ಮಡಿಕೇರಿ, ಮೇ ೨೪: ಕಳೆದ ಮೂರು ದಿನಗಳÀಲ್ಲಿ ಅಮ್ಮತ್ತಿ ಹಾಗೂ ಸಿದ್ದಾಪುರ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಂಡು ಬಂದ ೧೫ ನಾಗರಹಾವುಗಳನ್ನು ಉರಗ ರಕ್ಷಕರುಗಳಾದ ಸುರೇಶ್ ಪೂಜಾರಿ, ರೋಷನ್ ರಕ್ಷಿಸಿ ದುಬಾರೆ ಅರಣ್ಯ ವ್ಯಾಪ್ತಿಯ ಗದ್ದಿಗೆ ಬೆಟ್ಟದಲ್ಲಿ ಬಿಟ್ಟಿದ್ದಾರೆ.

ಸುರೇಶ್ ಪೂಜಾರಿ ಮಾತನಾಡಿ, ಹೆಚ್ಚು ಬಿಸಿಲಿನ ತಾಪಮಾನದಿಂದ ಆಹಾರ ನೀರು ಅರಸಿ ಹಾವುಗಳು ಗ್ರಾಮಗಳತ್ತ ಬರುತ್ತಿವೆ. ಮತ್ತೊಂದೆಡೆ ಮಳೆ ಹೆಚ್ಚಾದ ಸಂದರ್ಭದಲ್ಲಿ ಬಿಲದಲ್ಲಿ ಶೀತದ ವಾತಾವರಣ ಹೆಚ್ಚು ಕಂಡು ಬಂದಲ್ಲಿ ಜಾಗ ಬದಲಿಸಿ ಮಳೆ ನೀರು ಬೀಳದ ಬೆಚ್ಚಗಿನ ಸ್ಥಳಗಳಿಗೆ ತೆರಳಿ ಆಶ್ರಯ ಕಂಡುಕೊಳ್ಳುತ್ತವೆ.

ನಾಗರಹಾವುಗಳು ಡಿಸೆಂಬರ್ ನಿಂದ ಜನವರಿವರೆಗೆ ಮಿಲನ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತವೆ.

ಫೆಬ್ರವರಿಯಿಂದ ಮಾರ್ಚ್ ವರಗೆ ಮೊಟ್ಟೆಗಳನ್ನು ಇಡಲು ಸುರಕ್ಷಿತ ಸ್ಥಳಗಳನ್ನು ಹುಡುಕಿಕೊಳ್ಳುತ್ತವೆ ಮೊಟ್ಟೆ ಇಟ್ಟ ೭೨ ದಿನಗಳ ನಂತರ ಮೊಟ್ಟೆಯಿಂದ ಮರಿಗಳು ಹೊರ ಬರುತ್ತವೆ ಎಂದು ತಿಳಿಸಿದ ಅವರು, ಹಾವುಗಳು ಕಂಡುಬAದಲ್ಲಿ ತಕ್ಷಣ ೮೨೭೭೧೩೧೮೬೩ ಸಂಖ್ಯೆಗೆ ಕರೆ ಮಾಡಿ ಎಂದು ಮನವಿ ಮಾಡಿದ್ದಾರೆ.

ಹಾವುಗಳನ್ನು ರಕ್ಷಿಸಿ ಅರಣ್ಯಕ್ಕೆ ಬಿಡುವ ಸಂದರ್ಭ ಉಪ ವಲಯ ಅರಣ್ಯಾಧಿಕಾರಿ ರಂಜನ್ ಸೇರಿದಂತೆ ಇನ್ನಿತರರು ಇದ್ದರು.

-ಮುಬಾರಕ್.