ವೀರಾಜಪೇಟೆ, ಮೇ ೨೯: ವೀರಾಜಪೇಟೆ ತಾಲೂಕು ಬೆಳ್ಳುಮಾಡು ಮತ್ತು ಕುಂಜಿಲಗೇರಿ ಗ್ರಾಮಗಳನ್ನು ಪ್ರತ್ಯೇಕಿಸುವ ದೇವರ ಕಾಡಿನಲ್ಲಿ ನೆಲೆ ಕಂಡಿರುವ ಬೆಳ್ಳುಮಾಡು ಗ್ರಾಮದ ಆಡುಕೋಣಿ ಶ್ರೀ ಶಾಸ್ತಾವು (ಈಶ್ವರ) ಮತ್ತು ವಿಷ್ಣುಮೂರ್ತಿ ದೇಗುಲದಲ್ಲಿ ದೃಢಕಲಶಾಭಿಷೇಕ ಕಾರ್ಯಕ್ರಮ ನಡೆಯಿತು. ಶ್ರೀ ದೇಗುಲವು ಪುರಾತನವಾಗಿದೆ ಸುಮಾರು ೫೦ ಲಕ್ಷ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡು ಮಾರ್ಚ್ ತಿಂಗಳಲ್ಲಿ ಲೋಕಾರ್ಪಣೆಗೊಂಡಿತ್ತು. ದೇಗುಲ ನಿರ್ಮಾಣವಾದ ಬಳಿಕ ೪೮ ದಿನಗಳು (ಒಂದು ಮಂಡಲ) ಕಾಲ ಕಳೆದು ಶ್ರೀ ದೇವರಿಗೆ ನಿತ್ಯ ಪೂಜೆ, ವಾರ್ಷಿಕ ಪೂಜೆ, ವಿಶೇಷ ಪೂಜೆಗಳನ್ನು ಮಾಡಲು ಆರಂಭಿಕ ಸೇವೆ ಮಾಡುವುದು ದೈವಿಕ ಸೇವೆಯ ವಾಡಿಕೆಯಾಗಿದೆ. ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಪ್ರಜ್ವಲ್ ಕುದ್ದಣಾಯ ಮತ್ತು ಇತರ ಪುರೋಹಿತ ವೃಂದದ ಸಾನಿಧÀ್ಯದಲ್ಲಿ ದೃಢಕಲಶಾಭಿಷೇಕ ಪೊಜೆ, ದೈವಿಕಾ ಕೈಂಕರ್ಯಗಳು ನಡೆದವು. ಪೂಜೆಗಳ ಅಂಗವಾಗಿ ಸರ್ವರ ಸಮ್ಮುಖದಲ್ಲಿ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಚನ, ಪ್ರಸಾದ ಶುದ್ಧಿ, ವಾಸ್ತು ಬಲಿ, ಗಣಪತಿ ಹೋಮ, ಕಲಶ ಪೂಜೆ, ಶ್ರೀ ಶಾಸ್ತಾವು (ಈಶ್ವರ) ಮತ್ತು ವಿಷ್ಣುಮೂರ್ತಿ ದೇವರಿಗೆ ದೃಢಕಲಶಾಭಿಷೇಕ, ಸರ್ವ ಅಲಂಕಾರ ಮಾಹಾಪೂಜೆ ಸಲ್ಲಿಕೆಯಾಯಿತು. ದೇವತಾ ಕೈಂಕರ್ಯಗಳ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಸೇವೆ ದೇಗುಲದ ಆಡಳಿತ ಮಂಡಳಿಯ ವತಿಯಿಂದ ನೆರೆವೇರಿತು.
ದೇಗುಲದಲ್ಲಿ ನಡೆದ ದೈವ ಕಾರ್ಯಕ್ರಮದಲ್ಲಿ ದೇಗುಲದ ತಕ್ಕ ಮುಖ್ಯಸ್ಥರು, ಅಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಬೆಳ್ಳುಮಾಡು ಗ್ರಾಮ ಹಾಗೂ ನೆರೆಕೆರೆಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಶ್ರೀ ದೇವರ ಅನುಗ್ರಹ ಪಡೆದರು.