ಸುಂಟಿಕೊಪ್ಪ, ಮೇ ೨೬: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ಉಲ್ಬಣಿಸುತ್ತಿರುವ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರು ಸುಂಟಿಕೊಪ್ಪ ಪ್ರಾಥಮಿಕ ಕೇಂದ್ರವು ಹೋಬಳಿ ಮಟ್ಟದ ಕೇಂದ್ರವಾಗಿದ್ದು, ೭ ಗ್ರಾಮ ಪಂಚಾಯಿತಿಗೆ ಸೇರಿದ ಮಂದಿ ಯಾವುದೇ ರೀತಿಯ ಖಾಯಿಲೆಗಳು ಬಾದಿಸಿದರೂ ಈ ಆರೋಗ್ಯ ಕೇಂದ್ರಕ್ಕೆ ಅವಲಂಬಿಸಿದ್ದಾರೆ. ಪ್ರತಿನಿತ್ಯ ೧೦೦ಕ್ಕೂ ಅಧಿಕ ಮಂದಿ ಚಿಕಿತ್ಸೆಗೆ ಬರುತ್ತಾರೆ.
ಇಲ್ಲಿನ ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲ, ರಾತ್ರಿ ಪಾಳಯದ ವೈದ್ಯರು ಲಭ್ಯವಿಲ್ಲ, ರಾಷ್ಟಿçÃಯ ಹೆದ್ದಾರಿ ಹಾದು ಹೋಗಿರುವುದರಿಂದ ನಿತ್ಯ ನೂರಾರು ವಾಹನಗಳಲ್ಲಿ ಪ್ರವಾಸಿಗರು ತೆರಳುವ ಸಂದರ್ಭ ಅವಘಡಗಳು ಸಂಭವಿಸಿದಾಗ ಗಾಯಗೊಂಡವರು ಮೃತಪಟ್ಟವರು ಬರುತ್ತಾರೆ. ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರು, ‘ಡಿ’ ಗ್ರೂಫ್ ನೌಕರರ ಕೊರತೆ ಇದೆ. ರಾತ್ರಿ ವೇಳೆ ಹೆರಿಗೆಗೆ ದಾಖಲಾಗುವವರು ಬರುತ್ತಾರೆ. ಶುಶ್ರೂಷಿಕರ ಕೊರತೆ ಇದೆ. ಅದನ್ನು ಭರ್ತಿ ಮಾಡಬೇಕು. ಆಸ್ಪತ್ರೆಯ ಅಂಬ್ಯುಲೆನ್ಸ್ ವಾಹನವು ಸಾರ್ವಜನಿಕರ ಸೇವೆಗೆ ಲಭ್ಯವಾಗುತ್ತಿಲ್ಲ ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಎ. ಉಸ್ಮಾನ್ ಸಮಸ್ಯೆಗಳನ್ನು ಮುಂದಿಟ್ಟರು.
ಡಾ. ಸತೀಶ್ ಕುಮಾರ್ ಮಾತನಾಡಿ, ವೈದ್ಯರ ಕೊರತೆ ಎಲ್ಲೆಡೆ ಇದೆ. ಇತರೆ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಲು ಪ್ರಯತ್ನಿಸುವುದಾಗಿ ಹೇಳಿದರು. ಡೆಂಗ್ಯೂ ಜ್ವರ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಂಡು ಬಂದಿದ್ದು, ಜಿಲ್ಲಾಡಳಿತ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದೂ ಹೇಳಿದರು.