v ಓರ್ವ ಮುಖ್ಯಮಂತ್ರಿ-೨೪ ಸಚಿವರಿದ್ದ ಜಿಲ್ಲೆ...! v ಇದೀಗ ಸತತ ೨೦ ವರ್ಷದಿಂದ ತವರಿನ ಸಚಿವರನ್ನೇ ಕಾಣದ ದೌರ್ಭಾಗ್ಯ v ಕೊಡಗು ಕರ್ನಾಟಕಕ್ಕೆ ಕೇವಲ ಚಿನ್ನದ ಮೊಟ್ಟೆಯಿಡುವ ಕೋಳಿ

ಕಾಯಪಂಡ ಶಶಿ ಸೋಮಯ್ಯ

ಮಡಿಕೇರಿ, ಮೇ ೩೦: ಒಂದೊಮ್ಮೆ ಪ್ರತ್ಯೇಕ ರಾಜ್ಯ, ಓರ್ವ ಮುಖ್ಯಮಂತ್ರಿ, ಒಬ್ಬರು ಗೃಹ ಸಚಿವರು, ಒಬ್ಬರು ಸ್ಪೀಕರ್, ೨೪ ಶಾಸಕರನ್ನು ಕೊಡಗು ಜಿಲ್ಲೆ ಒಳಗೊಂಡಿತ್ತು ಎಂದರೆ ಪ್ರಸ್ತುತದ ಸಮಾಜದಲ್ಲಿ ಇತಿಹಾಸದ ಅರಿವು ಇಲ್ಲದ ಇತರ‍್ಯಾರೂ ಒಪ್ಪಿಕೊಳ್ಳುವುದೇ ಇಲ್ಲ. ಇದು ಕನಸಲ್ಲ ನಿಜವೇ ಆಗಿತ್ತು. ಅಂದು ಹೀಗಿದ್ದ ಕೊಡಗು ಪ್ರಸ್ತುತ ಈ ಪರಿಸ್ಥಿತಿಯನ್ನು ಎದುರಿಸುವ ಕಾಲ ಬರುತ್ತದೆ ಎಂದು ಆಗಿನ ಹಿರಿರ‍್ಯಾರೂ ಊಹಿಸಿರಲಿಲ್ಲವೇನೋ...? ಪ್ರತ್ಯೇಕ ‘ಸಿ’ ರಾಜ್ಯವಾಗಿದ್ದ ಉಚ್ಛಾçಯ ಸ್ಥಿತಿಯಲ್ಲಿದ್ದ ಕೊಡಗು ಇದೀಗ ಕೇವಲ ಎನಿಸುವ ಎರಡೇ ಎರಡು ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದೆ.

೨೦೦೮ ರ ತನಕ ಮೂರು ಲೋಕಸಭಾ ಕ್ಷೇತ್ರವಿದ್ದದ್ದು ಬಳಿಕ ಎರಡಕ್ಕೆ ಇಳಿಯಿತು. ಪ್ರತ್ಯೇಕ ಲೋಕಸಭಾ ಕ್ಷೇತ್ರ ಕೂಡ ಈ ಕೊಡಗಿಗೆ ಇಲ್ಲ. ಹೀಗಿರುವಾಗ ಈ ಪುಟ್ಟ ಜಿಲ್ಲೆ ಕರ್ನಾಟಕದ ಪಾಲಿಗೆ ಯಾವ ಲೆಕ್ಕ ಎಂಬುದು ಇದೀಗ ಮತ್ತೊಮ್ಮೆ ರುಜುವಾತಾಗಿದೆ.

ಬಿ.ಜೆ.ಪಿ.ಯೇ ಇರಲಿ... ಕಾಂಗ್ರೆಸೇ ಬರಲಿ ಕೊಡಗು ಮಾತ್ರ ಲೆಕ್ಕಕ್ಕುಂಟು... ಆಟಕ್ಕಿಲ್ಲ. ಬಹುಶಃ ಇಡೀ ಕರ್ನಾಟಕದಲ್ಲಿ ಬರೋಬ್ಬರಿ ಸತತ ೨೦ ವರ್ಷಗಳಿಂದ ಕೊಡಗಿನವರು ರಾಜಕೀಯವಾಗಿ ತುಳಿತಕ್ಕೆ ಒಳಗಾಗುತ್ತಿದ್ದಾರೆ. ಇಷ್ಟು ಸುದೀರ್ಘ ವರ್ಷಗಳಿಂದ ಕೊಡಗಿನವರಿಗೆ ಅದು ಯಾವುದೇ ಪಕ್ಷವಿರಲಿ. ಕನಿಷ್ಟ ಒಂದು ಸಚಿವ ಸ್ಥಾನವನ್ನು ನೀಡಲು ಮುಂದಾಗಿರುವುದು ಇಲ್ಲಿನ ವಾಸ್ತವತೆಗೆ ಹಿಡಿದ ಕೈಗನ್ನಡಿಯಾಗಿದೆ. ಎಲ್ಲವೂ ಜಾತಿ ಆಧಾರದಲ್ಲಿ ಅಥವಾ ಬೇರೆ ಬೇರೆ ಕಾರಣಗಳಿಂದ ಪರಿಗಣಿಸಲ್ಪಡುವುದಾದರೆ ಕೊಡಗಿನವರು ಮತ್ತೂ ಯಾತಕ್ಕಾಗಿ ಕರ್ನಾಟಕ ರಾಜ್ಯದೊಂದಿಗೆ ಬೆರೆತಿರಬೇಕು ಎಂಬ ಆಕ್ರೋಶದ ಸನ್ನಿವೇಶ ಇದೀಗ ಎದುರಾಗಿದೆ.

ಪ್ರತ್ಯೇಕ ರಾಜ್ಯವಾಗಿ ಸಮೃದ್ಧವಾಗಿದ್ದ ಕೊಡಗು ವಿಶಾಲ ಕರ್ನಾಟಕದೊಂದಿಗೆ ವಿಲೀನಗೊಂಡಿದ್ದು ಒಂದು ಕರಾಳ ಇತಿಹಾಸ ಎಂಬ ಭಾವನೆ ಇದೀಗ ಜನರನ್ನು ಕೆರಳಿಸುವಂತೆ ಮಾಡುತ್ತಿದೆ. ವಿಲೀನದ ಸಂದರ್ಭ ಹತ್ತು ಹಲವಾರು ಷರತ್ತುಗಳು ಇತ್ತೆನ್ನಲಾಗಿದ್ದು ಇದೀಗ ಈ ಯಾವ ಷರತ್ತಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲ...

ರಾಜ್ಯಕ್ಕೆ ಅತಿ ಹೆಚ್ಚಿನ ತೆರಿಗೆ - ಆರ್ಥಿಕ ಆದಾಯವನ್ನು ನೀಡುವ ಜಿಲ್ಲೆ ಇದಕ್ಕೆ ಮಾತ್ರ ಸೀಮಿತವೇ ಎಂಬ ಪ್ರಶ್ನೆ ಪಕ್ಷಾತೀತವಾಗಿ... ರಾಜಕೀಯ ರಹಿತವಾಗಿ ಜಾತಿ-ಜನಾಂಗದ ಭಿನ್ನ-ಬೇಧವಿಲ್ಲದಂತೆ ಎದುರಾಗಿದೆ.

ಕಳೆದ ೨೦೦೪ನೇ ಇಸವಿಯಿಂದ ಜಿಲ್ಲೆ ಸತತವಾಗಿ ಬಿ.ಜೆ.ಪಿ. ಶಾಸಕರನ್ನು ಕಂಡಿತ್ತು. ಶಾಸಕ ಸ್ಥಾನ ಎಂಬುದು ರಾಜ್ಯದ ೨೨೪ ಕ್ಷೇತ್ರಗಳಿಗೂ ಇದೆ. ಮೂವರು ಶಾಸಕ ಕ್ಷೇತ್ರ ಎರಡಕ್ಕೆ ಇಳಿದಾಗಲೂ ಜಿಲ್ಲೆಯವರು ಒಪ್ಪಿಕೊಂಡರು. ಮಂಗಳೂರಿನೊAದಿಗೆ ಇದ್ದ ಲೋಕಸಭಾ ಕ್ಷೇತ್ರ ಮೈಸೂರು ಕ್ಷೇತ್ರಕ್ಕೆ ಬದಲಾವಣೆಗೊಂಡರೂ ಬಾಯಿಮುಚ್ಚಿಕೊಂಡಿದ್ದರು.

ಜಿಲ್ಲೆಯ ಇಬ್ಬರು ಶಾಸಕರು ರಾಜ್ಯ ಸರಕಾರದ ಆಡಳಿತ ಪಕ್ಷದವರೇ ಆದರೂ ಸತತ ೨೦ ವರ್ಷ ಕೊಡಗಿಗೆ ಸಚಿವ ಸ್ಥಾನ ನೀಡಲಾಗಿಲ್ಲ. ಈ ಅವಧಿಯಲ್ಲಿ ರಾಜ್ಯದಲ್ಲಿ ಬಿ.ಜೆ.ಪಿ. ಎರಡು ಬಾರಿ ಅಧಿಕಾರದಲ್ಲಿತ್ತು. ಶಾಸಕ ಕೆ.ಜಿ. ಬೋಪಯ್ಯ ಅವರು ಅನಿವಾರ್ಯ ಎಂಬAತೆ ಮಾತ್ರ ೨೦೦೮ರ ಬಿ.ಜೆ.ಪಿ. ಸರಕಾರದಲ್ಲಿ ಸ್ಪೀಕರ್ ಆಗಿದ್ದರು. ಇವರೊಂದಿಗೆ ಶಾಸಕರಾಗಿದ್ದ, ಐದು ಬಾರಿ ಗೆದ್ದ ಅಪ್ಪಚ್ಚು ರಂಜನ್ ಅವರಿಗೆ ಮುಂದಿನ ಚುನಾವಣೆ ದೃಷ್ಟಿಯಿಂದ ಮಾತ್ರ ೨೦೦೮ ರಲ್ಲಿ ಕೊನೆಯ ಹಂತದ ಅವಧಿಯಲ್ಲಿ ಕೇವಲ ೬ ತಿಂಗಳು ನಾಮಕಾವಸ್ಥೆಗೆ ಎಂಬAತೆ ಸಚಿವ ಸ್ಥಾನ ನೀಡಲಾಗಿತ್ತು. ಇದು ಬಿ.ಜೆ.ಪಿ.ಯ ಕೊಡುಗೆ. ಇದೀಗತಾನೆ ಮುಕ್ತಾಯಗೊಂಡ ೧೫ನೇ ವಿಧಾನಸಭೆಯಲ್ಲಿ ಅಧಿಕಾರದಲ್ಲಿದ್ದುದೂ ಇದೇ ಬಿ.ಜೆ.ಪಿ. ಆದರೆ ಇದೇ ಪಕ್ಷದ ಶಾಸಕದ್ವಯರನ್ನು ಬಿ.ಜೆ.ಪಿ. ಸಚಿವರಾಗಿ ಮಾಡಲೇ ಇಲ್ಲ. ಕೊನೆಯತನಕ ಅವಕಾಶ ಇತ್ತಾದರೂ ಕಡೆಗಣನೆ ಮಾಡಲಾಗಿತ್ತು.

ಅದೇ ರಾಗ... ಅದೇ ಹಾಡು...

ಇದೀಗ ೧೬ನೇ ವಿಧಾನಸಭೆಗೆ ಚುನಾವಣೆ ನಡೆದಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ವಿಶೇಷವೆಂದರೆ ಕೊಡಗಿನಿಂದ ಈ ಬಾರಿ ಎರಡೂ ಕ್ಷೇತ್ರಗಳಿಂದ ಚುನಾಯಿತವಾಗಿರುವವರು ಕಾಂಗ್ರೆಸ್ ಶಾಸಕರು. ಈ ಕಾರಣದಿಂದಾಗಿ ಹೊಸ ಸರಕಾರವಾದರೂ ಕೊಡಗನ್ನು ಪರಿಗಣಿಸಿ ಜಿಲ್ಲೆಯ ಓರ್ವರನ್ನು ಸಚಿವರನ್ನಾಗಿ ಮಾಡಬಹುದು ಎಂಬ ಭಾರೀ ನಿರೀಕ್ಷೆ ಜಿಲ್ಲೆಯಲ್ಲಿತ್ತು. ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಕಾಂಗ್ರೆಸ್ ಸಚಿವರನ್ನಾಗಿ ಮಾಡಲಿದೆ ಎಂಬ ಮಾತು ಕಾಂಗ್ರೆಸಿಗರಲ್ಲಿ ಮಾತ್ರವಲ್ಲ ಪಕ್ಷಾತೀತವಾಗಿಯೂ ಈ ನಿರೀಕ್ಷೆ ಇತ್ತು.

ಆದರೆ ಕಾಂಗ್ರೆಸ್ ಸರಕಾರವೂ ಕೊಡಗನ್ನು ಬಿ.ಜೆ.ಪಿ.ಯ ಮಾದರಿಯಲ್ಲೇ ನಿರ್ಲಕ್ಷಿಸಿದೆ. ಈ ಬಾರಿಯಾದರೂ ಕೊಡಗು ಜಿಲ್ಲೆ ಇಲ್ಲಿಯ ಪ್ರತಿನಿಧಿಯನ್ನೇ ಸಚಿವರಾಗಿ ಕಾಣಲಿದೆ ಎಂಬ ಆಶಾಭಾವನೆ ಮತ್ತೆ ಹುಸಿಯಾಗಿದೆ. ಹೊಸ ಸರಕಾರದ ಸಚಿವ ಸಂಪುಟದಲ್ಲೂ ಕೊಡಗಿಗೆ ಯಾವುದೇ ಪ್ರಾತಿನಿಧ್ಯ ನೀಡಲಾಗಿಲ್ಲ.

ಹೊಸ ಚರ್ಚೆಗೆ ಗ್ರಾಸ

ರಾಜಕೀಯವಾಗಿ ಕೊಡಗು ಜಿಲ್ಲೆ ಪದೇ ಪದೇ ನಿರ್ಲಕ್ಷö್ಯಕ್ಕೆ ಒಳಗಾಗುತ್ತಿರುವುದು ಇದೀಗ ಹೊಸ ಚರ್ಚೆಗೆ ಗ್ರಾಸವಾಗುತ್ತಿದೆ. ಪ್ರತ್ಯೇಕ ರಾಜ್ಯವಾಗಿದ್ದ ಜಿಲ್ಲೆ ಎರಡೇ ಎರಡು ವಿಧಾನಸಭಾ ಕ್ಷೇತ್ರಕ್ಕೆ ಇಳಿದಿರುವುದು, ಪ್ರತ್ಯೇಕ ಲೋಕಸಭಾ ಕ್ಷೇತ್ರವನ್ನೂ ಒಳಗೊಳ್ಳದಿರುವುದು ಜಿಲ್ಲೆ ಮುಂದಿನ ದಿನಗಳಲ್ಲೂ ಅದು ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ ಪರಿಗಣನೆಗೆ ಬರುವುದಿಲ್ಲ ಎಂಬ ಅಂಶ ಕೊಡಗಿನ ಜನರಿಗೆ ಅರಿವಿಗೆ ಬಂದAತಾಗಿದೆ. ಈಗಲೂ ಹೀಗೆ - ಭವಿಷ್ಯದಲ್ಲೂ ಅಷ್ಟೇ ಎಂಬುದು ಖಚಿತವಾದಂತಾಗಿದೆ. ಪ್ರಸ್ತುತ ಎಲ್ಲವೂ ಪ್ರಬಲ ಸಮುದಾಯ - ರಾಜಕೀಯವಾಗಿ ಪ್ರಬಲರಾಗಿರುವವರಿಗೆ ಮಾತ್ರ ಮೀಸಲು ಎಂದಾದರೆ ಇನ್ನು ಮುಂದೆ ಕೊಡಗು ಯಾವತ್ತಿಗೂ ಲೆಕ್ಕಕ್ಕೇ ಬರುವುದೇ ಇಲ್ಲ ಎಂಬುದು ಖಚಿತವಾದಂತಿದೆ.

ಕೊಡಗಿನ ಜನರು ರಾಜ್ಯ - ರಾಷ್ಟçಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿಲ್ಲವೇ ಎಂಬ ವಾದ-ಹತಾಶೆ ಹುಟ್ಟಿಕೊಳ್ಳುವಂತಾಗಿದೆ. ಇದು ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಪ್ರತ್ಯೇಕ ರಾಜ್ಯದ ಕೂಗಿಗೆ ಎಡೆಮಾಡಿಕೊಡುವುದು ಖಂಡಿತಾ ಎಂಬುದಾಗಿ ಜನರು ಮಾತನಾಡಿಕೊಳ್ಳುವಂತಾಗಿದೆ. ಎಲ್ಲಾ ಸರಕಾರಗಳು ಕೊಡಗಿಗೆ ಕೇವಲ ಹೊರ ಜಿಲ್ಲೆಯವರನ್ನೇ ಉಸ್ತುವಾರಿ ಸಚಿವರಾಗಿ ನೇಮಿಸುವಂತಾದಲ್ಲಿ ಕೊಡಗಿಗೆ ರಾಜ್ಯದಲ್ಲಿ ಯಾವ ಬೆಲೆಯಿದೆ. ಜಿಲ್ಲೆ ಕೇವಲ ರಾಜ್ಯಕ್ಕೆ ಚಿನ್ನದ ಮೊಟ್ಟೆಯಿಡುವ ಕೋಳಿ ಮಾತ್ರವೇ ಎಂಬುದು ಈಗಿನ ಪ್ರಶ್ನೆಯಾಗಿದೆ.