೀಗೆ ಹಲವು ಆಘಾತಗಳಿಂದ ಮೃತ್ಯುವಿಗೆ ಒಳಗಾಗುವವರ ಸಂಖ್ಯೆಯನ್ನೂ ತಂಬಾಕಿನ ಬಳಕೆಯಿಂದ ಆಗುವ ಮರಣವು ಮೀರಿಸುತ್ತದೆ. ಆದರೂ ತಂಬಾಕು ನೀಡುವ ಮೋದವು ಈ ಎಲ್ಲ ಬೆದರಿಕೆಗಳಿಗೂ ಬಗ್ಗದೆ ಜನರನ್ನು ತನ್ನ ಗುಲಾಮನನ್ನಾಗಿ ಮಾಡುತ್ತಿ ರುವುದು ಮನುಕುಲಕ್ಕೊಂದು ಶಾಪವಾಗಿದೆ. ಇಂದು ವಿಶ್ವ ಹೊಗೆಸೊಪ್ಪಿನ ದಿನದಂದು, ಇದರ ಬಳಕೆದಾರರು ಈ ಹೊಗೆಸೊಪ್ಪಿನ ಬಲೆಯಿಂದ ಹೊರಬರುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದರೆ ದಿನದ ಮಹತ್ವಕ್ಕೆ ಮೌಲ್ಯವು ಬರುತ್ತದೆ. ಲಕ್ಷಾಂತರ ಕುಟುಂಬಗಳ ಸದಸ್ಯರ ಮುಖದಲ್ಲಿ ನಗೆಯು ಅರಳುತ್ತದೆ.

- ಕಿಗ್ಗಾಲು ಎಸ್. ಗಿರೀಶ್, ಮೂರ್ನಾಡು