ವೀರಾಜಪೇಟೆ, ಮೇ ೨೪: ದೇವಣಗೇರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಫೈವ್ ಎ ಸೈಡ್ ಮೂಕೊಂಡ ಕಪ್ ಫುಟ್ಬಾಲ್ ಫೈನಲ್ಸ್ ಪಂದ್ಯಾಟದಲ್ಲಿ ಕೊಲ್ಲಿರ ಕುಟುಂಬ ಕಳ್ಳಿಚಂಡ ಕುಟುಂಬವನ್ನು ೩-೨ ಗೋಲುಗಳ ಅಂತರದಲ್ಲಿ ಟೈಬ್ರೇಕರ್‌ನಲ್ಲಿ ಮಣಿಸಿ ನಗದು ಇಪ್ಪತ್ತು ಸಾವಿರ ಹಾಗೂ ಟ್ರೋಫಿಯನ್ನು ಮುಡಿಗೇರಿಸಿ ಕೊಂಡಿತು. ದ್ವಿತೀಯ ಸ್ಥಾನ ಪಡೆದ ಕಳ್ಳಿಚಂಡ ಹತ್ತು ಸಾವಿರ ನಗದು ಹಾಗೂ ಟ್ರೋಫಿಯನ್ನು ಪಡೆದುಕೊಂಡರು.

ಪ್ರಥಮಾರ್ಧದಲ್ಲಿ ೨ ತಂಡಗಳಿಗೂ ಗೋಲು ಗಳಿಸಲು ವಿಫುಲ ಅವಕಾಶಗಳಿದ್ದರೂ ಯಾವುದೇ ಗೋಲು ದಾಖಲಾಗಲಿಲ್ಲ. ದ್ವಿತೀಯಾರ್ಧದ ಕೊನೆಯ ೫ ನಿಮಿಷದಲ್ಲಿ ಕಳ್ಳಿಚಂಡ ಕುಟುಂಬದ ಅತಿಥಿ ಆಟಗಾರ ನೆರ್ಪಂಡ ಕಾರ್ತಿಕ್ ಗೋಲುಗಳಿಸುವುದರ ಮೂಲಕ ಮುನ್ನಡೆ ಕಾಯ್ದುಕೊಂಡರು. ಪಂದ್ಯಾಟದ ಕೊನೆಯ ಕ್ಷಣ ೩೦ ಸೆಕೆಂಡುಗಳಿದ್ದಾಗ ಕೊಲ್ಲಿರ ತಂಡದ ಲೇಖನ್ ಅಪ್ಪಚ್ಚು ಗೋಲು ಬಾರಿಸುವುದರ ಮೂಲಕ ಸಮಬಲ ಕಾಯ್ದುಕೊಂಡರು. ತೀರ್ಪುಗಾರರು ಟೈ ಬ್ರೇಕರ್ ನಿಯಮ ಅಳವಡಿಸಿದಾಗ ಕೊಲ್ಲಿರ ತಂಡ ೨ ಗೋಲು ಹೊಡೆಯುವುದರ ಮೂಲಕ ಜಯಗಳಿಸಿತು. ಕಳ್ಳಿಚಂಡ ತಂಡ ಕೇವಲ ೧ ಗೋಲು ಹೊಡೆಯಿತು. ಕೊಲ್ಲಿರ ತಂಡದಲ್ಲಿ ಬಲ್ಲಣಮಾಡ ಮೊಣ್ಣಪ್ಪ, ಕಾಯಪಂಡ ಪ್ರತೀಕ್, ಕಳ್ಳಿಚಂಡ ತಂಡದಲ್ಲಿ ನೆರ್ಪಂಡ ಕಾರ್ತಿಕ್, ಚೇಂದAಡ ವರುಣ್ ಅತಿಥಿ ಆಟಗಾರರಾಗಿ ಪಾಲ್ಗೊಂಡಿದ್ದರು. ತೃತೀಯ ಸ್ಥಾನಕ್ಕಾಗಿ ನಡೆದ ಪಂದ್ಯಾಟದಲ್ಲಿ ಕುಂಜಿಲಗೇರಿ ಮುಕ್ಕಾಟಿರ ತಂಡವು ಮನೆಯಪಂಡ ತಂಡವನ್ನು ೩-೦ ಗೋಲುಗಳಿಂದ ಪರಾಭವಗೊಳಿಸಿ ಐದು ಸಾವಿರ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಈ ಪಂದ್ಯಾಟದಲ್ಲಿ ಒಟ್ಟು ೩೨ ಕುಟುಂಬಗಳು ಪಾಲ್ಗೊಂಡಿದ್ದವು.

ಕ್ವಾರ್ಟರ್ ಫೈನಲ್ ಪಂದ್ಯಾಟದಲ್ಲಿ ಕೊಲ್ಲಿರ ತಂಡ ಕಲಿಯಂಡ ತಂಡವನ್ನು ೩-೦ ಗೋಲುಗಳಿಂದ ಪರಾಭವಗೊಳಿಸಿತು. ಮುಕ್ಕಾಟಿರ (ಕುಂಜಿಲಗೇರಿ) ತಂಡವು ಮೂಕೊಂಡ ತಂಡವನ್ನು ೩-೨ ಗೋಲುಗಳಿಂದ ಟೈ ಬ್ರೇಕರ್‌ನಲ್ಲಿ ಮಣಿಸಿತು. ಮನೆಯಪಂಡ ತಂಡವು ಮಂಡೇಡ ತಂಡವನ್ನು ೧-೦ ಗೋಲಿನಿಂದ ಟೈ ಬ್ರೇಕರ್‌ನಲ್ಲಿ ಸೋಲಿಸಿತು. ಕಳ್ಳಿಚಂಡ ತಂಡವು ಕೊದೇಂಗಡ ತಂಡವನ್ನು ೩-೦ ಗೋಲುಗಳಿಂದ ಪರಾಭವಗೊಳಿಸಿತು.

ನಂತರ ನಡೆದ ಸೆಮಿಫೈನಲ್ಸ್ ಪಂದ್ಯಾಟದಲ್ಲಿ ಕೊಲ್ಲಿರ ತಂಡ ಮುಕ್ಕಾಟಿರ ತಂಡವನ್ನು ೩-೦ ಗೋಲುಗಳಿಂದ ಮಣಿಸಿತು. ಎರಡನೇ ಸೆಮಿಫೈನಲ್ಸ್ ಪಂದ್ಯಾಟದಲ್ಲಿ

(ಮೊದಲ ಪುಟದಿಂದ) ಕಳ್ಳಿಚಂಡ ತಂಡವು ಮನೆಯಪಂಡ ತಂಡವನ್ನು ೪-೧ ಗೋಲುಗಳಿಂದ ಪರಾಭವಗೊಳಿಸಿತು. ಪಂದ್ಯಾಟದ ತೀರ್ಪುಗಾರರಾಗಿ ಅಜಯ್ ಮತ್ತು ಗಣೇಶ್ ಕಾರ್ಯನಿರ್ವಹಿಸಿದರು. ಪಂದ್ಯಾಟದ ವೀಕ್ಷಕ ವಿವರಣೆಯನ್ನು ಮೂಕೊಂಡ ರೋಹಿತ್ ನೆರವೇರಿಸಿದರು.

ಪಂದ್ಯಾಟದಲ್ಲಿ ಕಳ್ಳಿಚಂಡ ಕಾರ್ತಿಕ್ ೬ ಗೋಲು ಗಳಿಸುವುದರ ಮೂಲಕ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ, ಬೊಳ್ಳಚೆಟ್ಟಿರ ತರುಣ್ ಉತ್ತಮ ಗೋಲ್ ಕೀಪರ್, ಕೊಲ್ಲಿರ ಲೇಖನ್ ಅಪ್ಪಚ್ಚು ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.

ಸಮಾರೋಪ: ಪ್ಲಾಂಟರ್ ಪಾಲೇಕಂಡ ಕುಮಾರ್ ಅಯ್ಯಪ್ಪ ಮಾತನಾಡಿ ಕೊಡವ ಕುಟುಂಬದಲ್ಲಿ ಹಾಕಿ, ಕ್ರಿಕೆಟ್ ಸೇರಿದಂತೆ ಇನ್ನಿತರ ಕ್ರೀಡೆಗಳನ್ನು ನಡೆಸಲಾಗುತ್ತಿದೆ. ಮೂಕೊಂಡ ಕುಟುಂಬದವರು ಫುಟ್ಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಕ್ರೀಡಾ ಸಂಚಾಲಕ ಮೂಕೊಂಡ ಶಶಿ ಸುಬ್ರಮಣಿ ಮಾತನಾಡಿ ಕುಟುಂಬ ಫುಟ್ಬಾಲ್ ಪಂದ್ಯಾಟಗಳು ನಿರಂತರವಾಗಿ ನಡೆಯಬೇಕು ಎಂಬ ಅಭಿಲಾಷೆ ಹೊಂದಿದ್ದು, ಮುಂದಿನ ಸಾಲಿನಲ್ಲಿ ಯಾವುದಾದರೊಂದು ಕುಟುಂಬ ಪಂದ್ಯಾಟ ನಡೆಸಲು ಉದ್ದೇಶಿಸಿದರೆ ಅವರಿಗೆ ಬಿಟ್ಟು ಕೊಡಲಾಗುವುದು. ಯಾರೂ ನಡೆಸಲು ಅಪೇಕ್ಷಿಸದೇ ಇದ್ದರೆ ತಮ್ಮ ಕುಟುಂಬದಿAದಲೇ ಪಂದ್ಯಾಟವನ್ನು ನಡೆಸಲಾಗುವುದು ಎಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಕುಟುಂಬದ ಅಧ್ಯಕ್ಷ ರಾಜಾ ಬೋಪಣ್ಣ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯರಾದ ಮೂಕೊಂಡ ಪಟ್ಟು ಅಯ್ಯಪ್ಪ ಉಪಸ್ಥಿತರಿದ್ದರು.