ವೀರಾಜಪೇಟೆ, ಮೇ ೨೪ : ಯುವಕನೋರ್ವನ ಮೇಲೆ ಹಾಡಹಗಲೇ ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಐಮಂಗಲ ಜಂಕ್ಷನ್ ಬಳಿ ನಡೆದಿದೆ.
ಸಿದ್ದಾಪುರ ಮಾಲ್ದಾರೆ ಹುಂಡಿ ಗ್ರಾಮದ ನಿವಾಸಿ ಛಾಯಾಗ್ರಾಹಕ ವೃತ್ತಿ ಮಾಡುತ್ತಿದ್ದ ಸಿ.ಎ. ರಿಯಾಜ್ (೩೪) ಎಂಬಾತನೆ ಪತ್ನಿಯ ಕುಟುಂಬ ಸದಸ್ಯರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ.
ಘಟನೆಯ ವಿವರ: ಹುಂಡಿ ಗ್ರಾಮದ ಸಿ.ಎ. ರಿಯಾಜ್ ಚಿಟ್ಟಡೆ ಗ್ರಾಮದ ಇ.ಎಂ. ಮುಸ್ತಾಫ ಎಂಬವರ ಪುತ್ತಿ ಮಸೂದ ಎಂಬಾಕೆಯನ್ನು ಸುಮಾರು ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದು ದಂಪತಿಗೆ ಹೆಣ್ಣು ಮಗು ಇದೆ. ಪತಿಯ ಮನೆಯಲ್ಲಿ ಕೆಲ ಕಾಲ ಇದ್ದ ಮಸೂದ ನಂತರ ಸಾಮರಸ್ಯ ಕೊರತೆಯಿಂದಾಗಿ ಚಿಟ್ಟಡೆಯ ಸ್ವಗೃಹಕ್ಕೆ ಹಿಂತಿರುಗಿದ್ದರು. ಬಳಿಕ ಪತಿ ರಿಯಾಜ್‌ನಿಂದ ವಿಚ್ಛೇದÀನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು. ವಿಚ್ಛೇದನದ ವ್ಯಾಜ್ಯ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ರಿಯಾಜ್ ಮದುವೆಯ ಸಂದರ್ಭದಲ್ಲಿ ಪಡೆಯಲಾಗಿದ್ದ ಚಿನ್ನಾಭರಣಗಳನ್ನು ಪತ್ನಿಗೆ ಹಿಂದಿರುಗಿಸಲು ನ್ಯಾಯಾಲಯ ದಲ್ಲಿ ನಿನ್ನೆ ದಿನ ನಿಗಧಿಗೊಳಿಸಲಾಗಿತ್ತು. ಅದರಂತೆ ರಿಯಾಜ್ ನಿನ್ನೆ ದಿನ ಹುಂಡಿ ಗ್ರಾಮದಿಂದ ತನ್ನ ಅಣ್ಣನ ದ್ವಿಚಕ್ರ ವಾಹನದಲ್ಲಿ ವೀರಾಜಪೇಟೆ ನ್ಯಾಯಾಲಯಕ್ಕೆ ಆಗಮಿಸಿ ಹಿಂತಿರುಗುವ ವೇಳೆ ಸುಮಾರು ಐಮಂಗಲ ಜಂಕ್ಷನ್ ಬಳಿ ವಾಹನವನ್ನು ಅಡ್ಡಗಟ್ಟಿದ ಮಸೂದಳ ತಮ್ಮ ಮತ್ತು ತಂದೆಯ ತಮ್ಮ ಅಕ್ಕನ ಬಾಳು ಹಾಳು ಮಾಡಿದೆಯಲ್ಲಾ.. ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎನ್ನುತ್ತಾ ಹರಿತವಾದ ಚಾಕುವಿನಿಂದ ರಿಯಾಜ್‌ನ ಎದೆಯ ಭಾಗ, ಕತ್ತಿನ ಭಾಗ, ಕೈಗಳಿಗೆ ಹಲ್ಲೆ ಮಾಡಿದ್ದಾರೆ. ಗಂಭೀರ ಗಾಯಗೊಂಡ ರಿಯಾಜ್ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ವೀರಾಜಪೇಟೆ ಗ್ರಾಮಾಂತರ ಪೊಲೀಸರು ರಿಯಾಜ್ ನೀಡಿರುವ ದೂರಿನ ಮೇರೆಗೆ ಮಸೂದಳ ತಮ್ಮ ಮುರ್ಶಿದ್ ಮತ್ತು ಮುಸ್ತಾಫ ಅವರ ತಮ್ಮ ಲತೀಫ್ ಎಂಬವರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
- ಕಿಶೋರ್ ಕುಮಾರ್ ಶೆಟ್ಟಿ