ಸೋಮವಾರಪೇಟೆ, ಮೇ ೨೯: ಸಿಡಿಲು ಬಡಿದು ವಾಸದ ಮನೆಗೆ ಹಾನಿಯಾಗಿರುವ ಘಟನೆ ಪಟ್ಟಣ ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಬೀಡು ಗ್ರಾಮದಲ್ಲಿ ನಡೆದಿದೆ.

ಹಾನಗಲ್ಲು ಗ್ರಾಮ ಪಂಚಾಯಿತಿಯ ಮಾಜೀ ಅಧ್ಯಕ್ಷೆ, ಹೊಸಬೀಡು ಗ್ರಾಮದ ವನಿತಾ ನಾಗರಾಜು ಅವರಿಗೆ ಸೇರಿದ ವಾಸದ ಮನೆಗೆ ಇಂದು ಸಂಜೆ ೬ ಗಂಟೆ ಸುಮಾರಿಗೆ ಸಿಡಿಲು ಬಡಿದಿದ್ದು, ಮನೆಗೆ ಹಾನಿಯಾಗಿದೆ.

ವನಿತಾ ನಾಗರಾಜು ಅವರು ಮನೆಯೊಳಗೆ ಇದ್ದ ಸಂದರ್ಭವೇ ಸಿಡಿಲು ಬಡಿದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಮನೆಯ ಗೋಡೆಗಳು ಬಿರುಕುಬಿಟ್ಟಿದ್ದು, ವಿದ್ಯುತ್ ತಂತಿಗಳು ಸುಟ್ಟು ಕರಕಲಾಗಿದೆ. ಮನೆಯ ಕಿಟಕಿ, ಬಾಗಿಲು, ಛಾವಣಿ ಹಾನಿಗೀಡಾಗಿವೆ.

ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕ ಪ್ರಹ್ಲಾದ್, ಗ್ರಾಮ ಲೆಕ್ಕಿಗರಾದ ಶ್ವೇತಾ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.