ಸಮಾಜದ ಸ್ವಾಸ್ತö್ಯವನ್ನು ಹಾಳುಮಾಡುತ್ತಿರುವ ಬೀಡಿ, ಸಿಗರೇಟು ಹಾಗೂ ಇತರ ತಂಬಾಕು ಪದಾರ್ಥಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕರ, ಇದು ಕೇವಲ ಜೀವನ ನಷ್ಟವಷ್ಟೇ ಅಲ್ಲ ಆರ್ಥಿಕ ನಷ್ಟವನ್ನೂ ತರುತ್ತದೆ ಎಂದು ಹೇಳಿದರೂ ಧಮ್ ಹೊಡೆಯುವವರ ಪ್ರಮಾಣ ಕಡಿಮೆಯಾಗದಿರುವುದು ವಿಪರ್ಯಾಸ.
ತಂಬಾಕು ಉತ್ಪನ್ನಗಳ ಬಳಕೆಯಲ್ಲಿ ಇಡೀ ಪ್ರಪಂಚದಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ ಭಾರತ ಎರಡನೇ ಸ್ಥಾನದಲ್ಲಿದೆ. ತಂಬಾಕು ಸೇವನೆಯಿಂದ ಜಾಗತಿಕವಾಗಿ ಪ್ರತಿವರ್ಷ ಸಾಯುವವರ ಸಂಖ್ಯೆ ೮೦ ಲಕ್ಷಕ್ಕಿಂತ ಅಧಿಕ, ಭಾರತದಲ್ಲಿ ೧೦ ಲಕ್ಷ ಜನರು ಬೀಡಿ, ಸಿಗರೇಟ್ ಹಾಗೂ ಇತರ ತಂಬಾಕಿನ ಸೇವನೆಯಿಂದ ಉಂಟಾಗುವ ಕ್ಯಾನ್ಸರ್ ಹಾಗೂ ಇತರ ಮಾರಣಾಂತಿಕ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ.
ಕೇವಲ ಗಂಟಲು, ಶ್ವಾಸಕೋಶ ಮಾತ್ರವಲ್ಲದೆ ಅಡಿಯಿಂದ ಮುಡಿವರೆಗೆ ನಮ್ಮ ದೇಹದ ಪ್ರತಿಯೊಂದು ಜೀವ ಕೋಶದ ಮೇಲೆ ಅದು ಪರಿಣಾಮವನ್ನುಂಟು ಮಾಡುತ್ತದೆ. ಚಟಕ್ಕೆ ದಾಸರಾಗಿ ಬಹುಬೇಗ ಸಾವು ತಂದುಕೊಳ್ಳುವವರು ತಮ್ಮ ಕುಟುಂಬಗಳನ್ನು ಅನಾಥರನ್ನಾಗಿಸುತ್ತಾರೆ ಹಾಗೂ ಚಿಕಿತ್ಸೆಗೆ ಲಕ್ಷಾಂತರ ಹಣ ವ್ಯಯ ಮಾಡುವುದರ ಮೂಲಕ ತಮ್ಮ ಕುಟುಂಬಗಳನ್ನು ಚೇತರಿಸಿಕೊಳ್ಳಲಾರದ ಆರ್ಥಿಕ ಸಂಕಷ್ಟಕ್ಕೆ ಗುರಿಮಾಡುತ್ತಾರೆ.
ಭಾರತದಲ್ಲಿ ೨೦೧೬-೧೭ರ ಜಿಎಟಿಎಸ್ ಸಮೀಕ್ಷೆ ಪ್ರಕಾರ ಗ್ರಾಮೀಣ ಭಾಗದಲ್ಲಿ ೧೯.೯ ಕೋಟಿ ಹಾಗೂ ನಗರದಲ್ಲಿ ೬.೮ ಕೋಟಿ ಒಟ್ಟು ೨೬.೭ ಕೋಟಿ ಜನರು ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಾರೆ, ಶೇ. ೨೮.೬ ಹದಿನೈದು ವರ್ಷ ಮೇಲ್ಪಟ್ಟವರು ತಂಬಾಕು ವ್ಯಸನಿಗಳಾಗಿದ್ದು ದೇಶ ಕಟ್ಟಬೇಕಾದ ಯುವಕರು ತಮ್ಮ ಜೀವನವನ್ನೇ ಕಟ್ಟಿಕೊಳ್ಳಲಾಗದ ಪರಿಸ್ಥಿತಿಗೆ ಹೋಗುತ್ತಿರುವುದು ವಿಷಾದನೀಯವಾಗಿದೆ.
ಇದನ್ನು ವಿಶ್ವವ್ಯಾಪಿ ಹರಡುತ್ತಿರುವ ಒಂದು ಸಾಂಕ್ರಾಮಿಕ ಕಾಯಿಲೆ ಎಂದರೂ ತಪ್ಪಾಗಲಾರದು, ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ೬ ಲಕ್ಷಕಿಂತ ಹೆಚ್ಚು ಜನ ಪರೋಕ್ಷ ಧೂಮಪಾನದಿಂದ ಸಾವನ್ನಪ್ಪುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸುವುದಕ್ಕೋಸ್ಕರ ೨೦೦೩ರಲ್ಲಿ ಸಿಗರೇಟ್ಸ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ(ಕೋಟ್ಪಾ)ಯನ್ನು ಜಾರಿಗೊಳಿಸಲಾಗಿದೆ.
ಈ ಕಾಯಿದೆಯಡಿ ಒಟ್ಟು ೩೩ ಸೆಕ್ಷನ್‌ಗಳಿದ್ದು ಅದರಲ್ಲಿ ಪ್ರಮುಖವಾಗಿ ಸೆಕ್ಷನ್೪ - ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಅಪರಾಧ, ಇದು ಉಲ್ಲಂಘನೆಯಾದರೆ ೨೦೦ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ.
ಅಂಗಡಿ, ಹೊಟೇಲ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಬಸ್ ಹಾಗೂ ರೈಲು ನಿಲ್ದಾಣ, ಚಿತ್ರಮಂದಿರ, ಸರ್ಕಾರಿ ಕಚೇರಿ ಮತ್ತು ಆಸ್ಪತ್ರೆ, ಶಾಲೆ, ಕಾಲೇಜು, ಗ್ರಂಥಾಲಯ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟುನಿಟ್ಟಾಗಿ ಧೂಮಪಾನ ನಿಷೇಧಿಸಲಾಗಿದೆ ಹಾಗೂ ಸೆಕ್ಷನ್ ೫ - ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು ಮತ್ತು ಉತ್ತೇಜನ ನಿಷೇಧ, ಸೆಕ್ಷನ್ ೬ಎ - ತಂಬಾಕು ಉತ್ಪನ್ನಗಳು ಅಪ್ರಾಪ್ತ ವಯಸ್ಕರಿಗೆ (೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ) ಸಿಗದಂತೆ ನಿಯಂತ್ರಣ ಮಾಡುವುದು, ಸೆಕ್ಷನ್ ೬ಬಿ - ಶೈಕ್ಷಣಿಕ ಸಂಸ್ಥೆಯ ಆವರಣದಿಂದ ೧೦೦ಗಜ ಅಂತರದಲ್ಲಿ ಯಾವುದೇ ರೀತಿಯ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಹಾಗೂ ಸೆಕ್ಷನ್ ೭ - ಸಿಗರೇಟ್ ಹಾಗೂ ಇತರ ತಂಬಾಕು ಉತ್ಪನ್ನಗಳ ಮೇಲೆ ನಿರ್ದಿಷ್ಟ ಆರೋಗ್ಯ ಎಚ್ಚರಿಕೆಗಳ ಸಂದೇಶಗಳಿಲ್ಲದೆ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ.
ತಂಬಾಕು ಉತ್ಪನ್ನಗಳ ಸೇವನೆಯಿಂದ ಸರಕಾರದ ಬೊಕ್ಕಸಕ್ಕೂ ದೊಡ್ಡ ನಷ್ಟವಾಗುತ್ತದೆ, ತಂಬಾಕಿನಿAದ ಉಂಟಾಗುವ ಆರ್ಥಿಕ ಹೊರೆಯು ಭಾರತದ ಜಿಡಿಪಿಯ ಶೇ. ೧ಕ್ಕಿಂತ ಹೆಚ್ಚು ಎಂದು ಅಧ್ಯಯನವು ತಿಳಿಸುತ್ತದೆ. ಈ ನಿಟ್ಟಿನಲ್ಲಿ ತಂಬಾಕು ಸೇವನೆ ವಿರುದ್ಧ ದೊಡ್ಡ ಮಟ್ಟದ ಅರಿವು ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಮೇ ೩೧ನ್ನು “ವಿಶ್ವ ತಂಬಾಕು ರಹಿತ ದಿನ”ವಾಗಿ ಆಚರಿಸುತ್ತಿದೆ.
ತಂಬಾಕು ತ್ಯಜಿಸಿ ಉತ್ತಮ ಆಹಾರ ಸೇವಿಸಿ ಹಾಗೂ ಮಾನವಾಭಿವೃದ್ಧಿಗೆ ಕಂಟಕವಾಗಿರುವ ಈ ಪಿಡುಗಿನ ನಿರ್ಮೂಲನೆಗೆ ಸಹಕರಿಸಿ ತಂಬಾಕು ಮುಕ್ತ ಪೀಳಿಗೆ ನಿರ್ಮಾಣಕ್ಕೆ ಕೈ ಜೋಡಿಸಿ.
- ಆರ್. ಮಂಜುನಾಥ್, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಕೊಡಗು ಜಿಲ್ಲೆ.