ಕಣಿವೆ, ಮೇ ೨೬: ಕುಶಾಲ ನಗರದ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಅನುಕೂಲ ಒದಗಿಸುವ ಉದ್ದೇಶ ದಿಂದ ಕಾಲೇಜು ಆವರಣದಲ್ಲಿ ಕೋಟ್ಯಂತರ ರೂಗಳನ್ನು ಖರ್ಚು ಮಾಡಿ ನಿರ್ಮಿಸಿರುವ ವಸತಿ ನಿಲಯದ ಕಟ್ಟಡಗಳು ಇದುವರೆಗೂ ಬಳಕೆಯಾಗದ ಬಗ್ಗೆ ಕಾಲೇಜಿನ ವಿದ್ಯಾರ್ಥಿನಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭೂಸೇನಾ ನಿಗಮ ಹಾಗೂ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಾಣ ಗೊಂಡ ಜೋಡಿ ವಸತಿ ನಿಲಯ ಕಟ್ಟಡಗಳಲ್ಲಿ ೧೨೦ ವಿದ್ಯಾರ್ಥಿನಿಯರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಸದುದ್ದೇಶ ಹೊಂದಲಾಗಿದೆ.
ಆದರೆ ಆ ಎರಡೂ ಏಜೆನ್ಸಿಯವರು ಕಟ್ಟಡಗಳನ್ನೇನೋ ಕಟ್ಟಿ ಇಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲರಿಗೆ ಹಸ್ತಾಂತರಿಸಿದ್ದಾರೆ. ಆದರೆ ಆ ಕಟ್ಟಡಗಳ ಒಳಗೆ ವಿದ್ಯಾರ್ಥಿನಿಯರಿಗೆ ಊಟ ಹಾಗೂ ವಸತಿ ಅನುಕೂಲ ಒದಗಿಸುವ ಯಾವೊಂದು ಮೂಲ ಸೌಲಭ್ಯಗಳನ್ನು ಅಳವಡಿಸಿಲ್ಲ. ಹಾಗಾಗಿ ವಿದ್ಯಾರ್ಥಿನಿಯರ ಬಳಕೆಗೆ ಈ ಕಟ್ಟಡಗಳನ್ನು ನೀಡುವುದಾದರೆ ಡೈನಿಂಗ್ ಟೇಬಲ್‌ಗಳು, ಅಡುಗೆ ಪರಿಕರಗಳು, ಬಿಸಿ ನೀರಿನ ವ್ಯವಸ್ಥೆ, ಮಂಚಗಳು, ಹಾಸಿಗೆ ಹೊದಿಕೆಗಳು ಹೀಗೆ ಎಲ್ಲಾ ರೀತಿಯ ಸೌಲಭ್ಯಗಳ ಪರಿಕರಗಳನ್ನು ಒದಗಿಸಲು ೫೦ ಲಕ್ಷ ರೂಗಳ ಹೆಚ್ಚುವರಿ ಅನುದಾನದ ಅಗತ್ಯತೆ ಕುರಿತು ತಾಂತ್ರಿಕ ಶಿಕ್ಷಣ ಇಲಾಖೆಗೆ ಪತ್ರ ಬರೆದು ಕೋರಲಾಗಿದೆ.
ಒಂದು ವೇಳೆ ಸರ್ಕಾರದಿಂದ ಅನುದಾನ ಬಂದಲ್ಲಿ ಸೌಲಭ್ಯಗಳನ್ನು ಪೂರೈಸಿ ಎರಡೂ ಕಟ್ಟಡಗಳಲ್ಲಿ ಕಾಲೇಜಿನ ಮೊದಲ ವರ್ಷದ ಇಂಜಿನಿಯರಿAಗ್ ಪ್ರವೇಶಾತಿ ಪಡೆದ ವಿದ್ಯಾರ್ಥಿನಿಯರಿಗೆ ಆದ್ಯತೆಯನುಸಾರ ವಸತಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕಾಲೇಜು ಪ್ರಾಂಶುಪಾಲ ಡಾ. ಸತೀಶ್ ‘ಶಕ್ತಿ’ಗೆ ತಿಳಿಸಿದರು.
- ಕೆ.ಎಸ್. ಮೂರ್ತಿ