ಸಿದ್ದಾಪುರ, ಮೇ ೨೪: ನೆಲ್ಯಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿ ತಾ. ೨೯ ರಂದು ಸಿಪಿಐ(ಎಂ) ವತಿಯಿಂದ ಗ್ರಾ.ಪಂ. ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಪಕ್ಷದ ಪ್ರಮುಖ ಪಿ.ಆರ್. ಭರತ್ ತಿಳಿಸಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೯ ರ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡು ನಿರಾಶ್ರಿತರಾದ ಕುಟುಂಬಗಳಿಗೆ ಇಂದಿಗೂ ಶಾಶ್ವತ ಪರಿಹಾರ ಕಲ್ಪಿಸದೇ, ನಿರಾಶ್ರಿತರಿಗಾಗಿ ಅಭ್ಯತ್‌ಮಂಗಲ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡ ಜಾಗದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳದೆ ಇರುವುದಕ್ಕೆ ಸ್ಥಳೀಯ ಗ್ರಾ.ಪಂ. ಹಾಗೂ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯ ಕಾರಣ ಎಂದು ದೂರಿದರು. ಅಲ್ಲದೆ ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಸುಮಾರು ೪೫೦ಕ್ಕೂ ಅಧಿಕ ಮಂದಿ ವಸತಿ ರಹಿತರು ಬಾಡಿಗೆ ಮನೆ ಹಾಗೂ ಲೈನ್ ಮನೆಯಲ್ಲಿ ವಾಸವಿದ್ದು, ಜಿಲ್ಲಾಡಳಿತ ಹಾಗೂ ಸರಕಾರ ಇತ್ತೀಚೆಗೆ ಬೆಟ್ಟದ ಕಾಡು ವ್ಯಾಪ್ತಿಯಲ್ಲಿ ವಶಪಡಿಸಿಕೊಂಡ ಜಾಗದ ಕಾನೂನು ತೊಡಕುಗಳನ್ನು ನಿವಾರಿಸಿ ಆದಷ್ಟು ಬೇಗ ಸ್ಥಳೀಯ ನಿರಾಶ್ರಿತರಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.
ಹಕ್ಕು ಪತ್ರ ವಿತರಣೆಯಲ್ಲಿ ಭ್ರಷ್ಟಾಚಾರ ಕಂಡುಬರುತ್ತಿದ್ದು ಹಣ ನೀಡಿದವರಿಗೆ ಹಕ್ಕು ಪತ್ರ ಶೀಘ್ರವಾಗಿ ದೊರಕುತ್ತದೆ. ಬಡ ಕೂಲಿಕಾರ್ಮಿಕರು ಇಂದಿಗೂ ಹಕ್ಕು ಪತ್ರಕ್ಕಾಗಿ ಅಲೆದಾಡುತ್ತಿದ್ದಾರೆ. ನೆಲ್ಯಹುದಿಕೇರಿಯ ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆ ನೆಪದಲ್ಲಿ ಕೂಲಿ ಕಾರ್ಮಿಕರು ಪ್ರತಿನಿತ್ಯ ಅಕ್ಕಿ ಪಡೆದುಕೊಳ್ಳಲು ಸಲುವಾಗಿ ‘ಥಂಬ್’ ಹೆಸರಿನಲ್ಲಿ ಕೆಲಸಕ್ಕೆ ರಜೆ ಹಾಕಿ ನ್ಯಾಯ ಬೆಲೆ ಅಂಗಡಿಗೆ ತೆರಳಿದರೆ ನೆಟ್ವರ್ಕ್ ಸಮಸ್ಯೆ ಎಂದು ಹಿಂತಿರುಗುತ್ತಿದ್ದು, ಅತ್ತ ಕೆಲಸಕ್ಕೂ ತೆರಳಲಾರದೆ ಇತ್ತ ಅಕ್ಕಿ ಕೊಂಡುಕೊಳ್ಳ ಲಾಗದೇ ಪರದಾಡುತ್ತಿದ್ದಾರೆ. ಆದಷ್ಟು ಬೇಗ ಆಹಾರ ಇಲಾಖೆ ಅಧಿಕಾರಿಗಳು ಇಲ್ಲಿನ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು. ನೆಲ್ಯಹುದಿಕೇರಿ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ಆಗ್ರಹಿಸಿ ಪಕ್ಷ ಹಲವಾರು ಬಾರಿ ಹೋರಾಟಗಳನ್ನು ಕೈಗೊಂಡಿದ್ದರೂ ಸಮಸ್ಯೆಯ ಇತ್ಯರ್ಥಕ್ಕೆ ಗ್ರಾ.ಪಂ ಮುಂದಾಗಲಿಲ್ಲ, ಅಲ್ಲದೆ ನಮ್ಮ ಪ್ರತಿಭಟನೆಯ ಸಂದರ್ಭದಲ್ಲಿ ಗ್ರಾ.ಪಂ. ಕಚೇರಿಯಲ್ಲಿ ಅಧ್ಯಕ್ಷರು ಹಾಗೂ ಪಿಡಿಓ ನಮ್ಮ ಮನವಿ ಪತ್ರ ಸ್ವೀಕರಿಸಲು ಕೂಡ ನಿಲ್ಲದೆ ಹೋರಾಟಗಾರರನ್ನು ಅವಮಾನಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಎಲ್ಲಾ ಸಮಸ್ಯೆಗಳನ್ನು ಮುಂದಿಟ್ಟು ತಾ. ೨೯ ರಂದು ನೆಲ್ಯಹುದಿಕೇರಿ ಗ್ರಾ.ಪಂ ಕಟ್ಟಡದ ಎದುರು ಸಿಪಿಐ(ಎಂ) ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಗ್ರಾ.ಪಂ ಅಧ್ಯಕ್ಷರು ಸೇರಿದಂತೆ ಆಹಾರ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದು ನಮ್ಮ ಬೇಡಿಕೆಯನ್ನು ಆಲಿಸಿ ಇತ್ಯರ್ಥಪಡಿಸಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಚಂದ್ರನ್, ಅಬೀಬ್, ಶಿವರಾಮ್, ಮುಸ್ತಫಾ ಹಾಜರಿದ್ದರು.