ಬೆಂಗಳೂರು, ಮೇ ೨೪: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಈಗಾಗಲೇ ಅಸ್ತಿತ್ವಕ್ಕೆ ಬಂದಿದ್ದು, ವಿಧಾನಸಭಾ ಅಧ್ಯಕ್ಷರಾಗಿ ಮಂಗಳೂರು ಭಾಗದ ಶಾಸಕ ಯು.ಟಿ ಖಾದರ್ ಆಯ್ಕೆಯಾಗಿದ್ದಾರೆ.

ನೂತನ ಸ್ಪೀಕರ್ ಸ್ಥಾನದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹಿರಿಯ ಕಾಂಗ್ರೆಸ್ ನಾಯಕರು ಹಿಂದೇಟು ಹಾಕುತ್ತಿದ್ದ ಹಿನ್ನೆಲೆಯಲ್ಲಿ ಖಾಯಂ ಸ್ಪೀಕರ್ ಆಯ್ಕೆ ತಡವಾಗಿತ್ತು. ಕೊನೆಗೆ ಯು.ಟಿ. ಖಾದರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಸ್ಪೀಕರ್ ಸ್ಥಾನಕ್ಕೆ ನೇಮಕ ಮಾಡಿದ್ದು, ಇಂದು ವಿಧಾನಸೌಧದಲ್ಲಿ ಹಂಗಾಮಿ ಸ್ಪೀಕರ್ ಆರ್.ವಿ.ದೇಶಪಾಂಡೆ ಅವರ ಸಮ್ಮುಖದಲ್ಲಿ ಆಯ್ಕೆ ನಡೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ ಅವರ ಹೆಸರನ್ನು ಸೂಚಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅನುಮೋದಿಸಿದರು. ಬಳಿಕ ಎಲ್ಲಾ ಶಾಸಕರುಗಳ ಒಪ್ಪಿಗೆಯೊಂದಿಗೆ ಯು.ಟಿ. ಖಾದರ್ ಅವರು ಅವಿರೋಧವಾಗಿ ಸ್ಪೀಕರ್ ಸ್ಥಾನಕ್ಕೆ ಆಯ್ಕೆಯಾಗಿರುವುದಾಗಿ ದೇಶಪಾಂಡೆ ಘೋಷಿಸಿದರು. ನಂತರ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ಪ್ರಮುಖ ಬಸವರಾಜ ಬೊಮ್ಮಾಯಿ ಅವರುಗಳು ಖಾದರ್ ಅವರನ್ನು ಸಭಾಧ್ಯಕ್ಷ ಪೀಠಕ್ಕೆ ಕರೆ ತಂದು ಅಭಿನಂದಿಸಿದರು. ದೇಶಪಾಂಡೆ ಅವರು ಖಾದರ್ ಅವರಿಗೆ ಶುಭಕೋರುವುದರೊಂದಿಗೆ ಸ್ಪೀಕರ್ ಸ್ಥಾನ ಬಿಟ್ಟುಕೊಟ್ಟರು.

ನಿರಾಕರಣೆಗೆ ಕಾರಣವೇನು?

ಈ ಹಿಂದೆ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುತ್ತಾರೆ ಎಂಬ ಕಳಂಕ ಅಂಟಿಕೊAಡಿತ್ತು. ನಂತರ ಸಿದ್ದರಾಮಯ್ಯ, ಯಡಿಯೂರಪ್ಪ ಭೇಟಿ ನೀಡಿ ಆ ಕಳಂಕ ದೂರವಾಗಿದೆ. ಆದರೆ ಇದೀಗ ಸ್ಪೀಕರ್ ಆದವರು ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬ ನಂಬಿಕೆ ಶಾಸಕರಲ್ಲಿ ಬಲವಾಗಿ ಬೇರೂರಿದ್ದರಿಂದ ಕಾಂಗ್ರೆಸ್‌ನ ಹಿರಿಯ ನಾಯಕರು ಸ್ಪೀಕರ್ ಸ್ಥಾನ ಅಲಂಕರಿಸಲು ನಿರಾಕರಿಸಿದ್ದರು. ಇದಕ್ಕೆ ಕಾರಣ ೨೦೦೪ರಿಂದ ಸ್ಪೀಕರ್ ಸ್ಥಾನ ಅಲಂಕರಿಸಿದವರು ತಮ್ಮ ರಾಜಕೀಯ ಜೀವನದಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವುದು ಸ್ಪೀಕರ್ ಆಗಿದ್ದ ನಾಯಕರು ನಿರಂತರವಾಗಿ ಚುನಾವಣೆಯಲ್ಲಿ ಸೋತಿದ್ದು, ಅವರ ರಾಜಕೀಯ ಜೀವನವೂ ಕೊನೆಗೊಂಡಿರುವುದು.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಗೆಲುವಿನ ನಿರೀಕ್ಷೆ ಹೊಂದಿದ್ದ ಕಾಗೇರಿ ಅವರ ಸೋಲು ಪಕ್ಷಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ಸ್ವತಃ ಕಾಗೇರಿ ಅವರೂ ಇದನ್ನು ನಿರೀಕ್ಷಿಸಿರಲಿಲ್ಲ. ಪ್ರಬಲ ನಾಯಕರಾಗಿದ್ದ ಅವರಿಗೆ ತಮ್ಮ ಶಕ್ತಿಯ ಮೇಲೆಯೇ ಪ್ರಶ್ನೆಯನ್ನು ಹುಟ್ಟುಹಾಕುವಂತೆ ಮಾಡಿದೆ.

೨೦೦೪ರಲ್ಲಿ ಎಸ್. ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಕೆ.ಆರ್.ಪೇಟೆ ಕ್ಷೇತ್ರದ ಶಾಸಕ ಕೃಷ್ಣ ಅವರು ೨೦೦೮ರ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರು. ೨೦೧೩ರಲ್ಲಿ ಸ್ಪೀಕರ್ ಹುದ್ದೆ ಅಲಂಕರಿಸಿದ್ದ ಹಿರಿಯ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಅವರು ೨೦೧೮ರ ಚುನಾವಣೆಯಲ್ಲಿ ಸೋಲು ಕಂಡರು. ಐದು ಬಾರಿ ಆಯ್ಕೆಯಾಗಿದ್ದ ಹಿರಿಯ ಶಾಸಕ ಕೆ. ಬಿ. ಕೋಳಿವಾಡ ೨೦೧೬ರಲ್ಲಿ ಸ್ಪೀಕರ್ ಆಗಿದ್ದರು. ಅವರು ಸಹ ೨೦೧೮ರಲ್ಲಿ ಚುನಾವಣೆಯಲ್ಲಿ ಪರಭಾವಗೊಂಡರು. ನಂತರದ ೨೦೧೯ರ ಉಪ ಚುನಾವಣೆಯಲ್ಲೂ ಕೋಳಿವಾಡ ಸೋಲು ಕಂಡರು.

೨೦೧೮ರಲ್ಲಿ ಕಾಂಗ್ರೆಸ್ - ಜೆಡಿಎಸ್ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಸಹ ಈ ಬಾರಿ ಚುನಾವಣೆಯಲ್ಲಿ ಸೋತಿದ್ದಾರೆ. ಅಲ್ಲದೇ, ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಖಚಿತ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಉತ್ತಮ ಜನಬೆಂಬಲವೂ ವ್ಯಕ್ತವಾಗಿತ್ತು. ಆದರೆ ಚುನಾವಣೆಯಲ್ಲಿ ತೀವ್ರ ಸೋಲು ಅನುಭವಿಸಿದರು. ಬಿಜೆಪಿಯ ಮತ್ತೊಬ್ಬ ಹಿರಿಯ ನಾಯಕ, ಸ್ಪೀಕರ್ ಆಗಿದ್ದ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಕೂಡ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ.

ಈ ಸೋಲುಗಳ ಹಿನ್ನೆಲೆಯಲ್ಲಿ ಸ್ಪೀಕರ್ ಹುದ್ದೆ ಅಲಂಕರಿಸಲು ಕಾಂಗ್ರೆಸ್ ಹಿರಿಯ ನಾಯಕರು ನಿರಾಕರಿಸಿದ್ದರಿಂದಾಗಿ ಸ್ಪೀಕರ್ ಆಯ್ಕೆ ವಿಳಂಬವಾಗಿತ್ತು. ಹಿರಿಯ ನಾಯಕ ಡಾ. ಜಿ. ಪರಮೇಶ್ವರ ಅವರನ್ನು ಸ್ಪೀಕರ್ ಹುದ್ದೆಗೆ ಯೋಜಿಸಲಾಗಿತ್ತು. ಆದರೆ, ಈ ಪ್ರಸ್ತಾಪವನ್ನು ಅವರು ತಿರಸ್ಕರಿಸಿ ಸಂಪುಟ ಸಚಿವರಾದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ನಂತರ ಟಿ.ಬಿ. ಜಯಚಂದ್ರ, ಎಚ್.ಕೆ. ಪಾಟೀಲ್, ಡಾ ಹೆಚ್.ಸಿ. ಮಹದೇವಪ್ಪ , ವೈ.ಎನ್. ಗೋಪಾಲ ಕೃಷ್ಣ ಮತ್ತು ತನ್ವೀರ್ ಸೇಠ್ ಅವರಲ್ಲಿ ಯಾರಿಗಾದರೂ ಸ್ಪೀಕರ್ ಹುದ್ದೆ ನೀಡಲು ಪಕ್ಷದ ಹೈಕಮಾಂಡ್ ಯೋಜಿಸಿತ್ತು. ಆದರೆ, ಕೊನೆಗೆ ಯು.ಟಿ. ಖಾದರ್ ಅವರಿಗೆ ಸ್ಪೀಕರ್ ಪಟ್ಟ ಒಲಿದು ಬಂದಿದೆ.

-ಕೋವರ್‌ಕೊಲ್ಲಿ ಇಂದ್ರೇಶ್